ರಾಜ್ಯ

ಹಾಸನ: ಟೈರ್ ಸ್ಫೋಟದಿಂದ ಖಾಸಗಿ ಸ್ಲೀಪರ್​ ಬಸ್ ಬೆಂಕಿಗಾಹುತಿ; ಸ್ವಲ್ಪದರಲ್ಲೆ ಪ್ರಯಾಣಿಕರು ಪಾರು!

ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಬಸ್ ನ ಟೈರ್ ಸ್ಫೋಟಗೊಂಡು ಧಗಧಗನೆ ಹೊತ್ತಿ ಉರಿದಿದೆ. ಪ್ರಯಾಣಿಕರೊಬ್ಬರ ಸಮಯಪ್ರಜ್ಞೆಯಿಂದ ಬಸ್​ನಲ್ಲಿದ್ದ 36 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ

ಹಾಸನ: ಟೈರ್ ಸ್ಫೋಟದಿಂದ ಖಾಸಗಿ ಸ್ಲೀಪರ್​ ಬಸ್ ಬೆಂಕಿಗಾಹುತಿ; ಸ್ವಲ್ಪದರಲ್ಲೆ ಪ್ರಯಾಣಿಕರು ಪಾರು!
ಖಾಸಗಿ ಸ್ಲೀಪರ್​ ಬಸ್ ಬೆಂಕಿಗಾಹುತಿ
Published On :

ಹಾಸನ: ಖಾಸಗಿ ಸ್ಲೀಪರ್ ಬಸ್​ನ ಟೈರ್ ಸ್ಫೋಟಗೊಂಡು ಏಕಾಏಕಿ ಬೆಂಕಿ ಹೊತ್ತಿಕೊಂಡ ಘಟನೆ ಜಿಲ್ಲೆಯ ಶಾಂತಿಗ್ರಾಮ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ತಡ ರಾತ್ರಿ ಸಂಭವಿಸಿದೆ.

ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಬಸ್ ನ ಟೈರ್ ಸ್ಫೋಟಗೊಂಡು ಧಗಧಗನೆ ಹೊತ್ತಿ ಉರಿದಿದೆ. ಪ್ರಯಾಣಿಕರೊಬ್ಬರ ಸಮಯಪ್ರಜ್ಞೆಯಿಂದ ಬಸ್​ನಲ್ಲಿದ್ದ 36 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಲಗೇಜ್ ಹಾಗೂ ಮೊಬೈಲ್ ವಸ್ತುಗಳು ಬೆಂಕಿಗಾಹುತಿಯಾಗಿವೆ.

ಮೊದಲು ಟೈರ್​ಗೆ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಸಣ್ಣದೊಂದು ಶಬ್ದ ಕೇಳಿ ಬಂದಾಗ, ಬಸ್​ನಲ್ಲಿದ್ದ ಪ್ರಯಾಣಿಕನೋರ್ವ, ಕಿಟಕಿಯ ಪರದೆಯನ್ನು ಸರಿಸಿ ನೋಡಿದಾಗ ಚಕ್ರಕ್ಕೆ ಬೆಂಕಿ ಹೊತ್ತಿಕೊಂಡಿರುವುದು ಗಮನಕ್ಕೆ ಬಂದಿದೆ. ತಕ್ಷಣ ಬಸ್​ ಚಾಲಕ ಹಾಗೂ ಎಲ್ಲಾ ಪ್ರಯಾಣಿಕರಿಗೆ ವಿಷಯ ತಿಳಿಸಿದ್ದಾರೆ. ಇದರಿಂದ ಚಾಲಕ ಬಸ್​ ರಸ್ತೆ ಬದಿಗೆ ಪಾರ್ಕ್​ ಮಾಡಿದ್ದಾರೆ.

ಈ ವೇಳೆ ನಿದ್ದೆಯ ಮಂಪರಿನಲ್ಲಿದ್ದ ಪ್ರಯಾಣಿಕರು ಎಚ್ಚರಗೊಂಡು, ಅವಸರವಾಗಿ ಕೆಳಗಿಳಿಯುವ ಮೂಲಕ ಪ್ರಾಣ ಉಳಿಸಿಕೊಂಡಿದ್ದಾರೆ. ಆದರೆ, ಅವರ ಲಗೇಜ್ ಮತ್ತು ಕೆಲವು ಬೆಲೆಬಾಳುವ ವಸ್ತುಗಳು ಮಾತ್ರ ಬೆಂಕಿಗೆ ಆಹುತಿಯಾಗಿವೆ. ಚಾಲಕ ಮತ್ತು ಪ್ರಯಾಣಿಕರೊಬ್ಬರ ಸಮಯ ಪ್ರಜ್ಞೆಯಿಂದ ಆಗಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.

ಘಟನೆಯ ಬಗ್ಗೆ ಮಾಹಿತಿ ಲಭಿಸುತ್ತಿದ್ದಂತೆ ಹಾಸನ ಮತ್ತು ಶಾಂತಿಗ್ರಾಮದಿಂದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿದರು. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಲು ತೀವ್ರ ಹರಸಾಹಸ ಪಡಬೇಕಾಯಿತು. ಅಗ್ನಿಶಾಮಕ ಸಿಬ್ಬಂದಿ ಬರುವಷ್ಟರಲ್ಲಿ ಬಸ್ ಸುಟ್ಟು ಕರಕಲಾಗಿತ್ತು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ಕೊನೆಗೂ ಬೆಂಕಿಯನ್ನು ಪೂರ್ಣವಾಗಿ ಹತೋಟಿಗೆ ತಂದರು.

ತಡರಾತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಲುಕಿಕೊಂಡಿದ್ದ ಅಸಹಾಯಕ ಪ್ರಯಾಣಿಕರನ್ನು ಹಾಸನ ಪೊಲೀಸರು ಮತ್ತು ಸಾರಿಗೆ ಸಂಸ್ಥೆಯ ಅಧಿಕಾರಿಗಳು ಮರು ವ್ಯವಸ್ಥೆ ಮಾಡಿ ಮತ್ತೊಂದು ಪರ್ಯಾಯ ಬಸ್ ಮೂಲಕ ಬೆಂಗಳೂರಿಗೆ ಸುರಕ್ಷಿತವಾಗಿ ಕಳುಹಿಸಿಕೊಟ್ಟರು. ಈ ಅಪಘಾತದ ಕುರಿತು ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.