'ನಿಂಗೇನ್ ಅರ್ಜೆಂಟ್', BJP ಪ್ರತಿಭಟನೆ ವೇಳೆ ಹೈಡ್ರಾಮಾ; ದ್ವಿಚಕ್ರ ವಾಹನ ಸವಾರನ ಹೆಲ್ಮೆಟ್ ಬಡಿದು, ಟೈರ್ ಗಾಳಿ ತೆಗೆದ ಮಾಜಿ ಶಾಸಕ! Video
ಇತ್ತೀಚೆಗೆ ರಾಜ್ಯ ಸರ್ಕಾರ ಬರ ಪೀಡಿತ ಪ್ರದೇಶಗಳ ಪಟ್ಟಿ ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ ಕಲಬುರಗಿಯ ಸೇಡಂ ಅನ್ನು ಕೈ ಬಿಡಲಾಗಿತ್ತು.

ಕಲಬುರಗಿ: ಕಲಬುರಗಿಯಲ್ಲಿ ನಡೆಯುತ್ತಿದ್ದ ಬಿಜೆಪಿ ಪ್ರತಿಭಟನೆ ವೇಳೆ ದೊಡ್ಡ ಹೈಡ್ರಾಮಾವೇ ನಡೆದಿದ್ದು, ಪ್ರತಿಭಟನೆ ವೇಳೆ ಅಡ್ಡ ಬಂದ ಕಾರಣಕ್ಕೇ ಮಾಜಿ ಶಾಸಕ ರಾಜ್ ಕುಮಾರ್ ಪಾಟೀಲ್ ತೆಲ್ಕೂರ್ ದ್ವಿಚಕ್ರ ವಾಹನ ಸವಾರನೊಬ್ಬನ ವಿರುದ್ಧ ಕೆಂಡಾಮಂಡಲವಾದ ಘಟನೆ ನಡೆದಿದೆ.
ಇತ್ತೀಚೆಗೆ ರಾಜ್ಯ ಸರ್ಕಾರ ಬರ ಪೀಡಿತ ಪ್ರದೇಶಗಳ ಪಟ್ಟಿ ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ ಕಲಬುರಗಿಯ ಸೇಡಂ ಅನ್ನು ಕೈ ಬಿಡಲಾಗಿತ್ತು. ಇದೇ ವಿಚಾರವಾಗಿ ಜಿಲ್ಲೆಯ ಬಿಜೆಪಿ ನಾಯಕರು ಪ್ರತಿಭಟನೆ ಹಮ್ಮಿಕೊಂಡು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆ ನಡೆಯುತ್ತಿದ್ದ ವೇಳೆ ಬೈಕರ್‌ವೊಬ್ಬರು ಪ್ರತಿಭಟನಾಕಾರರ ನಡುವಿನಿಂದ ವಾಹನ ಚಲಾಯಿಸಿಕೊಂಡು ಮುಂದೆ ಸಾಗಲು ಯತ್ನಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಅವರನ್ನು ತಡೆದ ಮಾಜಿ ಶಾಸಕ ತೆಲ್ಕೂರ್ ಹಾಗೂ ದ್ವಿಚಕ್ರ ವಾಹನ ಸವಾರನ ನಡುವೆ ಮಾತಿನ ಚಕಮಕಿ ನಡೆದಿದೆ.
'ನಿಂಗೇನ್ ಅರ್ಜೆಂಟ್' ಎಂದು ಹೆಲ್ಮೆಟ್ ಒಡೆದು ಹಾಕಿದ 'ನಾಯಕ'
ಪ್ರತಿಭಟನೆ ನಡೆಯುತ್ತಿದ್ದ ಸ್ಥಳದ ಮೂಲಕ ದ್ವಿಚಕ್ರ ವಾಹನದಲ್ಲಿ ತೆರಳಲು ವ್ಯಕ್ತಿಯೊಬ್ಬ ಯತ್ನಿಸಿದ್ದು, ಇದರಿಂದ ಆಕ್ರೋಶಗೊಂಡ ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್ ದ್ವಿಚಕ್ರ ವಾಹನ ಸವಾರನ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.
ವಿವಾದ ತೀವ್ರಗೊಂಡ ಸಂದರ್ಭದಲ್ಲಿ ತೆಲ್ಕೂರ್ ಅವರು ಸವಾರನ ಹೆಲ್ಮೆಟ್ ತೆಗೆದು ನೆಲಕ್ಕೆ ಬಡಿದು ಹೊಡೆದು ಹಾಕಿದ್ದಾರೆ. ಮಾತ್ರವಲ್ಲದೇ ದ್ವಿಚಕ್ರವಾಹನದ ಟೈರ್ ನ ಗಾಳಿ ತೆಗೆಯಲೆತ್ನಿಸಿದ್ದಾರೆ. ಇದರಿಂದ ಪ್ರತಿಭಟನಾ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಘಟನೆ ಗಮನಕ್ಕೆ ಬರುತ್ತಿದ್ದಂತೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಬಳಿಕ ದ್ವಿಚಕ್ರ ವಾಹನ ಸವಾರನನ್ನು ಪ್ರತಿಭಟನಾ ಸ್ಥಳದಿಂದ ದೂರ ಕಳುಹಿಸಿ, ಯಾವುದೇ ಹೆಚ್ಚಿನ ಗಲಾಟೆ ನಡೆಯದಂತೆ ಕ್ರಮ ಕೈಗೊಂಡರು.
ಘಟನೆಗೆ ಸಂಬಂಧಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸಾಧ್ಯತೆಯಿದ್ದು, ಮಾಜಿ ಶಾಸಕರ ವರ್ತನೆ ಕುರಿತು ಚರ್ಚೆ ಆರಂಭವಾಗಿದೆ. ಘಟನೆಗೆ ಕಾರಣವಾದ ನಿಖರ ಪರಿಸ್ಥಿತಿ ಹಾಗೂ ಈ ಸಂಬಂಧ ಯಾವುದೇ ದೂರು ದಾಖಲಾಗಿದೆಯೇ ಎಂಬ ಬಗ್ಗೆ ತಕ್ಷಣಕ್ಕೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



