ಎಂಎಂ ಹಿಲ್ಸ್ ವನ್ಯಜೀವಿ ಅಭಯಾರಣ್ಯದಲ್ಲಿ ಜಿಂಕೆ ಬೇಟೆ; ಬೇಟೆಗಾರರು ಪರಾರಿ
ಸೆಪ್ಟೆಂಬರ್ 1ರಂದು ರಾತ್ರಿ 11.30ರ ಸುಮಾರಿಗೆ ಉಡುತೊರೆಹಳ್ಳಿ ಜಲಾಶಯದ ಡ್ಯಾಂ ಗೇಟ್ ಸಮೀಪದ ಹನೂರು ವನ್ಯಜೀವಿ ಉಪವಿಭಾಗದ ಹನೂರು ಬಫರ್ ರೇಂಜ್‌ನಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು: ಕಾವೇರಿ ವನ್ಯಜೀವಿ ಅಭಯಾರಣ್ಯದ ಹನೂರು ಗುಂಡಿನ ದಾಳಿ ಘಟನೆ ನಡೆದ ಸುಮಾರು ಮೂರು ವಾರಗಳ ಬಳಿಕ, ಎಂಎಂ ಹಿಲ್ಸ್ ವನ್ಯಜೀವಿ ಅಭಯಾರಣ್ಯದಲ್ಲಿ ಮತ್ತೊಂದು ಬೇಟೆ ಪ್ರಕರಣ ಬೆಳಕಿಗೆ ಬಂದಿದ್ದು, ಬೇಟೆಗಾರರನ್ನು ಬಂಧಿಸುವಲ್ಲಿ ಅರಣ್ಯಾಧಿಕಾರಿಗಳು ವಿಫಲರಾಗಿದ್ದಾರೆ.
ಸೆಪ್ಟೆಂಬರ್ 1ರಂದು ರಾತ್ರಿ 11.30ರ ಸುಮಾರಿಗೆ ಉಡುತೊರೆಹಳ್ಳಿ ಜಲಾಶಯದ ಡ್ಯಾಂ ಗೇಟ್ ಸಮೀಪದ ಹನೂರು ವನ್ಯಜೀವಿ ಉಪವಿಭಾಗದ ಹನೂರು ಬಫರ್ ರೇಂಜ್‌ನಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಸ್ತು ತಿರುಗುತ್ತಿದ್ದ ವೇಳೆ ಶಬ್ದ ಕೇಳಿದ್ದಾಗಿ ಬೇಟೆ ತಡೆ ಶಿಬಿರದ ಸಿಬ್ಬಂದಿ ಮಾಹಿತಿ ನೀಡಿದರು. ಅವರು ಶಬ್ದ ಬಂದ ಸ್ಥಳಕ್ಕೆ ತೆರಳಿದಾಗ, ನಾಲ್ವರು ವ್ಯಕ್ತಿಗಳು ಚೀಲಗಳು ಹಾಗೂ ತಲೆಯ ಮೇಲೆ ಮೂಟೆಗಳನ್ನು ಹೊತ್ತುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಅವರನ್ನು ಹಿಡಿಯಲು ಸಿಬ್ಬಂದಿ ಪ್ರಯತ್ನಿಸಿದರಾದರೂ, ಅವರು ತಮ್ಮ ವಸ್ತುಗಳನ್ನು ಅಲ್ಲಿಯೇ ಬಿಟ್ಟು ಪರಾರಿಯಾದರು. ಮೂಟೆಗಳನ್ನು ತೆರೆದು ನೋಡಿದಾಗ, ಸಾಂಬಾರ್ ಜಿಂಕೆಯನ್ನು ತುಂಡುಗಳಾಗಿ ಕತ್ತರಿಸಿರುವುದು ಪತ್ತೆಯಾಯಿತು. ಅನುಸೂಚಿ-1ರ ಪ್ರಭೇದಕ್ಕೆ ಸೇರಿದ ಪ್ರಾಣಿಯ ತಲೆಯೂ ಪತ್ತೆಯಾಗಿದೆ ಎಂದು ಹಿರಿಯ ಅರಣ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೇಟೆಗಾರರನ್ನು ಬಂಧಿಸಲು ಸಾಧ್ಯವಾಗಿಲ್ಲ ಎಂಬುದನ್ನು ಅಧಿಕಾರಿಗಳು ಹೇಳುತ್ತಾರೆ. ಬೇಟೆಗಾರರ ಗುರುತು ಪತ್ತೆಹಚ್ಚಲು ಪ್ರಯತ್ನಿಸಲಾಗುತ್ತಿದೆ. ಪ್ರಾಥಮಿಕ ತನಿಖೆಯಲ್ಲಿ ಪ್ರಾಣಿಯನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂಬುದು ತಿಳಿದುಬಂದಿದೆ. ಅವರು ಸ್ಥಳದಲ್ಲೇ ಬಿಟ್ಟುಹೋದ ಶಸ್ತ್ರಾಸ್ತ್ರಗಳನ್ನೂ ವಶಕ್ಕೆ ಪಡೆಯಲಾಗಿದೆ. ವನ್ಯಜೀವಿ ಅಪರಾಧ ವರದಿ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಅರಣ್ಯ ಇಲಾಖೆಯ ಶ್ವಾನದಳವನ್ನೂ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ವನ್ಯಜೀವಿಗಳ ಬೇಟೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇಂತಹ ಹಲವು ಪ್ರಕರಣಗಳು ಬೆಳಕಿಗೆ ಬರುತ್ತಿವೆ ಎಂದು ಅಧಿಕಾರಿ ತಿಳಿಸಿದ್ದಾರೆ. ಹನೂರು ಘಟನೆ ಬಳಿಕ ಇತರ ಅರಣ್ಯ ವಿಭಾಗಗಳಲ್ಲೂ ಗಸ್ತು ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ.
ಚಾಮರಾಜನಗರ ಜಿಲ್ಲಾಧಿಕಾರಿಗಳು ತನಿಖಾ ವರದಿಯನ್ನು ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿದ್ದು, ಅದನ್ನು ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವರೊಂದಿಗೆ ಹಂಚಿಕೊಳ್ಳಬೇಕಿದೆ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




