News Wrap 20-03-26 | ಕಾಂಗ್ರೆಸ್ ಹೈಕಮಾಂಡ್ ಗೆ ಸೆಡ್ಡು: ನಾಮಪತ್ರ ಸಲ್ಲಿಸಿದ ಶಾಮನೂರು ಮೊಮ್ಮಗ ಸಮರ್ಥ್; ಪ್ರೀಮಿಯಂ ಪೆಟ್ರೋಲ್ ಬೆಲೆ ಏರಿಕೆ; ನೀರಾನೆ ದಾಳಿ: ಪಶು ವೈದ್ಯೆ ಸಾವು!

1. ಕಾಂಗ್ರೆಸ್ ಹೈಕಮಾಂಡ್ ಗೆ ಸೆಡ್ಡು: ನಾಮಪತ್ರ ಸಲ್ಲಿಸಿದ ಶಾಮನೂರು ಮೊಮ್ಮಗ ಸಮರ್ಥ್
ರಾಜ್ಯದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳ ಉಪ ಚುನಾವಣೆಗೆ ಕಾಂಗ್ರೆಸ್ ನಲ್ಲಿ ಟಿಕೆಟ್ ಹಂಚಿಕೆ ಕಗ್ಗಂಟು ಇನ್ನೂ ಬಗೆಹರಿದಿಲ್ಲ. ಈ ನಡುವೆ ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ದಿವಂಗತ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್ ಶಾಮನೂರು ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ. ಇಂದು ಮಧ್ಯಾಹ್ನ ತಮ್ಮ ತಾಯಿ ಸಂಸದೆ ಡಾ ಪ್ರಭಾ ಮಲ್ಲಿಕಾರ್ಜುನ್ ಸೇರಿದಂತೆ ಆಪ್ತರೊಂದಿಗೆ ತೆರಳಿ ಸಮರ್ಥ್ ನಾಮಪತ್ರ ಸಲ್ಲಿಸಿದರು. ಸಮರ್ಥ್ ಬಿ-ಫಾರಂ ಇಲ್ಲದೆಯೇ ಕಾಂಗ್ರೆಸ್ ಪರವಾಗಿ ಮಾತ್ರವಲ್ಲದೆ, ಪಕ್ಷೇತರ ಅಭ್ಯರ್ಥಿಯಾಗಿಯೂ ನಾಮಪತ್ರ ಸಲ್ಲಿಸಿರುವುದು ಚರ್ಚೆಗೆ ಕಾರಣವಾಗಿದೆ. ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಬೆಂಗಳೂರಿಗೆ ಆಗಮಿಸಿದ್ದಾರೆ. ಮತ್ತೊಂದೆಡೆ ದಾವಣಗೆರೆ ದಕ್ಷಿಣ ಉಪಚುನಾವಣೆಗೆ ಬಿಜೆಪಿ ರಾಜ್ಯ ಎಸ್ಟಿ ಮೋರ್ಚಾದ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪಗೆ ಟಿಕೆಟ್ ಸಿಕ್ಕಿದ್ದು ಇಂದು ನಾಮಪತ್ರ ಸಲ್ಲಿಸಿದರು.
2. ಲಾಕಪ್ ನಲ್ಲಿ ವ್ಯಕ್ತಿ ಸಾವು; CID ತನಿಖೆ
ತುಮಕೂರಿನ ಹುಳಿಯಾರು ಪೊಲೀಸ್ ಠಾಣೆಯಲ್ಲಿ 50 ವರ್ಷದ ವ್ಯಕ್ತಿಯ ಸಾವಿನ ಬಗ್ಗೆ ಸಿಐಡಿ ತನಿಖೆಗೆ ಗೃಹ ಸಚಿವ ಜಿ ಪರಮೇಶ್ವರ್ ಆದೇಶಿಸಿದ್ದಾರೆ. ಜೂಜಾಟದಲ್ಲಿ ತೊಡಗಿದ್ದ ಆರೋಪದ ಮೇಲೆ ಯಳನಾಡು ಗ್ರಾಮದ ಕಾಂತರಾಜುನನ್ನು ಠಾಣೆಗೆ ಕರೆತಂದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾಗ ಬೆಳಗಿನ ಜಾವ 1:30 ರ ಸುಮಾರಿಗೆ ಸಾವನ್ನಪ್ಪಿದ್ದರು. ವ್ಯಕ್ತಿ ಸಾವಿನ ನಂತರ, ಗ್ರಾಮಸ್ಥರು ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದರು ಮತ್ತು ಇದು ಲಾಕಪ್ ಡೆತ್ ಪ್ರಕರಣ ಎಂದು ಆರೋಪಿಸಿದರು. ಸಾವಿಗೆ ಕಾರಣವಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಶವವನ್ನು ಠಾಣೆಯ ಆವರಣದೊಳಗೆ ಇರಿಸಿ ಪ್ರತಿಭಟನೆ ನಡೆಸಲಾಯಿತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ, ಸಿಐಡಿ ತನಿಖೆಗೆ ಆದೇಶಿಸಿದೆ.
