ಬೆಳಗಾವಿ: ಪೆಟ್ರೋಲ್, ಡಿಸೇಲ್ ಕೊರತೆ ವದಂತಿ; ಬಂಕ್ ಮುಂದೆ ಜನರ ದಂಡು; DC ಮೊಹಮ್ಮದ್ ರೋಷನ್ ಹೇಳಿದ್ದೇನು?
ಸೋಮವಾರ ಸಂಜೆಯಿಂದಲೇ ತೈಲ ಕೊರತೆಯ ಸುದ್ದಿ ಹರಡಿದ್ದರಿಂದ ಅಪಾರ ಸಂಖ್ಯೆಯ ಜನ ಬಂಕುಗಳಿಗೆ ಮುಗಿಬಿದ್ದರು.

ಬೆಂಗಳೂರು: ಪೆಟ್ರೋಲ್, ಡಿಸೇಲ್ ಕೊರತೆ ಆಗಲಿದೆ ಎಂಬ ಸುದ್ದಿ ಹರಡಿದ್ದರಿಂದ ನಗರವೂ ಸೇರಿದಂತೆ ಜಿಲ್ಲೆಯ ಬಹುಪಾಲು ಕಡೆಗಳಲ್ಲಿ ಜನರು ವಾಹನಗಳ ಸಮೇತ ಬಂಕುಗಳತ್ತ ಧಾವಿಸಿದ್ದಾರೆ. ಪ್ರತಿಯೊಂದು ಬಂಕ್ ಮುಂದೆ ಕೂಡ ನೂರಕ್ಕೂ ಹೆಚ್ಚು ಜನ ಕಾದು ನಿಂತಿದ್ದು ಮಂಗಳವಾರ ಬೆಳಿಗ್ಗೆಯೂ ಗೋಚರಿಸಿತು.
ಸೋಮವಾರ ಸಂಜೆಯಿಂದಲೇ ತೈಲ ಕೊರತೆಯ ಸುದ್ದಿ ಹರಡಿದ್ದರಿಂದ ಅಪಾರ ಸಂಖ್ಯೆಯ ಜನ ಬಂಕುಗಳಿಗೆ ಮುಗಿಬಿದ್ದರು. ನಗರದ ಕಾಲೇಜು ರಸ್ತೆ, ಕೆಎಲ್ಇ ರಸ್ತೆ, ಕೃಷ್ಣದೇವರಾಯ ವೃತ್ತ, ಕ್ಲಬ್ ರಸ್ತೆ, ಬಸ್ ನಿಲ್ದಾಣ ಬಳಿ, ಬಾಕ್ಸೈಟ್ ರೋಡ್ ಮುಂತಾದೆಡೆ ಇರುವ ಬಂಕುಗಳಲ್ಲಿ ರಾತ್ರಿಯೇ ಪೆಟ್ರೋಲ್ ಖಾಲಿ ಎಂಬ ಫಲಕ ಹಾಕಲಾಯಿತು. ಅಭಾವ ಸೃಷ್ಟಿಯಾಗುವ ಭಯದಲ್ಲಿ ಜನ ಹೆಚ್ಚು ಪೆಟ್ರೋಲ್ ಹಾಕಿಸಿಕೊಂಡಿದ್ದೇ ಇದಕ್ಕೆ ಕಾರಣ ಎಂದು ಬಂಕ್ ಸಿಬ್ಬಂದಿ ತಿಳಿಸಿದರು.
ಗೃಹಬಳಕೆ ಸಿಲಿಂಡರ್ ಹಾಗೂ ಇಂಧನದ ಯಾವುದೇ ಕೊರತೆಯಿಲ್ಲ. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಟ್ಟು ಆತಂಕಕ್ಕೆ ಒಳಗಾಗಬಾರದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮನವಿ ಮಾಡಿಕೊಂಡರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ(ಮಾ.24) ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು. ಬೆಳಗಾವಿ ಜಿಲ್ಲೆ ಹಾಗೂ ನಗರದಲ್ಲಿ ಯಾವುದೇ ರೀತಿಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಕೊರತೆ ಇಲ್ಲ. ಬಂಕ್ ಗಳಲ್ಲಿ ಸ್ಟಾಕ್ ಖಾಲಿಯಾದರೆ ನಗರದಲ್ಲಿ ಕೇವಲ ಐದು ಗಂಟೆಗಳಲ್ಲಿ ಸ್ಟಾಕ್ ಲಭ್ಯವಾಗಲಿದೆ. ಇಂಧನ ಕೊರತೆ ವದಂತಿಗೆ ಕಿವಿಗೊಡಬಾರದು.
ಇಂಧನ ಪೂರೈಕೆ ಕಂಪೆನಿ ಹಾಗೂ ಬಂಕ್‌ಮಾಲೀಕರ ಜತೆ ಈಗಾಗಲೇ ಚರ್ಚೆ ಮಾಡಲಾಗಿದ್ದು, ಇಂಧನ ಕೊರತೆ ಎಲ್ಲಿಯೂ ಕಂಡುಬಂದಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.
ಜನರು ಆತಂಕಕ್ಕೆ ಒಳಗಾಗಿ ಇಂಧನ ಸಂಗ್ರಹಕ್ಕೆ ಮುಂದಾಗಿರುವುದರಿಂದ ಈ ರೀತಿಯ ಗೊಂದಲ ಉಂಟಾಗಿದೆ. ಬಂಕ್ ಗಳಲ್ಲಿ ಬಾಟಲ್ ಅಥವಾ ಕ್ಯಾನ್ ಗಳಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ಮಾರಾಟ ಮಾಡುವುದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿಯನ್ನು ಹರಡಿದರೆ ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



