ಉಪ ಚುನಾವಣೆ ಹಿನ್ನೆಲೆ: ಒಂದು ದಿನ ಮುಂಚಿತವಾಗಿ ಮಾರ್ಚ್ 26ಕ್ಕೆ ರಾಜ್ಯ ಬಜೆಟ್ ಅಧಿವೇಶನ ಮುಕ್ತಾಯ!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27ನೇ ಸಾಲಿನ ಬಜೆಟ್ ಮಂಡಿಸುವುದರೊಂದಿಗೆ ಮಾರ್ಚ್ 6 ರಂದು ಆರಂಭವಾದ ರಾಜ್ಯ ವಿಧಾನಮಂಡಲದ ಬಜೆಟ್ ಅಧಿವೇಶನವು ಮಾರ್ಚ್ 27 ರಂದು ಮುಕ್ತಾಯಗೊಳ್ಳಬೇಕಿತ್ತು.

ಬೆಂಗಳೂರು: ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಉಪಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನಸಭೆಯ ಬಜೆಟ್ ಅಧಿವೇಶನವನ್ನು ಒಂದು ದಿನ ಮುಂಚಿತವಾಗಿ ಮಾರ್ಚ್ 26 ರಂದು ಮುಕ್ತಾಯಗೊಳಿಸಲಾಗುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27ನೇ ಸಾಲಿನ ಬಜೆಟ್ ಮಂಡಿಸುವುದರೊಂದಿಗೆ ಮಾರ್ಚ್ 6 ರಂದು ಆರಂಭವಾದ ರಾಜ್ಯ ವಿಧಾನಮಂಡಲದ ಬಜೆಟ್ ಅಧಿವೇಶನವು ಮಾರ್ಚ್ 27 ರಂದು ಮುಕ್ತಾಯಗೊಳ್ಳಬೇಕಿತ್ತು.
ವಿಧಾನಸಭೆಯ ಕಲಾಪ ಸಲಹಾ ಸಮಿತಿ (BAC) ಸಭೆಯ ನಂತರ ಸ್ಪೀಕರ್ ಯು ಟಿ ಖಾದರ್ ಅವರು ಮಂಗಳವಾರ ಸದನದಲ್ಲಿ ಈ ವಿಷಯ ಪ್ರಕಟಿಸಿದರು.
ಕಲಾಪ ಸಮಿತಿ ಸಭೆ ನಿರ್ಧಾರದಂತೆ ಇಂದು (ಮಾರ್ಚ್ 24) ಬಜೆಟ್ ಮತ್ತು ಬೇಡಿಕೆಗಳ ಮೇಲಿನ ಚರ್ಚೆ ಮುಕ್ತಾಯವಾಗಲಿದೆ. ಈ ಚರ್ಚೆಗಳಿಗೆ ಮಾರ್ಚ್ 26 ರಂದು ಸಿಎಂ ಉತ್ತರ ನೀಡಲಿದ್ದು, ನಂತರ ಧನವಿನಿಯೋಗ ವಿಧೇಯಕವನ್ನು ಚರ್ಚೆಗೆ ತೆಗೆದುಕೊಂಡು ಅಂಗೀಕರಿಸಲಾಗುವುದು. ಮಾರ್ಚ್ 26 ರಂದು ಕಲಾಪದ ನಂತರ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗುವುದು ಎಂದು ಸ್ಪೀಕರ್ ತಿಳಿಸಿದರು.
ಅಧಿವೇಶನವನ್ನು ಒಂದು ದಿನ ಮುಂಚಿತವಾಗಿ ಯಾಕೆ ಮುಕ್ತಾಯಗೊಳಿಸಲಾಗುತ್ತಿದೆ ಎಂದು ಸ್ಪೀಕರ್ ಹೇಳದಿದ್ದರೂ ನಾಯಕರು, ಸಚಿವರು ಮತ್ತು ಶಾಸಕರು ಪ್ರಚಾರದಲ್ಲಿ ಪಾಲ್ಗೊಳ್ಳುವುದರಿಂದ ಮುಂಬರುವ ಉಪಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಉಪ ಚುನಾವಣೆಯಿಂದಾಗಿ ಅಧಿವೇಶನದ ಅವಧಿ ಮೊಟಕುಗೊಳ್ಳಬಹುದು ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ ಮತ್ತು ಕಾರ್ಮಿಕ ಸಚಿವ ಸಂತೋಷ್ ಲಾಡ್ ಸೋಮವಾರ ಹೇಳಿದ್ದರು. ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಾದ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣಕ್ಕೆ ಏಪ್ರಿಲ್ 9 ರಂದು ಉಪಚುನಾವಣೆ ನಡೆಯಲಿದೆ.
ಹಿರಿಯ ಕಾಂಗ್ರೆಸ್ ಶಾಸಕರಾದ ಎಚ್ ವೈ ಮೇಟಿ ಮತ್ತು ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಅನಿವಾರ್ಯವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



