ಯಕ್ಷಗಾನ ರಂಗದ ಮೇರು ಕಲಾವಿದ, ಕಲಾತಪಸ್ವಿ ಸೂರಿಕುಮೇರು ಗೋವಿಂದ ಭಟ್ ಅಸ್ತಂಗತ
ಯಕ್ಷಗಾನ ಕ್ಷೇತ್ರದ ‘ನಡೆದಾಡುವ ವಿಶ್ವಕೋಶ’, ‘ದಶಾವತಾರಿ’ ಎಂದೇ ಖ್ಯಾತರಾಗಿದ್ದ ಗೋವಿಂದ ಭಟ್ ತೆಂಕುತಿಟ್ಟು ಯಕ್ಷಗಾನ ಇದುವರೆಗೆ ಕಂಡ ಸರ್ವಶ್ರೇಷ್ಠ ಕಲಾವಿದರು ಎನಿಸಿಕೊಂಡಿದ್ದರು. ಯಕ್ಷಗಾನದಲ್ಲಿ ಅನೇಕ ಶಿಷ್ಯರನ್ನು ಅವರು ಹುಟ್ಟುಹಾಕಿದ್ದಾರೆ.

ಬಂಟ್ವಾಳ: ತೆಂಕುತಿಟ್ಟು ಯಕ್ಷಗಾನ ರಂಗದ ಮೇರು ಕಲಾವಿದ, ಕಲಾತಪಸ್ವಿ ಯಕ್ಷರಂಗದ ಭೀಷ್ಮ ಸೂರಿಕುಮೇರು ಕೆ.ಗೋವಿಂದ ಭಟ್ (90ವ) ವಯೋಸಹಜ ಅನಾರೋಗ್ಯದಿಂದ ನಿನ್ನೆ ಶುಕ್ರವಾರ ರಾತ್ರಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ತಮ್ಮ ಹಿರಿಯ ಪುತ್ರನ ನಿವಾಸದಲ್ಲಿ ನಿಧನ ಹೊಂದಿದರು. ಅವರು ಮೂವರು ಪುತ್ರರನ್ನು ಅಗಲಿದ್ದಾರೆ.
ಕೆಲವು ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತ ಅವರು ಬಳಿಕ ಶಿವಮೊಗ್ಗದಲ್ಲಿರುವ ಹಿರಿಯ ಮಗನ ಮನೆಗೆ ವಾಪಸ್ಸಾಗಿದ್ದರು.
ಯಕ್ಷಗಾನ ಕ್ಷೇತ್ರದ ‘ನಡೆದಾಡುವ ವಿಶ್ವಕೋಶ’, ‘ದಶಾವತಾರಿ’ ಎಂದೇ ಖ್ಯಾತರಾಗಿದ್ದ ಗೋವಿಂದ ಭಟ್ ತೆಂಕುತಿಟ್ಟು ಯಕ್ಷಗಾನ ಇದುವರೆಗೆ ಕಂಡ ಸರ್ವಶ್ರೇಷ್ಠ ಕಲಾವಿದರು ಎನಿಸಿಕೊಂಡಿದ್ದರು. ಯಕ್ಷಗಾನದಲ್ಲಿ ಅನೇಕ ಶಿಷ್ಯರನ್ನು ಅವರು ಹುಟ್ಟುಹಾಕಿದ್ದಾರೆ.
ಬಡತನವನ್ನ ಮೆಟ್ಟಿನಿಂತು ಸಾಧನೆ
ಯಕ್ಷಗಾನ ಹೆಜ್ಜೆಗಾರಿಕೆ, ಮಾತುಗಾರಿಕೆಯಲ್ಲಿ ಜನರನ್ನ ಸೆಳೆಯುತ್ತಿದ್ದ ಗೋವಿಂದ ಭಟ್ಟರು ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಸದಾ ಸಿದ್ಧಹಸ್ತರಾಗಿದ್ದರು. 1940ರ ಮಾರ್ಚ್ 22ರಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಕೋಡಪದವಿನ ಕಡು ಬಡತನದ ಕುಟುಂಬದಲ್ಲಿ ಜನಸಿದ ಗೋವಿಂದ ಭಟ್ಟರು, ಬಡತನವನ್ನ ಮೆಟ್ಟಿ ನಿಂತು ಸಾಧನೆಗೈದರು.
