ಕೇವಲ ಬರ ವೀಕ್ಷಣೆಯಲ್ಲ; ರೈತರ ಜೀವನ ದರ್ಶನ: ಮಳೆ ಬಂದು ಎಷ್ಟು ದಿನ ಆಯಿತು? ಯಾವಾಗ ಬಿತ್ತನೆ ಮಾಡಿದ್ದು? ರೈತನಿಂದ ಮಾಹಿತಿ ಪಡೆದ ಸಿಎಂ; Video
"ಬರ ಬಂದಿದೆ, ಬೆಳೆ ಹಾಳಾಗಿದೆ ಎಂದು ಯೋಚನೆ ಮಾಡಬೇಡಿ, ನಾನು ಹಾಗೂ ನಮ್ಮ ಸರ್ಕಾರ ನಿಮ್ಮ ಜೊತೆಗಿದೆ" ಎಂದು ದೈರ್ಯ ತುಂಬಿದರು. ಜೊತೆಗೆ "ಗ್ಯಾರಂಟಿ ಯೋಜನೆಗಳು ತಲುಪುತ್ತಿವೆಯೇ? ನಿಮಗೆ" ಎಂದು ಸಿಎಂ ಕೇಳಲು ಮರೆಯಲಿಲ್ಲ.

ಬಾಗಲಕೋಟೆ: ಮಳೆ ಬಂದು ಎಷ್ಟು ದಿನ ಆಯಿತು? ಯಾವಾಗ ಬಿತ್ತನೆ ಮಾಡಿದ್ದು? ಎಷ್ಟು ಖರ್ಚಾಯಿತು ಎಂದು ಬಾಗಲಕೋಟೆಯ ಹುನಗುಂದದ ರೈತ ನಂದೆಪ್ಪ ಸಂಗಪ್ಪ ಬಾರಕೇರ ಅವರಿಂದ ಸಿಎಂ ಡಿ ಕೆ ಶಿವಕುಮಾರ್ ಅವರು ಪ್ರತಿಯೊಂದು ಮಾಹಿತಿಯನ್ನೂ ಪಡೆದರು.
ಯುವ ರೈತನ ತಂದೆ- ತಾಯಿಗೆ "ಬರ ಬಂದಿದೆ, ಬೆಳೆ ಹಾಳಾಗಿದೆ ಎಂದು ಯೋಚನೆ ಮಾಡಬೇಡಿ, ನಾನು ಹಾಗೂ ನಮ್ಮ ಸರ್ಕಾರ ನಿಮ್ಮ ಜೊತೆಗಿದೆ" ಎಂದು ದೈರ್ಯ ತುಂಬಿದರು. ಜೊತೆಗೆ "ಗ್ಯಾರಂಟಿ ಯೋಜನೆಗಳು ತಲುಪುತ್ತಿವೆಯೇ? ನಿಮಗೆ" ಎಂದು ಸಿಎಂ ಕೇಳಲು ಮರೆಯಲಿಲ್ಲ.
ಬಾಗಲಕೋಟೆ ಜಿಲ್ಲೆಗೆ ಬರ ವೀಕ್ಷಣೆಗೆ ಎಂದು ಶುಕ್ರವಾರ ಬಂದಿದ್ದ ಸಿಎಂ ಡಿ ಕೆ ಶಿವಕುಮಾರ್ ಅವರು ಹಾಗೂ ರೈತ ಕುಟುಂಬದ ನಡುವಿನ ಸಂಭಾಷಣೆ ಹೀಗಿತ್ತು. ಈ ವೇಳೆ ರೈತ ನಂದೆಪ್ಪ ಅವರು, "ಸರ ಈ ವರ್ಷ ಒಳ್ಳೆ ಮಳೆ ಬರತೈತ್ರಿ ಅಂತ ಉಳ್ಳಾಗಡ್ಡಿ, ಮೆಣಸಿನಕಾಯಿ ಬೆಳೆ ಹಾಕಿದ್ದೆ. ಯಾಕೋ ನಸೀಬು ಸರಿ ಇಲ್ಲಾರೀ" ಎಂದು ಬೇಸರಿಸಿದಾಗ, ರೈತನ ಹೆಗಲ ಮೇಲೆ "ನಾನಿದ್ದೇನೆ" ಎಂದು ಆತ್ಮವಿಶ್ವಾಸ ತುಂಬಿದರು.
"ನಾನು ಕೇವಲ ಬರ ವೀಕ್ಷಣೆ ಮಾಡುತ್ತಿಲ್ಲ. ಉತ್ತರ ಕರ್ನಾಟಕ ಭಾಗದ ರೈತರ ಜೀವನ ದರ್ಶನ ಮಾಡುತ್ತಿದ್ದೇನೆ. ರೈತರ ಕಷ್ಟಗಳಿಗೆ ಸ್ಪಂದಿಸುವುದೇ ನನ್ನ ಮೊದಲ ಆದ್ಯತೆ" ಎಂದು ಆತ್ಮಸ್ಥೈರ್ಯ ತುಂಬಿದರು.
