'ಸಿದ್ದರಾಮಯ್ಯ ಓದಿದ ಬಜೆಟ್ ನಲ್ಲಿ ಏನಿತ್ತು? ನಾನು-ಸಿಎಂ ಒಟ್ಟಿಗೆ ಓದುತ್ತಿದ್ದಾಗ ಒಂದು ರೂಪಾಯಿ ಹಾಕಿ ಬಿಯರ್ ತರುತ್ತಿದ್ದೆವು': ಹೆಚ್ ವಿಶ್ವನಾಥ್
ಸರ್ಕಾರದ ದುಂದುವೆಚ್ಚ, ಅಬಕಾರಿ ನೀತಿ ಮತ್ತು ಆಡಳಿತಾತ್ಮಕ ವೈಫಲ್ಯಗಳನ್ನು ವಿಧಾನಪರಿಷತ್ತಿನ ಕಲಾಪದಲ್ಲಿ ಟೀಕಿಸಿದ ಹೆಚ್ ವಿಶ್ವನಾಥ್, ಸರ್ಕಾರ ಇದುವರೆಗೆ ಜಾಹೀರಾತುಗಳಿಗಾಗಿಯೇ 532 ಕೋಟಿ ರೂಪಾಯಿ ಖರ್ಚು ಮಾಡಿದೆ ಎಂದರು.

ಬೆಂಗಳೂರು: ವಿಧಾನಪರಿಷತ್ತಿನಲ್ಲಿ ರಾಜ್ಯ ಸರ್ಕಾರದ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಹೆಚ್. ವಿಶ್ವನಾಥ್, ಸಿದ್ದರಾಮಯ್ಯನವರು ಓದಿದ ಮೂರೂವರೆ ಗಂಟೆಗಳ ಕಾಲದ ಬಜೆಟ್ ನಲ್ಲಿ ಏನೂ ಇರಲಿಲ್ಲ ಎಂದು ಟೀಕಿಸಿದ್ದಾರೆ.
ಸರ್ಕಾರದ ದುಂದುವೆಚ್ಚ, ಅಬಕಾರಿ ನೀತಿ ಮತ್ತು ಆಡಳಿತಾತ್ಮಕ ವೈಫಲ್ಯಗಳನ್ನು ವಿಧಾನಪರಿಷತ್ತಿನ ಕಲಾಪದಲ್ಲಿ ಟೀಕಿಸಿದ ಹೆಚ್ ವಿಶ್ವನಾಥ್, ಸರ್ಕಾರ ಇದುವರೆಗೆ ಜಾಹೀರಾತುಗಳಿಗಾಗಿಯೇ 532 ಕೋಟಿ ರೂಪಾಯಿ ಖರ್ಚು ಮಾಡಿದೆ. ಇದನ್ನು 'ಅಡ್ವರ್ಟೈಸ್‌ಮೆಂಟ್ ಸರ್ಕಾರ' ಎನ್ನಬಹುದು.ಅಕ್ಷರ ಮತ್ತು ಆರೋಗ್ಯ ಚೆನ್ನಾಗಿದ್ದರೆ ಅನ್ನ ತಾನಾಗಿಯೇ ಹುಟ್ಟುತ್ತದೆ, ಆದರೆ ರಾಜ್ಯದಲ್ಲಿ ಇವೆರಡೂ ವ್ಯವಸ್ಥೆಗಳು ಸರಿಯಿಲ್ಲ. ಆಡಳಿತ ವಿಫಲವಾಗಿದ್ದು, ಅನುಷ್ಠಾನ ಶೂನ್ಯವಾಗಿದೆ" ಎಂದರು.
ಕೆಳಮನೆಯಲ್ಲಿ ಸ್ಪೀಕರ್ ವಾಕ್‌ಔಟ್ ಮಾಡಿದ ಪ್ರಸಂಗವನ್ನು ಉಲ್ಲೇಖಿಸಿದ ಅವರು ಮೂವರು ಅಧಿಕಾರಿಗಳನ್ನು ಅಮಾನತು ಮಾಡ್ತೇವೆ ಅಂದಿದ್ರಿ, ಯಾಕಿನ್ನೂ ಮಾಡಿಲ್ಲ? ನಿಮಗವರನ್ನು ಅಮಾನತು ಮಾಡಲು ಸಾಧ್ಯವೇ ಇಲ್ಲ. ಯಾಕೆ ಸುಮ್ಮನೆ ಸುಳ್ಳು ಹೇಳುತ್ತೀರಿ ಎಂದು ಟೀಕಿಸಿದರು.
ಬೆಲೆ ಏರಿಕೆ ಮತ್ತು ಅಬಕಾರಿ ನೀತಿಯ ಟೀಕೆ
ಅಡುಗೆ ಅನಿಲ ಬೆಲೆ ಏರಿಕೆಯಾದಾಗ ಪ್ರಧಾನಿ ಮೋದಿ ರಾಜೀನಾಮೆಗೆ ಆಗ್ರಹಿಸಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ, ಈಗ ಹಾಲು, ನೀರು ದರ ಹೆಚ್ಚಳ ಮಾಡಿದ್ದೀರಿ, ಹಾಗಾದರೆ ನೀವೆಷ್ಟು ಬಾರಿ ರಾಜೀನಾಮೆ ನೀಡಬೇಕು ಎಂದು ಹೆಚ್ ವಿಶ್ವನಾಥ್ ಪ್ರಶ್ನಿಸಿದರು.