3. ತಾವರೆಕೊಪ್ಪ ಧಾಮದಲ್ಲಿ ನೀರಾನೆ ದಾಳಿ: ವೈದ್ಯೆ ಸಾವು
ಶಿವಮೊಗ್ದದ ತಾವರೆಕೊಪ್ಪ ಹುಲಿ-ಸಿಂಹ ಧಾಮದಲ್ಲಿ ಗುರುವಾರ ತಡರಾತ್ರಿ ಚಿಕಿತ್ಸೆ ನೀಡಲು ತೆರಳಿದ್ದ ವೇಳೆ ನೀರಾನೆ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ವನ್ಯಜೀವಿ ವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಬೆಂಗಳೂರಿನ ಬನ್ನೇರುಘಟ್ಟ ನಿವಾಸಿ ಸಮೀಕ್ಷಾ ರೆಡ್ಡಿ ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿನಲ್ಲಿ ಪದವಿ ಮುಗಿಸಿದ್ದರು. ಒಂದೂವರೆ ತಿಂಗಳ ಹಿಂದಷ್ಟೇ ಮೃಗಾಲಯದಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡು ತರಬೇತಿ ಪಡೆಯುತ್ತಿದ್ದರು. ಗುರುವಾರ ರಾತ್ರಿ ಸುಮಾರು 10.30ರ ಸುಮಾರಿಗೆ ಮೃಗಾಲಯದ ಆಸ್ಪತ್ರೆಗೆ ಹೋಗಿ ಹಕ್ಕಿಯೊಂದಕ್ಕೆ ಚಿಕಿತ್ಸೆ ನೀಡಿದರು. ನಂತರ ಗರ್ಭ ಧರಿಸಿದ್ದ ನೀರಾನೆ ಆವರಣಕ್ಕೆ ಪ್ರವೇಶಿಸಿ ಥರ್ಮಲ್ ಕ್ಯಾಮೆರಾ ಬಳಸಿ ಅದರ ದೇಹದ ಉಷ್ಣತೆಯನ್ನು ಪರಿಶೀಲಿಸಿದರು. ಈ ಸಮಯದಲ್ಲಿ, ನೀರಾನೆ ಆಕೆಯ ಮೇಲೆ ದಾಳಿ ಮಾಡಿತ್ತು.