ನಂತರ ಪಕ್ಕದಲ್ಲೇ ಇದ್ದ ಹನುಮಂತ ಸಂಗಪ್ಪ ಹುನಗುಂದ ಅವರ ಜಮೀನಿಗೆ ಭೇಟಿ ನೀಡಿ ಸೂರ್ಯಕಾಂತಿ ಬೆಳೆ ವೀಕ್ಷಣೆ ಮಾಡಿ ಬರ ಪರಿಣಾಮದ ಬಗ್ಗೆ ಪರಿಶೀಲನೆ ನಡೆಸಿದರು.
ಕೂಡಲಸಂಗಮಕ್ಕೆ ಆಗಮಿಸುವ ಮೊದಲು ಜಿಲ್ಲೆಯ ಬರ ಪರಿಸ್ಥಿತಿಯ ಬಗ್ಗೆ ವೈಮಾನಿಕ ವೀಕ್ಷಣೆ ಮಾಡಿಕೊಂಡೆ ಬಂದಿದ್ದರು. ತದ ನಂತರ ಗುಳೇದಗುಡ್ಡ ತಾಲ್ಲೂಕಿನ ಪದ್ಮಶ್ರೀ ಗಣಪತಿ ಪವಾರ ಅವರ ಜಮೀನಿಗೆ ಭೇಟಿ ನೀಡಿ ಸೂರ್ಯಕಾಂತಿ ತೆನೆಯನ್ನು ಕೈಯಲ್ಲಿ ಹಿಡಿದು ಕಾಳು ಎಷ್ಟು ಕಟ್ಟಿದೆ ಎಂದು ಸ್ವತಃ ಪರೀಕ್ಷಿಸಿದರು. ಶಾಸಕ ಭೀಮಸೇನ ಚಿಮ್ಮನಕಟ್ಟಿ ಸೂರ್ಯಕಾಂತಿ ಬೆಳೆಯ ಬಗ್ಗೆ ವಿವರಣೆ ನೀಡಿದರು.
ಕ್ಷೇತ್ರದಾದ್ಯಂತ ರಸ್ತೆಗುಂಟ ಸಾಗಿದ ಸಿಎಂ ಜಮೀನುಗಳನ್ನು ವೀಕ್ಷಣೆ ಮಾಡಿದರು. ಮಳೆಯಿಲ್ಲದೇ ಸೊರಗಿ ಹೋದ ಬೆಳೆಗಳ ಬಗ್ಗೆ ಮಾಹಿತಿ ಪಡೆದರು. ಎಷ್ಟು ಅಡಿಗೆ ಕೊಳವೆಬಾವಿಯಲ್ಲಿ ನೀರು ದೊರೆಯಲಿದೆ ಎಂದು ಕೇಳಿದರು.
ಇದಾದ ನಂತರ ಶಿರೂರಿನ ಅಂದಾನೆಪ್ಪ ಕೋಟಿ ಅವರ ಜಮೀನಿಗೆ ಭೇಟಿ ನೀಡಿ ಮಳೆ ಇಲ್ಲದೇ ಮೊಣಕಾಲುದ್ದ ಬೆಳೆದು ನಿಂತಿದ್ದ ತೊಗರಿ ಬೆಳೆ ನೋಡಿ, "ಇಷ್ಟೊತ್ತಿಗಾಗಲೇ ತಲೆ ಮಟ್ಟಕ್ಕೆ ತೊಗರಿ ಗಿಡಗಳು ಬೆಳೆದು ನಿಂತಿರಬೇಕಿತ್ತು. ಆದರೆ ಪರಿಸ್ಥಿತಿ ನೋಡಿ ಹೇಗಿದೆ" ಎಂದು ನೆರೆದಿದ್ದ ಮಾಧ್ಯಮದವರಿಗೆ ತೋರಿಸಿದರು.
ಜಮೀನಿನ ಬಳಿ ನೆರೆದಿದ್ದ ರೈತರ ಅಹವಾಲು ಪಡೆದು, "ಆಲಮಟ್ಟಿಯಿಂದ ಜಿಲ್ಲೆಯ ಹೆಚ್ಚಿನ ಭಾಗದ ಕೆರೆಗಳನ್ನು ತುಂಬಿಸಲು ಕ್ರಮವಹಿಸಲಾಗುವುದು. ಶಿರೂರು ಏತ ನೀರಾವರಿ ಯೋಜನೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಕ್ರಮವಹಿಸಲಾಗುವುದು" ಎಂದು ಭರವಸೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



