ಪೊಲೀಸರ ಸಮ್ಮುಖದಲ್ಲೇ ಧಮ್ಕಿ: ಸಾರಾ ಗೋವಿಂದ್ ವಿರುದ್ಧ ಚೇತನ್ ಅಹಿಂಸಾ ದೂರು, FIR ದಾಖಲು!
ಸಾರಾ ಗೋವಿಂದ್ ಅವರು ತಮ್ಮ ಮನೆಗೆ ಬಂದು ಬೆದರಿಕೆ ಹಾಕಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಮತ್ತು ಪೊಲೀಸರ ಸಮ್ಮುಖದಲ್ಲೇ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಚೇತನ್ ಅಹಿಂಸಾ ಆರೋಪಿಸಿದ್ದಾರೆ.

ಬೆಂಗಳೂರು: ವರನಟ ಡಾ. ರಾಜ್‌ಕುಮಾರ್ ಅವರ ಸಮಾಧಿ ಕುರಿತ ವಿವಾದಾತ್ಮಕ ಹೇಳಿಕೆ ಮತ್ತು ತದನಂತರದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸಾ ಅವರು ನಿರ್ಮಾಪಕ ಹಾಗೂ ಕನ್ನಡ ಪರ ಹೋರಾಟಗಾರ ಸಾರಾ ಗೋವಿಂದ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಾರಾ ಗೋವಿಂದ್ ಅವರು ತಮ್ಮ ಮನೆಗೆ ಬಂದು ಬೆದರಿಕೆ ಹಾಕಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಮತ್ತು ಪೊಲೀಸರ ಸಮ್ಮುಖದಲ್ಲೇ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಚೇತನ್ ಅಹಿಂಸಾ ಆರೋಪಿಸಿದ್ದಾರೆ.
ಜನಪರ ಸಂಘಟನೆಗಳ ಬೆಂಬಲದೊಂದಿಗೆ ಇಂದು ನಗರದ ಶೇಷಾದ್ರಿಪುರಂ ಪೊಲೀಸ್ ಠಾಣೆಗೆ ಬಂದ ಚೇತನ್, ಸಾರಾ ಗೋವಿಂದ್ ವಿರುದ್ಧ ದೂರು ದಾಖಲಿಸಿದ್ದಾರೆ.
ದೂರನ್ನು ಗಮನಿಸಿದ ಪೊಲೀಸರು ಸಾರಾ ಗೋವಿಂದ್ ವಿರುದ್ಧ FIR ದಾಖಲಿಸಿರುವುದಾಗಿ ಚೇತನ್ ಅಹಿಂಸಾ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಚೇತನ್ ಅಹಿಂಸಾ, ಅಕ್ರಮ ಗುಂಪುಗೂಡುವಿಕೆ, ಅನಧಿಕೃತ ಪ್ರವೇಶ, ಕ್ರಿಮಿನಲ್ ಬೆದರಿಕೆ, ಸಾರ್ವಜನಿಕ ಅವಮಾನ, ಪ್ರಚೋದನೆಗೆ ಸಂಬಂಧಿಸಿದ BNS ವಿಧಿಗಳನ್ನು ಅನ್ವಯಿಸಲಾಗಿದೆ. ಈಗ ಕಾನೂನು ಕ್ರಮ ಆರಂಭವಾಗಿದೆ. ಸಂವಿಧಾನದ ಅಡಿಯಲ್ಲಿ ನ್ಯಾಯ ಸಿಗುತ್ತದೆ ಎನ್ನೋ ಭರವೆಸೆಯೊಂದಿಗೆ ನಾವೆಲ್ಲರೂ ಇದ್ದೇವೆ ಎಂದು ಬರೆದುಕೊಂಡಿದ್ದಾರೆ.
ಇದಕ್ಕೂ ಮುನ್ನಾ ಸುದ್ದಿಗಾರರೊಂದಿಗೆ ಮಾತನಾಡಿದ ಚೇತನ್, ಕಳೆದ ಶನಿವಾರ ನಮ್ಮ ಮನೆ ಹತ್ತಿರ ಬಂದಿದ್ದ ಸಾರಾ ಗೋವಿಂದ್ ಅವಾಚ್ಯ ಶಬ್ದಗಳಿಂದ ನಿಂದಿಸಿ, ಧಮ್ಕಿ ಹಾಕಿದ್ದಾರೆ. ಅವರ ಹಿಂದಿನ ಇತಿಹಾಸದ ಬಗ್ಗೆ ಜನರು ಹೇಳಿದ್ದಾರೆ. ಡಾ. ರಾಜ್‌ಕುಮಾರ್ ಅವರ ಹೆಸರನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

'ನನಗೆ ಧಮ್ಕಿ ಹಾಕಿದ್ರೆ, ಗೂಂಡಾ ರೀತಿ ವರ್ತಿಸಿದ್ರೆ ಸುಮ್ನಿರಲ್ಲ, ಕಾನೂನು ಹೋರಾಟ ಮಾಡ್ತೀನಿ': ನಟ ಚೇತನ್ ಅಹಿಂಸಾ
ಗೋವಿಂದು ತನ್ನನ್ನು ಡಾ. ರಾಜ್‌ಕುಮಾರ್ ಅವರ ಅಭಿಮಾನಿ ಎಂದು ಕರೆದುಕೊಳ್ಳಲು ಯೋಗ್ಯನಲ್ಲ" ಮತ್ತು ಕನ್ನಡ ಚಲನಚಿತ್ರ ವಾಣಿಜ್ಯೋದ್ಯಮದಲ್ಲೂ ಅವರ ವಿರುದ್ಧ ಹಣ ಕಳ್ಳತನದ ಆರೋಪಗಳಿವೆ. ಚಿತ್ರೋದ್ಯಮದ ಪರ ಮಾತನಾಡುವವರನ್ನು ಬೆದರಿಸುತ್ತಾರೆ ಎಂದು ದೂರಿದರು.
ಏನಿದು ಘಟನೆ? ಡಾ. ರಾಜ್‌ಕುಮಾರ್ ಸ್ಮಾರಕಕ್ಕೆ ಸರ್ಕಾರ 2.5 ಎಕರೆ ಜಾಗ ನೀಡಿದ್ದನ್ನು ಚೇತನ್ ಪ್ರಶ್ನಿಸಿದ್ದರು. ಇದಕ್ಕೆ ಸಾರಾ ಗೋವಿಂದ್ ನೇತೃತ್ವದ ತಂಡ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಕಳೆದ ಶನಿವಾರ ಚೇತನ್ ಅವರ ಮನೆ ಹತ್ತಿರ ಹೋಗಿ ಧಮ್ಕಿ ಹಾಕಿದ್ದರು. ಒದೆ ಬೀಳುವುದು ಖಂಡಿತ. ಬದುಕೋಕೆ ಬಿಡಲ್ಲ" ಎಂದು ಸಾರಾ ಗೋವಿಂದ್ ಅವರು ಚೇತನ್ ಅವರಿಗೆ ಬಹಿರಂಗವಾಗಿ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ. ಸೌಜನ್ಯದಿಂದ ಮಾತಾಡಿದರೆ ಗೌರವಿಸುತ್ತೇನೆ, ಆದರೆ ಗುಂಡಾವರ್ತನೆ ಮತ್ತು ಜೀವ ಬೆದರಿಕೆಗೆ ಮಣಿಯುವುದಿಲ್ಲ ಎಂದು ಚೇತನ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