4. CM ಸಿದ್ದರಾಮಯ್ಯ ವಿರುದ್ಧ ಬೆದರಿಕೆ ಆರೋಪ; ಅರ್ಜಿ ವಿಚಾರಣೆಗೆ 'ಸುಪ್ರೀಂ' ನಕಾರ!
ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶದ ಮೇರೆಗೆ ತನ್ನ ಆಸ್ತಿಯನ್ನು ವಶಪಡಿಸಿಕೊಳ್ಳಲು ಬೆದರಿಕೆಗಳು ಬರುತ್ತಿವೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಶುಕ್ರವಾರ ನಡೆದ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಲಯದಲ್ಲಿ ರಾಜಕೀಯ ಹೋರಾಟ ಬೇಡ ಎಂದು ಹೇಳಿದೆ. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಅರ್ಜಿ ವಜಾಗೊಳಿಸಿದೆ. ನನಗೆ ಬೆದರಿಕೆ ಬರುತ್ತಿದೆ. ನಾನು ಕರ್ನಾಟಕಕ್ಕೆ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ನನ್ನ ಭದ್ರತೆಗೆ ಅಪಾಯವಿದ್ದು ನಾನು ದೆಹಲಿಯಲ್ಲಿ ನೆಲೆಸುವಂತಾಗಿದೆ. ಕರ್ನಾಟಕದಲ್ಲಿರುವ ತಮ್ಮ ಸ್ವಂತ ಮನೆಯಲ್ಲಿ ವಾಸಿಸಲು ಸಾಧ್ಯವಾಗುತ್ತಿಲ್ಲ. ಕಳೆದ ಜನವರಿಯಲ್ಲಿ ನನ್ನ ಮನೆಯ ಮೇಲೆ ಕಲ್ಲು ತೂರಾಟ ನಡೆಯಿತು. ಗೂಂಡಾಗಳು ಮನೆಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸ ಮಾಡಿದರು. ನಾನು ಕರ್ನಾಟಕದಲ್ಲೇ ನೆಲೆಸಲು ಪೂರಕವಾದ ಆದೇಶ ನೀಡಬೇಕೆಂದು ಅರ್ಜಿದಾರ ಪರ ವಕೀಲರು ಮನವಿ ಮಾಡಿದ್ದರು.
5. ಪಶ್ಚಿಮ ಏಷ್ಯಾ ಯುದ್ಧ: ಪ್ರೀಮಿಯಂ ಪೆಟ್ರೋಲ್ ಬೆಲೆ ಏರಿಕೆ
ಬೆಂಗಳೂರಿನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಕೊರತೆಯನ್ನು ನೀಗಿಸಲು ತುರ್ತು ಕ್ರಮಕೈಗೊಳ್ಳಬೇಕು ಎಂದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿಗೆ ಪತ್ರ ಬರೆದಿದ್ದಾರೆ. ರಾಜ್ಯಾದ್ಯಂತ ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆಯಲ್ಲಿನ ಕೊರತೆಯು ಜೀವನೋಪಾಯವನ್ನು ಅಸ್ತವ್ಯಸ್ತಗೊಳಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಬರೆದಿದ್ದಾರೆ. ಸುಮಾರು 50,000 ಸಿಲಿಂಡರ್‌ಗಳಿಗೆ ಬೇಡಿಕೆಯಿದೆ. ಆದರೆ ಪ್ರಸ್ತುತ ದಿನಕ್ಕೆ ಕೇವಲ 1,000 ಸಿಲಿಂಡರ್‌ಗಳು ಮಾತ್ರ ಸಿಗುತ್ತಿವೆ. ಪರಿಣಾಮ ಅನೇಕ ಸಂಸ್ಥೆಗಳು ಮತ್ತು ಹೋಟೆಲ್‌ಗಳು ಮುಚ್ಚುವ ಪರಿಸ್ಥಿತಿ ಎದುರಿಸುತ್ತಿವೆ ಎಂದು ಬರೆದಿದ್ದಾರೆ. ಮತ್ತೊಂದೆಡೆ ಪಶ್ಚಿಮ ಏಷ್ಯಾ ನಡುವಿನ ಯುದ್ಧದಿದ್ದಾಗಿ ಪ್ರೀಮಿಯಂ ಪೆಟ್ರೋಲ್ ದರ ಏರಿಕೆಯಾಗಿದೆ. ಬಿಪಿಸಿಎಲ್‌ನ ಸ್ಪೀಡ್, ಎಚ್‌ಪಿಸಿಎಲ್‌ನ ಪವರ್ ಮತ್ತು ಐಒಸಿಎಲ್‌ನ XP95 ಪೆಟ್ರೋಲ್ ಬೆಲೆಗಳು ಲೀಟರ್‌ಗೆ 2.09 ರೂಪಾಯಿಯಿಂದ 2.35 ರೂಪಾಯಿ ವರೆಗೆ ಹೆಚ್ಚಳ ಕಂಡಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