ಧರ್ಮಸ್ಥಳ ಮೇಳದಿಂದ ಕಲಾ ಪಯಣ ಆರಂಭ
1951ರಲ್ಲಿ ಬಾಲಗೋಪಾಲ ವೇಷದ ಮೂಲಕ ಧರ್ಮಸ್ಥಳ ಮೇಳದಲ್ಲಿ ಆರಂಭವಾದ ಅವರ ಕಲಾ ಪಯಣ, ಯಕ್ಷಗಾನದ ಇತಿಹಾಸದಲ್ಲಿ ದಾಖಲೆಯಾಗಿದೆ. ಇಳಿ ವಯಸ್ಸಿನಲ್ಲೂ ಯಕ್ಷಗಾನ ರಂಗದ ಪ್ರೀತಿಯನ್ನು ಬಿಡಲಿಲ್ಲ. ಕಣ್ಣಿನ ದೃಷ್ಟಿಯೇ ಮಂಜಾಗುತ್ತಿದ್ದರೂ, ಶರೀರ ದಣಿಯುತ್ತಿದ್ದರೂ ರಂಗಸ್ಥಳ ಬಿಟ್ಟು ನನಗೇನು ಗತಿ ಎಂದು ಅಪರೂಪಕ್ಕೆ ವೇಷಹಾಕಿ ಕಲಾಸೇವೆ ಮಾಡುತ್ತಿದ್ದರಂತೆ.
ಧರ್ಮಸ್ಥಳ ಯಕ್ಷಗಾನ ಮೇಳದ ಪ್ರಮುಖ ಕಲಾವಿದರಾಗಿ, ಒಂದೇ ಮೇಳದಲ್ಲಿ 54 ವರ್ಷಗಳಿಗೂ ಹೆಚ್ಚು ಕಾಲ ತಿರುಗಾಟ ನಡೆಸಿ ದಾಖಲೆ ಮೆರೆದವರು. ಜೊತೆಗೆ ಮೂಲ್ಕಿ, ಕೂಡ್ಲು, ಸುರತ್ಕಲ್ (ಕೆಳಗಿನ ಮಾರಿಗುಡಿ) ಇರಾ ಸೋಮನಾಥೇಶ್ವರ ಮೇಳಗಳಲ್ಲಿ ತಿರುಗಾಟ ನಡೆಸಿದ್ದಾರೆ.
ಹಲವು ಪಾತ್ರಗಳು ಜನಪ್ರಿಯ
ಮಣಿಮೇಖನೆ, ಕಾವೇರಿ ಮಹಾತ್ಮ, ಮೂರುವರೆ ವಜ್ರಗಳು, ರಾಜಶೇಖರ ವಿಲಾಸ, ಮಹಾವೀರ ಸಾಮ್ರಾಟ ಅಶೋಕ, ನಹುಷೇಂದ್ರ ಪ್ರಸಂಗಗಳನ್ನು ಅವರು ರಚಿಸಿದ್ದಾರೆ. ಗೋವಿಂದ ಭಟ್ ಅವರು ವಿಶೇಷವಾಗಿ ರಕ್ತಬೀಜ, ಇಂದ್ರಜಿತ್, ಭೀಷ್ಮ, ಕೌರವ ಮುಂತಾದ ನಾನಾ ಪಾತ್ರಗಳ ಮೂಲಕ ಮನೆಮಾತಾಗಿದ್ದಾರೆ.
ಪ್ರಶಸ್ತಿ, ಗೌರವಗಳು
ಛಂದೋಬದ್ಧವಾದ ಮಾತಿನ ಜತೆಗೆ ನೃತ್ಯದಲ್ಲೂ ಪ್ರಾವೀಣ್ಯ ಪಡೆದಿದ್ದರು. ಅವರಿಗೆ 2008ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2016ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತ್ ಪುರಸ್ಕಾರ, ಕರ್ನಾಟಕ ಜಾನಪದ ಅಕಾಡೆಮಿ ಸಾಧನಾ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಗೌರವ ಸನ್ಮಾನಗಳು ದೊರೆತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




