ರಾಜ್ಯ

ವಿಜಯನಗರ ಸಾಮ್ರಾಜ್ಯದ ವೈಭವಕ್ಕೆ ಹೊಸ ಸಾಕ್ಷಿ: ಹಂಪಿಯಲ್ಲಿ ಶತಮಾನಗಳಷ್ಟು ಹಳೆಯ ದೇವಾಲಯದ ಮೇಲ್ಛಾವಣಿ ಪತ್ತೆ..!

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಹಂಪಿ ವಲಯದ ಅಧಿಕಾರಿಗಳು, ಐತಿಹಾಸಿಕ ಜೈನ ದೇವಾಲಯ ಸಮುಚ್ಚಯದ ಸಮೀಪ ನಡೆಸಿದ ಉತ್ಖನನ ಕಾರ್ಯದ ವೇಳೆ ವಿಜಯನಗರ ಕಾಲಘಟ್ಟದ ಪುರಾತನ ದೇವಾಲಯದ ಮೇಲ್ಛಾವಣಿಯನ್ನು ಪತ್ತೆಹಚ್ಚಿದ್ದಾರೆ.

ವಿಜಯನಗರ ಸಾಮ್ರಾಜ್ಯದ ವೈಭವಕ್ಕೆ ಹೊಸ ಸಾಕ್ಷಿ: ಹಂಪಿಯಲ್ಲಿ ಶತಮಾನಗಳಷ್ಟು ಹಳೆಯ ದೇವಾಲಯದ ಮೇಲ್ಛಾವಣಿ ಪತ್ತೆ..!
ಹಂಪಿಯ ಜೈನ ದೇವಾಲಯ ಸಂಕೀರ್ಣದ ಬಳಿ ಗುರುವಾರ ಎಎಸ್‌ಐ ತಂಡವು ಪುರಾತನ ದೇವಾಲಯದ ಮೇಲ್ಛಾವಣಿಯನ್ನು ಪತ್ತೆಹಚ್ಚಿದೆ.
Published On :

ಹಂಪಿ: ವಿಜಯನಗರ ಸಾಮ್ರಾಜ್ಯದ ಐತಿಹಾಸಿಕ ವೈಭವವನ್ನು ಮತ್ತೊಮ್ಮೆ ಅನಾವರಣಗೊಳಿಸುವ ಮಹತ್ವದ ಪುರಾತತ್ವ ಶೋಧನೆ ಹಂಪಿಯಲ್ಲಿ ಬೆಳಕಿಗೆ ಬಂದಿದೆ.

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಹಂಪಿ ವಲಯದ ಅಧಿಕಾರಿಗಳು, ಐತಿಹಾಸಿಕ ಜೈನ ದೇವಾಲಯ ಸಮುಚ್ಚಯದ ಸಮೀಪ ನಡೆಸಿದ ಉತ್ಖನನ ಕಾರ್ಯದ ವೇಳೆ ವಿಜಯನಗರ ಕಾಲಘಟ್ಟದ ಪುರಾತನ ದೇವಾಲಯದ ಮೇಲ್ಛಾವಣಿಯನ್ನು ಪತ್ತೆಹಚ್ಚಿದ್ದಾರೆ.

ಜೈನ ದೇವಾಲಯ ಸಮುಚ್ಚಯದ ಸುತ್ತಮುತ್ತಲಿನ ಪ್ರದೇಶದಲ್ಲಿ ವಿಜಯನಗರ ಯುಗಕ್ಕೆ ಸೇರಿದ ಹಲವು ನಿರ್ಮಿತಿಗಳು ಮಣ್ಣಿನಡಿ ಹೂತು ಹೋಗಿರಬಹುದೆಂಬ ಶಂಕೆಯ ಹಿನ್ನೆಲೆ ASI ತಂಡವು ಸಮಗ್ರ ಪುರಾತತ್ವ ಉತ್ಖನನ ಕಾರ್ಯ ಆರಂಭಿಸಿತ್ತು.

ಈ ವೇಳೆ ಮಣ್ಣಿನ ಪದರಗಳ ಕೆಳಗೆ ಕಲ್ಲಿನಿಂದ ನಿರ್ಮಿತ ದೇವಾಲಯದ ಮೇಲ್ಛಾವಣಿ ಪತ್ತೆಯಾಗಿದ್ದು, ಇದು ಶತಮಾನಗಳಷ್ಟು ಹಳೆಯ ದೇವಾಲಯವಾಗಿರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ASI ಹಂಪಿ ವಲಯದ ಅಧೀಕ್ಷಕ ಪುರಾತತ್ವ ವಿಜ್ಞಾನಿ ಕೆ. ರಾಮಕೃಷ್ಣ ರೆಡ್ಡಿ ಅವರಪು, ಪತ್ತೆಯಾದ ರಚನೆಯ ಉದ್ದ ಸುಮಾರು 4.35 ಮೀಟರ್ ಹಾಗೂ ಅಗಲ 4.26 ಮೀಟರ್ ಇದೆ ಎಂದು ತಿಳಿಸಿದ್ದಾರೆ.

