ರಾಜ್ಯ

NCIB ಅಧಿಕಾರಿ ಸೋಗಿನಲ್ಲಿ ವಂಚನೆ; 8 ರಾಜ್ಯಗಳ ಪೊಲೀಸರ ನಿದ್ದೆಗೆಡಿಸಿದ್ದ ಆರೋಪಿ ಕೇರಳದಲ್ಲಿ ಕೊನೆಗೂ ಅರೆಸ್ಟ್..!

ಜಾಮೀನು ಪಡೆದುಕೊಂಡ ಬಳಿಕ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಈತ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಎಂದು ತಿಳಿಸಿದ್ದಾರೆ.

NCIB ಅಧಿಕಾರಿ ಸೋಗಿನಲ್ಲಿ ವಂಚನೆ; 8 ರಾಜ್ಯಗಳ ಪೊಲೀಸರ ನಿದ್ದೆಗೆಡಿಸಿದ್ದ ಆರೋಪಿ ಕೇರಳದಲ್ಲಿ ಕೊನೆಗೂ ಅರೆಸ್ಟ್..!
ಬಂಧಿತ ಆರೋಪಿ ಸ್ಯಾಮ್ ಪೀಟರ್
Published On :

ಮಂಗಳೂರು: ನ್ಯಾಷನಲ್ ಕ್ರೈಮ್ ಇನ್ವೆಸ್ಟಿಗೇಷನ್ ಬ್ಯೂರೋ (NCIB) ಸಂಸ್ಥೆಯ ಹಿರಿಯ ಅಧಿಕಾರಿ ಮತ್ತು ನಿರ್ದೇಶಕ ಎಂದು ಹೇಳಿಕೊಂಡು ಕೋಟ್ಯಂತರ ರೂಪಾಯಿ ವಂಚಿಸಿ, ಆಂತರಿಕ ಭದ್ರತೆಗೆ ಸವಾಲಾಗಿದ್ದ ನಕಲಿ ಅಧಿಕಾರಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಕೇರಳದ ಕಣ್ಣೂರಿನಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಸ್ಯಾಮ್ ಪೀಟರ್ (64) ಎಂದು ಗುರ್ತಿಸಲಾಗಿದೆ. ಈತ ಕಳೆದ 25 ವರ್ಷಗಳಿಂದ ತಲೆಮರೆಸಿಕೊಂಡಿದ್ದು, ಸುಮಾರು 8 ರಾಜ್ಯಗಳಲ್ಲಿ 17 ಕ್ಕೂ ಹೆಚ್ಚು ವಂಚನೆ ಮತ್ತು ಸುಲಿಗೆ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಆರೋಪಿಯಾಗಿದ್ದಾನೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು ಈ ಕುರಿತು ಮಾಹಿತಿ ನೀಡಿದ್ದು, ಆರೋಪಿ ಸ್ಯಾಮ್ ಪೀಟರ್ ಅಲಿಯಾಸ್ ಡ್ಯಾನಿ ತರಕ್ಕನ್ ಅಲಿಯಾಸ್ ಆಂಥೋನಿನನ್ನು ಸೋಮವಾರ ರಾತ್ರಿ ಕೇರಳದ ಕಣ್ಣೂರಿನಲ್ಲಿ ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ಜಾಮೀನು ಪಡೆದುಕೊಂಡ ಬಳಿಕ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಈತ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಎಂದು ತಿಳಿಸಿದ್ದಾರೆ.

ಸ್ಯಾಮ್ ಪೀಟರ್‌ನನ್ನು 2019ರಲ್ಲಿ ಮಂಗಳೂರು ಪೂರ್ವ ಠಾಣೆ ಪೊಲೀಸರು ಮೊದಲ ಬಾರಿಗೆ ಬಂಧಿಸಿದ್ದರು. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯ ಹಿರಿಯ ಅಧಿಕಾರಿಯಂತೆ ನಟಿಸಿ, ಹಣಕಾಸು ವಿವಾದಗಳು, ಬ್ಯಾಂಕ್ ವಂಚನೆ ಹಾಗೂ ತೆರಿಗೆಗೆ ಸಂಬಂಧಿಸಿದ ಪ್ರಕರಣಗಳನ್ನು ಇತ್ಯರ್ಥಪಡಿಸುವುದಾಗಿ ನಂಬಿಸಿ ಜನರಿಂದ ಹಣ ಪಡೆದು ಸುಲಿಗೆ ಮಾಡುತ್ತಿದ್ದ ಆರೋಪ ಆತನ ಮೇಲಿತ್ತು.

ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಆತ 2023ರ ಸೆಪ್ಟೆಂಬರ್ ಬಳಿಕ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆತನನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಅತ್ಯುತ್ತಮ ಕಾರ್ಯ ನಿರ್ವಹಿಸಿದ್ದಾರೆ,” ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದಾರೆ.

ಆರೋಪಿ ಪದೇಪದೆ ತನ್ನ ಗುರುತು ಬದಲಾಯಿಸಿಕೊಂಡು ವಿವಿಧ ರಾಜ್ಯಗಳಿಗೆ ತೆರಳಿ ಪೊಲೀಸರಿಂದ ತಪ್ಪಿಸಿಕೊಳ್ಳುತ್ತಿದ್ದ ಕುಖ್ಯಾತ ಅಪರಾಧಿ ಎಂದು ವಿವರಿಸಿದ್ದಾರೆ.

ಹಲವು ಹೆಸರಿನಲ್ಲಿ ವಂಚನೆ

ಪೊಲೀಸರ ಪ್ರಕಾರ, ಆರೋಪಿ ರಾಹುಲ್ ಪೀಟರ್, ರಾಜೇಶ್ ರಾಬಿನ್ಸನ್, ರಾಯ್ ಜೇಕಬ್, ರಾಬಿನ್ ರಿಚರ್ಡ್ಸನ್, ಆಂಥೋನಿ ಫ್ರಾನ್ಸಿಸ್, ಶರೋನ್ ಫ್ರಾನ್ಸಿಸ್ ಹಾಗೂ ಡ್ಯಾನಿ ಥರಕ್ಕನ್ ಸೇರಿದಂತೆ ಹಲವು ಹೆಸರುಗಳನ್ನು ಬಳಸುತ್ತಿದ್ದ. ವಿವಿಧ ಪ್ರದೇಶಗಳಲ್ಲಿ ಅಪರಾಧ ಎಸಗಿದ ಬಳಿಕ ಹೊಸ ಗುರುತಿನೊಂದಿಗೆ ಕಾಣಿಸಿಕೊಳ್ಳುತ್ತಿದ್ದ.

ಪೊಲೀಸ್ ದಾಖಲೆಗಳ ಪ್ರಕಾರ, ಮಂಗಳೂರು, ಉಳ್ಳಾಲ, ಕೊಣಾಜೆ, ಉಡುಪಿ, ಚಿಕ್ಕಬಳ್ಳಾಪುರ, ಕುಶಾಲನಗರ ಹಾಗೂ ಬೆಂಗಳೂರಿನಲ್ಲಿ ವಂಚನೆ, ನಕಲಿ ಗುರುತು ಹಾಗೂ ಸುಲಿಗೆಗೆ ಸಂಬಂಧಿಸಿದ ಸುಮಾರು 17 ಕ್ರಿಮಿನಲ್ ಪ್ರಕರಣಗಳು ಆತನ ವಿರುದ್ಧ ದಾಖಲಾಗಿವೆ.

ಇದಲ್ಲದೆ ಬಿಹಾರ, ತಮಿಳುನಾಡು, ಮಹಾರಾಷ್ಟ್ರ, ಉತ್ತರ ಪ್ರದೇಶ, ಛತ್ತೀಸ್‌ಗಢ, ಜಾರ್ಖಂಡ್ ಹಾಗೂ ಮಧ್ಯಪ್ರದೇಶದಲ್ಲೂ ಆತನ ವಿರುದ್ಧ ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

2001ರಲ್ಲೇ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್

ಆರೋಪಿ ಬಳಸಿದ್ದ ಒಂದು ಹೆಸರಿನ ಆಧಾರದ ಮೇಲೆ 2001ರಲ್ಲಿ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಕೂಡ ಹೊರಡಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಆತನ ಹಿಂದಿನ ಬಂಧನದ ಬಳಿಕ ಆ ನೋಟಿಸ್‌ ಅನ್ನು ಮುಚ್ಚಲಾಗಿತ್ತು. ಅದಾದ ಬಳಿಕವೂ ಆರೋಪಿ ತನ್ನ ವಂಚನೆ ಕೃತ್ಯಗಳನ್ನು ಮುಂದುವರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಸ್ಯಾಮ್ ಪೀಟರ್‌ನನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಮಂಗಳೂರು ಪೂರ್ವ ಠಾಣೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.