ಮಾದಾವರ-ತುಮಕೂರು ಮೆಟ್ರೋ ಯೋಜನೆ: ಶೀಘ್ರದಲ್ಲೇ ಸರ್ಕಾರಕ್ಕೆ DPR ಸಲ್ಲಿಕೆ; ಗೃಹ ಸಚಿವ ಜಿ. ಪರಮೇಶ್ವರ್; Video
ಸುಮಾರು 20,000 ಕೋಟಿ ರೂಪಾಯಿ ವೆಚ್ಚದ ಈ ಬೃಹತ್ ಮೆಟ್ರೋ ಯೋಜನೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (PPP) ಮಾದರಿಯಲ್ಲಿ ಜಾರಿಗೊಳಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ.

ಬೆಂಗಳೂರು: ಬೆಂಗಳೂರು ಮತ್ತು ತುಮಕೂರು ನಿವಾಸಿಗಳ ಬಹುದಿನಗಳ ಕನಸಾದ 'ಮಾದಾವರ-ತುಮಕೂರು ಮೆಟ್ರೋ ಯೋಜನೆ'ಗೆ ಸಂಬಂಧಿಸಿದಂತೆ ಗೃಹ ಸಚಿವ ಜಿ. ಪರಮೇಶ್ವರ್ ಶನಿವಾರ ಮಹತ್ವದ ಘೋಷಣೆ ಮಾಡಿದ್ದಾರೆ.
ಯೋಜನೆಯ ವಿಸ್ತೃತ ಯೋಜನಾ ವರದಿ (DPR) ಸಿದ್ಧವಾಗಿದ್ದು, ಶೀಘ್ರದಲ್ಲೇ ಅದನ್ನು ರಾಜ್ಯ ಸಚಿವ ಸಂಪುಟ ಸಭೆಯ ಮುಂದೆ ಮಂಡಿಸಲಾಗುವುದು ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಘೋಷಣೆಯಂತೆ ಈ ಹಿಂದೆ ಹೈದರಾಬಾದ್ ಮೂಲದ ಕಂಪನಿಯೊಂದಕ್ಕೆ 3.5 ಕೋಟಿ ರೂ. ವೆಚ್ಚದಲ್ಲಿ ಕಾರ್ಯಸಾಧ್ಯತಾ ವರದಿ (Feasibility Study) ಸಿದ್ಧಪಡಿಸಲು ಜವಾಬ್ದಾರಿ ನೀಡಲಾಗಿತ್ತು. ಆ ವರದಿಯಲ್ಲಿ ಯೋಜನೆ ಜಾರಿ ಸಾಧ್ಯ ಎಂದು ಬಲವಾಗಿ ಶಿಫಾರಸು ಮಾಡಲಾಗಿತ್ತು. ಅದರ ಬೆನ್ನಲ್ಲೇ ಮೆಟ್ರೋ ಅಧಿಕಾರಿಗಳು ಟೆಂಡರ್ ಕರೆದು ಡಿಪಿಆರ್ ಸಿದ್ಧಪಡಿಸುವ ಕೆಲಸ ವಹಿಸಿದ್ದರು. ಈಗ ಆ ಕಂಪನಿಯು ಡಿಪಿಆರ್ ಪೂರ್ಣಗೊಳಿಸಿ ಸರ್ಕಾರಕ್ಕೆ ಸಲ್ಲಿಸಿದೆ ಎಂದು ವಿವರಿಸಿದರು.
ಸುಮಾರು 20,000 ಕೋಟಿ ರೂಪಾಯಿ ವೆಚ್ಚದ ಈ ಬೃಹತ್ ಮೆಟ್ರೋ ಯೋಜನೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (PPP) ಮಾದರಿಯಲ್ಲಿ ಜಾರಿಗೊಳಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ.
ಡಿಪಿಆರ್‌ನಲ್ಲಿ ಮೆಟ್ರೋ ನಿಲ್ದಾಣಗಳ ಸಂಖ್ಯೆ, ಅವುಗಳ ಸ್ಥಳ ಮತ್ತು ರಾಷ್ಟ್ರೀಯ ಹೆದ್ದಾರಿಯ ಉದ್ದಕ್ಕೂ ಮೆಟ್ರೋ ಮಾರ್ಗ ಹಾದುಹೋಗುವ ಅಲೈನ್‌ಮೆಂಟ್ ವಿವರಗಳಿವೆ. ಸಂಪುಟ ಸಭೆಯ ಅನುಮೋದನೆ ಸಿಕ್ಕ ತಕ್ಷಣ ಟೆಂಡರ್ ಕರೆಯುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ಸಚಿವರು ಹೇಳಿದರು.
ಇದೇ ವೇಳೆ ಜೈಲಿನಲ್ಲಿರುವ ನಟ ದರ್ಶನ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ವದಂತಿಗಳ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವರು, ಈ ಸುದ್ದಿ ಕೇಳಿದ ತಕ್ಷಣ ನಾನು ಮೌಖಿಕವಾಗಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ ಎಂದರು.
