ರಾಜ್ಯ

ವಿಜಯಪುರದಲ್ಲಿ ಭೀಕರ ದುರಂತ: ಮನೆ ಮೇಲ್ಛಾವಣಿ ಕುಸಿದು ಒಂದೇ ಕುಟುಂಬದ ನಾಲ್ವರು ಸಾವು; Video

ಸ್ವಂತ ಮನೆಯಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದ ಕಾರಣ ಕುಟುಂಬವು ತಾತ್ಕಾಲಿಕವಾಗಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿತ್ತು. ರಾತ್ರಿ ನಿರಂತರ ಮಳೆ ಹಾಗೂ ಗಾಳಿಯಿಂದ ದುರ್ಬಲಗೊಂಡಿದ್ದ ಮನೆಯ ಮೇಲ್ಛಾವಣಿ ಅಚಾನಕ್ ಆಗಿ ಕುಸಿದು ಬಿದ್ದಿದೆ.

ವಿಜಯಪುರದಲ್ಲಿ ಭೀಕರ ದುರಂತ: ಮನೆ ಮೇಲ್ಛಾವಣಿ ಕುಸಿದು ಒಂದೇ ಕುಟುಂಬದ ನಾಲ್ವರು ಸಾವು; Video
ಮನೆ ಮೇಲ್ಛಾವಣಿ ಕುಸಿದುಬಿದ್ದಿರುವುದು.
Published On :

ವಿಜಯಪುರ: ಗಾಳಿ ಸಹಿತ‌ ಭಾರೀ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ದಾರುಣ ಘಟನೆ ಗುರುವಾರ (ಮೇ14) ರಾತ್ರಿ ಆಲಮೇಲ ತಾಲೂಕಿನ‌ ಮೊರಗಟಿ ಗ್ರಾಮದಲ್ಲಿ ನಡೆದಿದೆ.

ಘಟನೆಯಲ್ಲಿ ಪತಿ, ಪತ್ನಿ ಹಾಗೂ ಇಬ್ಬರು ಮಕ್ಕಳು ಜೀವಂತ ಸಮಾಧಿಯಾಗಿದ್ದಾರೆ. ಮೃತರನ್ನು ಗುರುನಾಥ್ ಬಡಿಗೇರ್ (35), ಅವರ ಪತ್ನಿ ಜ್ಯೋತಿ ಬಡಿಗೇರ್ (28), ಹಾಗೂ ಅವರ ಇಬ್ಬರು ಪುತ್ರಿಯರಾದ ಕಲ್ಲಮ್ಮ ಬಡಿಗೇರ್ (13) ಮತ್ತು ಕಿರ್ತಿ ಬಡಿಗೇರ್ (9) ಎಂದು ಗುರುತಿಸಲಾಗಿದೆ.

ಸ್ವಂತ ಮನೆಯಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದ ಕಾರಣ ಕುಟುಂಬವು ತಾತ್ಕಾಲಿಕವಾಗಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿತ್ತು. ರಾತ್ರಿ ನಿರಂತರ ಮಳೆ ಹಾಗೂ ಗಾಳಿಯಿಂದ ದುರ್ಬಲಗೊಂಡಿದ್ದ ಮನೆಯ ಮೇಲ್ಛಾವಣಿ ಅಚಾನಕ್ ಆಗಿ ಕುಸಿದು ಬಿದ್ದಿದೆ. ಈ ವೇಳೆ ನಿದ್ರೆಯಲ್ಲಿದ್ದ ಕುಟುಂಬ ಸದಸ್ಯರು ಅವಶೇಷಗಳಡಿ ಸಿಲುಕಿ ಮೃತಪಟ್ಟಿದ್ದಾರೆ.

ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಗ್ರಾಮಸ್ಥರು ಕೂಡ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ಸಹಕರಿಸಿದರು.

ಘಟನೆಯಿಂದ ಗ್ರಾಮದಲ್ಲಿ ಆತಂಕ ಮತ್ತು ಶೋಕದ ವಾತಾವರಣ ನಿರ್ಮಾಣವಾಗಿದೆ. ಹಳೆಯ ಹಾಗೂ ಶಿಥಿಲಾವಸ್ಥೆಯ ಮನೆಯಲ್ಲೇ ಕುಟುಂಬ ವಾಸವಾಗಿದ್ದದ್ದು ಈ ದುರಂತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಸಿಂದಗಿ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ್ ಕೂಡ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದದರು.

ನಂತರ ಮಾಧ್ಯಮಗಳೊಂದಿಗ ಮಾತನಾಡಿದ ಅವರು, ಈ ದುರ್ಘಟನೆ ನಡೆಯಬಾರದಿತ್ತು. ಗುರುನಾಥ ಬಡಿಗೇರ ದಂಪತಿ ತಮ್ಮ ಮನೆಯ ದುರಸ್ತಿ ಹಿನ್ನೆಲೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇಂದು ತಮ್ಮ ಮನೆಗೆ ಮರಳುವವರಿದ್ದರು. ಆದರೆ, ವಿಧಿಯಾಟಕ್ಕೆ ಬಲಿಯಾಗಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.

ಸಾವಿಗೀಡಾದ ನಾಲ್ಕು ಜನರ ಕುಟುಂಬಕ್ಕೆ ತಲಾ 5 ಲಕ್ಷದಂತೆ ಒಟ್ಟು 20 ರೂ. ಲಕ್ಷ ಪರಿಹಾರ ನೀಡಲಾಗುವುದು. ಈ ಹಣ ಬದುಕುಳಿದಿರುವ ಬಾಲಕ ವೀರೇಶ ಬಡಿಗೇರ ವಿದ್ಯಾಭ್ಯಾಸಕ್ಕೆ ನೆರವಾಗಲಿದೆ. ಪರಿಹಾರದ ಹಣವನ್ನು ಬಾಲಕನ ಹೆಸರಿನಲ್ಲಿ ಬ್ಯಾಂಕಿನಲ್ಲಿ ಠೇವಣಿ ಇಡಲಾಗುವುದು. ಸಾವಿಗೀಡಾದವರ ಶವಪರೀಕ್ಷೆ ಮೊರಟಗಿಯಲ್ಲಿಯೇ ನಡೆಯಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಿಂದಗಿ‌ ಶಾಸಕ ಅಶೋಕ ಮನಗೂಳಿ, ಮಾಜಿ ಶಾಸಕ ರಮೇಶ ಭೂಸನೂರ, ಜಿಪಂ ಮಾಜಿ ಸದಸ್ಯ ನರಸಿಂಗಸಾ ತಿವಾರಿ, ಮುಖಂಡ ಅಶೋಕ ವಾರದ, ಜಿಲ್ಲಾ ಆರೋಗ್ಯಾಧಿಕಾರಿ ಸಂಪತಕುಮಾರ ಗುಣಾರಿ, ಕಂದಾಯ, ಆರೋಗ್ಯ, ಜಿಪಂ, ಪೊಲೀಸ್, ಅಗ್ನಿಶಾಮಕ ದಳ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.