ಮಹದೇಶ್ವರ ಬೆಟ್ಟ: ಬಾಲಕನ ಬಲಿ ಪಡೆದಿದ್ದ ಚಿರತೆ ಕೊನೆಗೂ ಸೆರೆ; 14 ದಿನಗಳ ಕಾರ್ಯಾಚರಣೆ ಬಳಿಕ ಅರಣ್ಯ ಇಲಾಖೆ ಯಶಸ್ವಿ!
ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ನಾಗಮಲೆ ಸುತ್ತಮುತ್ತ ಹಲವೆಡೆ ಬೋನುಗಳನ್ನು ಅಳವಡಿಸಿತ್ತು. ಅಲ್ಲದೆ, ಪ್ರದೇಶದಲ್ಲಿ ನಿಗಾವಹಿಸಲು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿ ಶೋಧ ಕಾರ್ಯಾಚರಣೆ ನಡೆಸುತ್ತಿತ್ತು.

ಮೈಸೂರು: ಮಲೆ ಮಹದೇಶ್ವರ ಬೆಟ್ಟ (ಎಂಎಂ ಹಿಲ್ಸ್) ಸಮೀಪದ ನಾಗಮಲೆ ಪ್ರದೇಶದಲ್ಲಿ 10 ವರ್ಷದ ಬಾಲಕನ ಮೇಲೆ ದಾಳಿ ನಡೆಸಿ, ಕೊಂದಿದ್ದ ಚಿರತೆಯನ್ನು ಅರಣ್ಯ ಇಲಾಖೆ ಕೊನೆಗೂ ಸೆರೆ ಹಿಡಿದಿದೆ.
ಕಳೆದ 14 ದಿನಗಳಿಂದ ನಡೆದ ತೀವ್ರ ಕಾರ್ಯಾಚರಣೆಯ ಬಳಿಕ ಚಿರತೆ ಬೋನಿಗೆ ಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ನಾಗಮಲೆ ಸುತ್ತಮುತ್ತ ಹಲವೆಡೆ ಬೋನುಗಳನ್ನು ಅಳವಡಿಸಿತ್ತು. ಅಲ್ಲದೆ, ಪ್ರದೇಶದಲ್ಲಿ ನಿಗಾವಹಿಸಲು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿ ಶೋಧ ಕಾರ್ಯಾಚರಣೆ ನಡೆಸುತ್ತಿತ್ತು.
ಇತ್ತೀಚಿನ ದಿನಗಳಲ್ಲಿ ಇದೇ ಚಿರತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜಾನುವಾರುಗಳ ಮೇಲೂ ದಾಳಿ ನಡೆಸಿ ಕೊಂದಿರುವ ಶಂಕೆ ವ್ಯಕ್ತವಾಗಿತ್ತು.
ಘಟನೆಯ ನಂತರ ನಾಗಮಲೆ ಕಡೆಗೆ ತೆರಳುವ ಟ್ರೆಕ್ಕಿಂಗ್ ಮತ್ತು ಪಾದಯಾತ್ರೆ ಮಾರ್ಗಗಳಿಗೆ ತಾತ್ಕಾಲಿಕ ನಿರ್ಬಂಧ ಹೇರಲಾಗಿತ್ತು. ಭಕ್ತರು ಹಾಗೂ ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅರಣ್ಯ ಇಲಾಖೆ ಕಟ್ಟೆಚ್ಚರ ವಹಿಸಿತ್ತು.
ಮೃತ ಬಾಲಕ ಹರ್ಷಿತ್ (10) ಬೆಂಗಳೂರಿನ ಲಗ್ಗೆರೆಯ ನಿವಾಸಿಯಾಗಿದ್ದು, ಮೇ 9ರಂದು ಕುಟುಂಬದವರೊಂದಿಗೆ ಮಲೆ ಮಹದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದನು. ದೇವರ ದರ್ಶನದ ಬಳಿಕ ಕುಟುಂಬಸ್ಥರು ಅಲ್ಲಿಯೇ ರಾತ್ರಿ ವಾಸ್ತವ್ಯ ಹೂಡಿದ್ದರು.
ಮೇ 10ರಂದು ನಾಗಮಲೆ ದರ್ಶನಕ್ಕೆ ಕುಟುಂಬದವರೊಂದಿಗೆ ತೆರಳುತ್ತಿದ್ದ ವೇಳೆ ಚಿರತೆ ಏಕಾಏಕಿ ದಾಳಿ ನಡೆಸಿ ಬಾಲನನ್ನು ಕಾಡಿನೊಳಗೆ ಎಳೆದೊಯ್ದಿತ್ತು. ಸುಮಾರು ಅರ್ಧ ಗಂಟೆಯ ನಂತರ ಕಾಡಿನ ಬಂಡೆಗಳ ಮಧ್ಯೆ ಬಾಲಕನ ಶವ ಪತ್ತೆಯಾಗಿತ್ತು.
ಈ ಘಟನೆ ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಚಿರತೆಯನ್ನು ಶೀಘ್ರ ಸೆರೆಹಿಡಿಯುವಂತೆ ಸಾರ್ವಜನಿಕರು ಒತ್ತಾಯಿಸಿದ್ದರು. ಇದೀಗ ಚಿರತೆ ಸೆರೆ ಸಿಕ್ಕಿರುವುದರಿಂದ ಸ್ಥಳೀಯರು ಹಾಗೂ ಭಕ್ತರು ಸ್ವಲ್ಪ ಮಟ್ಟಿನ ನಿಟ್ಟುಸಿರು ಬಿಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