ಪ್ರಾಥಮಿಕ ಪರಿಶೀಲನೆ ಪ್ರಕಾರ ದೇವಾಲಯದ ಇಟ್ಟಿಗೆಯಿಂದ ನಿರ್ಮಿತವಾಗಿರುವ ಗರ್ಭಗುಡಿ ಕಾಲಕ್ರಮೇಣ ಭಾರೀ ಹಾನಿಗೊಳಗಾಗಿದ್ದು, ಇದೀಗ ಗರ್ಭಗುಡಿಯ ಮೇಲ್ಛಾವಣಿ ಮಾತ್ರ ಪತ್ತೆಯಾಗಿದೆ ಎಂದು ಹೇಳಿದ್ದಾರೆ.

ದೇವಾಲಯದ ಗೋಡೆಗಳು ಅಥವಾ ಇತರೆ ಭಾಗಗಳು ಇನ್ನೂ ಮಣ್ಣಿನಡಿ ಸುರಕ್ಷಿತವಾಗಿರಬಹುದಾದ ಸಾಧ್ಯತೆ ಇದೆ. ಅವುಗಳ ಎತ್ತರ ಸುಮಾರು 10 ಅಡಿ ಇರಬಹುದು ಎಂದು ಅಂದಾಜಿಸಲಾಗಿದೆ. ಮುಂದಿನ ಉತ್ಖನನ ಕಾರ್ಯದಿಂದ ದೇವಾಲಯದ ಸಂಪೂರ್ಣ ವಿನ್ಯಾಸ ಹಾಗೂ ಇತರ ಸಂಬಂಧಿತ ರಚನೆಗಳು ಪತ್ತೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ.

ಈ ಆವಿಷ್ಕಾರವು ಹಂಪಿಯಲ್ಲಿರುವ ಜೈನ ವಸಾಹತುವಿನ ಧಾರ್ಮಿಕ ಮತ್ತು ವಾಸ್ತುಶಿಲ್ಪದ ಭೂದೃಶ್ಯವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಹಂಪಿಯ ಜೈನ ಪ್ರದೇಶದಲ್ಲಿ ಇದು ಒಂದು ಪ್ರಮುಖ ಆವಿಷ್ಕಾರವಾಗಿದ್ದು, ಮಣ್ಣಿನಡಿ ಇನ್ನೂ ಸಮಗ್ರ ವಾಸ್ತುಶಿಲ್ಪ ಅಂಶಗಳು ಉಳಿದಿರುವ ದೇವಾಲಯದ ಅಸ್ತಿತ್ವವನ್ನು ಇದು ಸೂಚಿಸುತ್ತದೆ. ಶಿಖರ ಭಾಗ ಹಾನಿಗೊಳಗಾಗಿದ್ದರೂ ಗರ್ಭಗುಡಿಯ ಮೇಲ್ಛಾವಣಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಮುಂದಿನ ಉತ್ಖನನದಲ್ಲಿ ಗೋಡೆಗಳು ಹಾಗೂ ಇತರ ನಿರ್ಮಿತಿಗಳೂ ಪತ್ತೆಯಾಗಬಹುದು ಎಂದು ರಾಮಕೃಷ್ಣ ರೆಡ್ಡಿ ತಿಳಿಸಿದ್ದಾರೆ.

ದೇವಾಲಯದ ಅವಶೇಷಗಳಿಗೆ ಯಾವುದೇ ಹಾನಿಯಾಗದಂತೆ ಉತ್ಖನನದ ಜೊತೆಗೆ ದಾಖಲೆ ಸಂಗ್ರಹ, ನಕ್ಷೆ ತಯಾರಿ ಹಾಗೂ ಸಂರಕ್ಷಣಾ ಕಾರ್ಯಗಳನ್ನು ಕೂಡ ಸಮಕಾಲೀನವಾಗಿ ಕೈಗೊಳ್ಳಲಾಗಿದೆ ಎಂದು ಎಎಸ್ಐ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕಾರ್ಯಕ್ಕೆ ರಾಜ್ಯ ಪ್ರವಾಸಿ ಮಾರ್ಗದರ್ಶಕರ ಸಂಘದ ಕಾರ್ಯದರ್ಶಿ ವಿರೂಪಾಕ್ಷಿ ವಿ ಹಂಪಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇಂತಹ ಸಂಶೋಧನೆಗಳು ವಿಜಯನಗರ ಕಾಲಘಟ್ಟದಲ್ಲಿ ಹಂಪಿಯಲ್ಲಿ ಅಸ್ತಿತ್ವದಲ್ಲಿದ್ದ ಸಾಂಸ್ಕೃತಿಕ ಮತ್ತು ಧಾರ್ಮಿಕ ವೈವಿಧ್ಯತೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

ವಿಶ್ವ ಪಾರಂಪರಿಕ ತಾಣವಾಗಿರುವ ಹಂಪಿ ಈಗಾಗಲೇ ತನ್ನ ಅದ್ಭುತ ಶಿಲ್ಪಕಲೆ, ದೇವಾಲಯಗಳು ಮತ್ತು ಐತಿಹಾಸಿಕ ಸ್ಮಾರಕಗಳಿಗಾಗಿ ಜಗತ್ತಿನಾದ್ಯಂತ ಪ್ರಸಿದ್ಧವಾಗಿದೆ. ಇದೀಗ ಪತ್ತೆಯಾದ ಈ ಪುರಾತನ ದೇವಾಲಯವು ವಿಜಯನಗರ ಸಾಮ್ರಾಜ್ಯದ ಇತಿಹಾಸ ಅಧ್ಯಯನಕ್ಕೆ ಮತ್ತೊಂದು ಅಮೂಲ್ಯ ಸೇರ್ಪಡೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.