ಯುದ್ದ ಬಯಸಿದ್ದು ನಾವಲ್ಲ, ಒಂದಿಂಚು ಭೂಮಿಯನ್ನೂ ಬಿಟ್ಟುಕೊಡಲ್ಲ: ಇರಾನ್ ಸರ್ವೋಚ್ಛ ನಾಯಕನ ಪ್ರತಿನಿಧಿ
ಅಮೆರಿಕ ಮತ್ತು ಇಸ್ರೇಲ್ ಈ ಯುದ್ಧವನ್ನು ಮೂರು ದಿನಗಳಲ್ಲಿ ಮುಗಿಸಬಹುದು ಎಂದುಕೊಂಡಿದ್ದವು, ಇರಾನ್ ಕುಸಿದು ಹೋಗುತ್ತದೆ ಮತ್ತು ಅದನ್ನು ವಿಭಜಿಸಬಹುದು ಎಂದು ಭಾವಿಸಿದ್ದವು. ಆದರೆ ಅದು ಸಾಧ್ಯವಾಗಲಿಲ್ಲ, ಮುಂದೆ ಕೂಡ ಆಗುವುದಿಲ್ಲ.

ಬೆಂಗಳೂರು: ಯುದ್ಧವು ನಮ್ಮ (ಇರಾನ್) ಆಯ್ಕೆಯಲ್ಲ, ಬಲವಂತವಾಗಿ ಹೇರಲ್ಪಟ್ಟದ್ದು ಎಂದು ಇರಾನ್ ಸರ್ವೋಚ್ಛ ನಾಯಕನ ಪ್ರತಿನಿಧಿ ಡಾ. ಅಬ್ದುಲ್ ಮಜೀದ್ ಹಕೀಮ್ ಇಲಾಹಿ ಹೇಳಿದ್ದಾರೆ.
ಬೆಂಗಳೂರು ಭೇಟಿ ವೇಳೆ ಮಾತನಾಡಿದ ಇಲಾಹಿ ಅವರು, ಇರಾನ್ ಎಂದಿಗೂ ಯುದ್ಧ ಬಯಸಲಿಲ್ಲ. ಆದರೆ, ನಮ್ಮ ಮೇಲೆ ಹೇರಲಾಯಿತು. ನಾವು ಈಗಲೂ ಯುದ್ಧ ಬಯಸುವುದಿಲ್ಲ, ಆದರೆ ಶತ್ರುಗಳು ಮುಂದುವರಿಸಿದರೆ 10 ವರ್ಷಗಳವರೆಗೂ ಹೋರಾಡಲು ನಾವು ಸಿದ್ಧ ಎಂದು ಹೇಳಿದ್ದಾರೆ.
ಅಮೆರಿಕ ಮತ್ತು ಇಸ್ರೇಲ್ ಈ ಯುದ್ಧವನ್ನು ಮೂರು ದಿನಗಳಲ್ಲಿ ಮುಗಿಸಬಹುದು ಎಂದುಕೊಂಡಿದ್ದವು, ಇರಾನ್ ಕುಸಿದು ಹೋಗುತ್ತದೆ ಮತ್ತು ಅದನ್ನು ವಿಭಜಿಸಬಹುದು ಎಂದು ಭಾವಿಸಿದ್ದವು. ಆದರೆ ಅದು ಸಾಧ್ಯವಾಗಲಿಲ್ಲ, ಮುಂದೆ ಕೂಡ ಆಗುವುದಿಲ್ಲ ಎಂದು ತಿಳಿಸಿದರು.
ಇರಾನ್ ತನ್ನ ಭೂಭಾಗದ ಒಂದು ಇಂಚು ಭೂಮಿಯನ್ನೂ ಕೂಡ ಬಿಟ್ಟುಕೊಡುವುದಿಲ್ಲ, ಬೇಕಾದರೆ ಜನರು ತಮ್ಮ ರಕ್ತವನ್ನೇ ಹರಿಸಲು ಸಿದ್ಧರಾಗಿದ್ದಾರೆ. “ಅಮೆರಿಕ ನಮ್ಮ ಎಲ್ಲಾ ಪರಮಾಣು ಕೇಂದ್ರಗಳನ್ನು ನಾಶ ಮಾಡಿದೆ ಎಂದು ಹೇಳುತ್ತದೆ. ಆದರೆ ಅದೇ ಸಮಯದಲ್ಲಿ ನಾವು ಪರಮಾಣು ಶಸ್ತ್ರಾಸ್ತ್ರ ಹೊಂದಿದ್ದೇವೆ ಎಂದು ಆರೋಪಿಸುತ್ತದೆ. ನಾವು ಎನ್‌ಪಿಟಿ ಒಪ್ಪಂದದ ಸಹಿ ರಾಷ್ಟ್ರವಾಗಿದ್ದು, ಶಾಂತಿಯುತ ಪರಮಾಣು ತಂತ್ರಜ್ಞಾನ ಅಭಿವೃದ್ಧಿಗೆ ಹಕ್ಕು ಹೊಂದಿದ್ದೇವೆ” ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಆರಂಭಿಸಿದ ಈ ಯುದ್ಧವು ಕೆಲವು ಆಂತರಿಕ ರಾಜಕೀಯ ಸಮಸ್ಯೆಗಳನ್ನು ಮುಚ್ಚಿಹಾಕಲು ನಡೆಸಿದ ಪ್ರಯತ್ನವಾಗಿದ್ದು, ಜಾಗತಿಕ ಗಮನವನ್ನು ಬೇರೆ ವಿಷಯಗಳಿಂದ ತಿರುಗಿಸಲು ಈ ದಾಳಿ ನಡೆದಿದೆ ಎಂದು ಇಲಾಹಿ ಆರೋಪಿಸಿದರು.