ರಾಜ್ಯ ರಾಜಕಾರಣದಲ್ಲಿ ಕೇಳಿಬರುತ್ತಿರುವ ಸಂಪುಟ ಪುನಾರಚನೆ ಹಾಗೂ ಹಿರಿಯ ಸಚಿವರನ್ನು ಕೈಬಿಡುವ ಕುರಿತಾದ ಚರ್ಚೆಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಶಾಸಕರು ಸಚಿವರಾಗಲು ಬಯಸುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಸಂಪುಟದಲ್ಲಿ ಕೇವಲ ಶೇ. 15 ರಷ್ಟು ಸ್ಥಾನಗಳನ್ನು ಮಾತ್ರ ಭರ್ತಿ ಮಾಡಲು ಅವಕಾಶ ಇರುವುದರಿಂದ ಮಂತ್ರಿ ಸ್ಥಾನಗಳ ಸಂಖ್ಯೆ ಸೀಮಿತವಾಗಿದೆ. ಸಚಿವರನ್ನು ಕೈಬಿಡುವ ಅಂತಿಮ ನಿರ್ಧಾರವನ್ನು ನಮ್ಮ ಪಕ್ಷದ ಹೈಕಮಾಂಡ್ ತೆಗೆದುಕೊಳ್ಳಲಿದೆ ಎಂದರು.
ಇದೇ ವೇಳೆ, ತಮಗೆ ಗೃಹ ಇಲಾಖೆಯ ಬಗ್ಗೆ ಯಾವುದೇ ಅಸಮಾಧಾನವಿಲ್ಲ ಮತ್ತು ಇಲಾಖೆಯನ್ನು ದಕ್ಷತೆಯಿಂದ ನಿಭಾಯಿಸಿದ್ದೇನೆ ಎಂದು ಸ್ಪಷ್ಟಪಡಿಸಿದ ಅವರು, "ಮುಖ್ಯಮಂತ್ರಿ ಹುದ್ದೆ ನಿಭಾಯಿಸುವ ಜವಾಬ್ದಾರಿ ನೀಡಿದರೆ, ಅದನ್ನು ನಿಭಾಯಿಸುವ ಸಾಮರ್ಥ್ಯ ನನಗಿದೆ. ಪಕ್ಷ ನೀಡುವ ಯಾವುದೇ ಜವಾಬ್ದಾರಿಯನ್ನು ಹೊರಲು ಸಿದ್ಧನಿದ್ದೇನೆಂದು ಹೇಳಿದರು.
ಟೌನ್ ಹಾಲ್ ಬಳಿ ನಿಗದಿಯಾಗಿದ್ದ ಸಿಜೆಪಿ ಸಾರ್ವಜನಿಕ ಸಭೆಗೆ ಪೊಲೀಸರ ಅನುಮತಿ ನಿರಾಕರಣೆಯ ಕುರಿತು ಮಾತನಾಡಿದ ಅವರು, ಸಾರ್ವಜನಿಕ ಸಭೆಗಳಿಗೆ ಅನುಮತಿ ನೀಡುವುದು ಅಥವಾ ನಿರಾಕರಿಸುವುದು ಸಂಪೂರ್ಣವಾಗಿ ಪೊಲೀಸರ ವಿವೇಚನೆಗೆ ಬಿಟ್ಟದ್ದು. ಕಾನೂನು ಸುವ್ಯವಸ್ಥೆ ಕಾಪಾಡುವುದು ಅವರ ಜವಾಬ್ದಾರಿ ಎಂದರು.
ಇನ್ನು ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಕುರಿ-ದನಗಳ ಬಲಿ ನೀಡಲು ರಕ್ಷಣೆ ಕೋರಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಪತ್ರ ಬರೆದಿರುವ ಕುರಿತು ಪ್ರತಿಕ್ರಿಯಿಸಿ, ಹಬ್ಬಗಳ ಸಮಯದಲ್ಲಿ ಪೊಲೀಸರು ಸಹಜವಾಗಿಯೇ ಅಲರ್ಟ್ ಆಗಿರುತ್ತಾರೆ. ವಕ್ಫ್ ಮಂಡಳಿಯ ಆತಂಕ ಏನೆಂದು ನನಗೆ ತಿಳಿದಿಲ್ಲ, ಆದರೆ ಅವರ ಪತ್ರಕ್ಕೆ ನಿಯಮಾವಳಿಗಳ ಪ್ರಕಾರ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಲಾಡ್ಲೆ ಮಶಾಕ್ ದರ್ಗಾಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಹಿಂಪಡೆಯುವುದಕ್ಕೆ ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ವಿರೋಧದ ಕುರಿತು ಮಾತನಾಡಿ, "ವಿರೋಧಿಸುವುದು ಅವರಿಗೆ ಬಿಟ್ಟ ವಿಚಾರ. ನಮ್ಮ ಕಾಂಗ್ರೆಸ್ ಸರ್ಕಾರ ಸಂವಿಧಾನದ ತತ್ವಗಳನ್ನು ಪಾಲಿಸುತ್ತಿದೆ. ಸಂವಿಧಾನವು ಎಲ್ಲರನ್ನೂ ಸಮಾನವಾಗಿ ಕಾಣಲು ಹೇಳುತ್ತದೆ. ಹಿಂದುಳಿದ, ಶೋಷಿತ ಮತ್ತು ನಿರ್ಲಕ್ಷಿತ ವರ್ಗಗಳ ಪರವಾಗಿ ಕೆಲಸ ಮಾಡುವುದು ಕಾಂಗ್ರೆಸ್‌ನ ಕರ್ತವ್ಯವಾಗಿದ್ದು, ಅದನ್ನು ನಾವು 1947 ರಿಂದಲೂ ಮಾಡಿಕೊಂಡು ಬರುತ್ತಿದ್ದೇವೆ ಎಂದು ಸಮರ್ಥಿಸಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