ಈ ಯುದ್ಧದಲ್ಲಿ ಇರಾನ್ ತನ್ನ ಉನ್ನತ ನಾಯಕರು ಸೇರಿದಂತೆ ಹಲವರನ್ನು ಕಳೆದುಕೊಂಡಿದೆ. ನೂರಾರು ನಾಗರಿಕರು, ಶಾಲಾ ಮಕ್ಕಳು ಮೃತಪಟ್ಟಿದ್ದಾರೆ. ಇರಾನ್ ಜನರು ‘ಶಹಾದತ್’ (ತ್ಯಾಗ) ಎಂಬ ತತ್ವವನ್ನು ನಂಬುತ್ತಾರೆ. ಅದಕ್ಕಾಗಿ ಹೋರಾಡಲು ಸಿದ್ಧರಾಗಿದ್ದಾರೆ ಎಂದು ಹೇಳಿದರು.
ಹಾರ್ಮುಜ್ ಜಲಸಂಧಿಯ ವಿಚಾರ ಕುರಿತು ಪ್ರತಿಕ್ರಿಯಿಸಿ, ಈ ಮಾರ್ಗವು ಸಾವಿರಾರು ವರ್ಷಗಳಿಂದ ಮುಕ್ತವಾಗಿತ್ತು. ಆದರೆ, ಹೊರಗಿನ ಶಕ್ತಿಗಳು ದಾಳಿ ಆರಂಭಿಸಿದ ನಂತರ ಪರಿಸ್ಥಿತಿ ಬದಲಾಗಿದೆ. ಜಾಗತಿಕ ಸಾಗಣೆಯ ಸುಮಾರು 20% ಈ ಮಾರ್ಗದಿಂದ ಸಾಗುವುದರಿಂದ, ಇದರ ಮೇಲಿನ ನಿಯಂತ್ರಣ ಜಾಗತಿಕ ಆರ್ಥಿಕತೆಯ ಮೇಲೆ ದೊಡ್ಡ ಪರಿಣಾಮ ಬೀರಿದೆ ಎಂದರು.
ಇದೇ ವೇಳೆ ಇರಾನ್‌ನ ಒಳರಾಜಕೀಯದ ಕುರಿತು ಹರಡುತ್ತಿರುವ ವದಂತಿಗಳನ್ನು ತಳ್ಳಿಹಾಕಿದ ಅವರು, ಇರಾನ್ ಸರ್ವೋಚ್ಛ ನಾಯಕನ ಆರೋಗ್ಯದ ಬಗ್ಗೆ ಅಥವಾ ನಾಯಕತ್ವದಲ್ಲಿ ಸಂಘರ್ಷದ ಬಗ್ಗೆ ಯಾವುದೇ ಸತ್ಯವಿಲ್ಲ ಎಂದು ಹೇಳಿದರು. ಇವು ಉದ್ದೇಶಪೂರ್ವಕವಾಗಿ ಹರಡುತ್ತಿರುವ ತಪ್ಪು ಸುದ್ದಿಗಳೆಂದು ಹೇಳಿದರು.
ಇತ್ತೀಚಿನ ಪ್ರತಿಭಟನೆಗಳು ಮತ್ತು ಶಿಕ್ಷೆಗಳ ಬಗ್ಗೆ ಮಾತನಾಡಿ, ಕೆಲವರು ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಕಾನೂನು ಪ್ರಕಾರ ಶಿಕ್ಷೆ ವಿಧಿಸಲಾಗಿದೆ. ನಿರಪರಾಧಿಗಳನ್ನು ಕೊಲ್ಲುವವರಿಗೆ ಇರಾನ್ ಕಾನೂನಿನ ಪ್ರಕಾರ ಗಲ್ಲು ಶಿಕ್ಷೆ ಇದೆ ಎಂದು ಸ್ಪಷ್ಟಪಡಿಸಿದರು.
ಮಹಿಳಾ ಸ್ವಾತಂತ್ರ್ಯದ ವಿಷಯ ಕುರಿತು ಮಾತನಾಡಿ, “ಇರಾನ್‌ನಲ್ಲಿ ಮಹಿಳೆಯರಿಗೆ ಇತರ ದೇಶಗಳಿಗಿಂತ ಹೆಚ್ಚು ಸ್ವಾತಂತ್ರ್ಯ ಇದೆ. ವಿದ್ಯಾರ್ಥಿಗಳಲ್ಲಿ ಶೇ.60ಕ್ಕೂ ಹೆಚ್ಚು ಮಹಿಳೆಯರೇ ಇದ್ದಾರೆ ಎಂದು ಹೇಳಿದರು.
ಭಾರಕ–ಇರಾನ್ ಸಂಬಂಧಗಳ ಬಗ್ಗೆ ಮಾತನಾಡಿ, ಎರಡು ದೇಶಗಳ ನಡುವಿನ ಸಾಂಸ್ಕೃತಿಕ ಮತ್ತು ರಾಜತಾಂತ್ರಿಕ ಬಾಂಧವ್ಯ ಬಲವಾಗಿದ್ದು ಮುಂದೆಯೂ ಇನ್ನಷ್ಟು ಬಲಪಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭಾರತದ ಹಡಗುಗಳಿಗೆ ಹಾರ್ಮುಜ್ ಜಲಸಂಧಿಯಲ್ಲಿ ಸುರಕ್ಷಿತ ಸಂಚಾರಕ್ಕೆ ಅನುಮತಿ ನೀಡಲಾಗಿದೆ ಎಂಬುದನ್ನೂ ಅವರು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