ಬಿಯರ್ ಬೆಲೆಯನ್ನು 230 ರೂಪಾಯಿಗೆ ಏರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅವರು, ನಾನು ಮತ್ತು ಸಿಎಂ ಒಟ್ಟಿಗೆ ಓದುತ್ತಿದ್ದಾಗ ಒಂದು ರೂಪಾಯಿ ಹಾಕಿ ಬಿಯರ್ ತರುತ್ತಿದ್ದೆವು. ಈಗ ಬಿಯರ್ ಬೆಲೆ ಏರಿಕೆಯಿಂದ ಮಕ್ಕಳು ಗಾಂಜಾ ಮೊರೆ ಹೋಗುತ್ತಿದ್ದಾರೆ. ಮೈಸೂರಿನಲ್ಲಿ ಗುಜರಾತ್ ಪೊಲೀಸರು ಬಂದು ಡ್ರಗ್ಸ್ ಫ್ಯಾಕ್ಟರಿ ಹಿಡಿಯುತ್ತಾರೆ ಅಂದರೆ ನಮ್ಮ ಪೊಲೀಸರು ಮಾಮೂಲಿ ಪಡೆದು ಮಲಗಿದ್ದಾರಾ ಎಂದು ಖಾರವಾಗಿ ಪ್ರಶ್ನಿಸಿದರು. ಅಬಕಾರಿ ಮೇಲೆ ತೆರಿಗೆ ಹಾಕಿ ಯುವಜನರನ್ನು ಕೊಲ್ಲುವ ಬದಲು, 'ರಿಯಲ್ ಎಸ್ಟೇಟ್ ಟ್ಯಾಕ್ಸ್' ವಿಭಾಗ ಮಾಡಿ ಅಲ್ಲಿ ತೆರಿಗೆ ವಸೂಲಿ ಮಾಡಿ ಎಂದು ಸಲಹೆ ನೀಡಿದರು.
ಕುರಿಗಾಹಿಗಳ ಸಮಸ್ಯೆ ಮತ್ತು ಮಂಡಳಿ
ಕುರಿ ಸಾಕಾಣಿಕೆ ಇಂದು ಬ್ರಾಹ್ಮಣರು ಸೇರಿದಂತೆ ಎಲ್ಲರೂ ಮಾಡುತ್ತಿರುವ ದೊಡ್ಡ ಉದ್ಯಮ. ಇದೊಂದು 'ಮೂವಿಂಗ್ ಬ್ಯಾಂಕ್'. ಕುರಿ ಮಂಡಳಿಗೆ ಹಣ ನೀಡುವ ಬದಲು ಶಾಸಕರಿಗೆ ಹಣ ನೀಡಲಾಗುತ್ತಿದೆ. ಶಾಸಕರು ಆ ಹಣವನ್ನು ಕುರಿಗಾಹಿಗಳಿಗೆ ನೀಡದೆ ಬೇರೆಯವರಿಗೆ ಹಂಚುತ್ತಿದ್ದಾರೆ ಎಂದು ದೂರಿದರು.ಮುಖ್ಯಮಂತ್ರಿಗಳಿಗೆ ಕೆಲಸದ ಒತ್ತಡವಿರುತ್ತದೆ, ಹಾಗಾಗಿ ರಾಜ್ಯಕ್ಕೆ ಪ್ರತ್ಯೇಕ ಹಣಕಾಸು ಸಚಿವರ ನೇಮಕವಾಗಲಿ ಎಂದು ಕುಮಾರಸ್ವಾಮಿ ಅವಧಿಯಲ್ಲೂ ಹೇಳಿದ್ದೆ, ಈಗಲೂ ಹೇಳುತ್ತಿದ್ದೇನೆ ಎಂದರು.
ಮೈಸೂರು-ಬೆಂಗಳೂರಿನ 120 ಕಿ.ಮೀ ಪ್ರಯಾಣಕ್ಕೆ ಸ್ಪೆಷಲ್ ಫ್ಲೈಟ್ ಬಳಸುವ ಅಗತ್ಯವೇನಿದೆ? ಕೋಟ್ಯಾಧಿಪತಿಗಳಾದ ಸುಧಾಮೂರ್ತಿ, ನಾರಾಯಣಮೂರ್ತಿ ಅವರೇ ಇಂಡಿಗೊ ವಿಮಾನದಲ್ಲಿ ಹೋಗುತ್ತಾರೆ. ನಮ್ಮ ಸರ್ಕಾರಕ್ಕೆ ಅಷ್ಟು ಹಣವಿದೆಯೇ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ 138 ಜನರಿಗೆ ಕ್ಯಾಬಿನೆಟ್ ರ್ಯಾಂಕ್ ನೀಡಲಾಗಿದೆ. ಕಾಂಗ್ರೆಸ್ ಸರ್ಕಾರ ಸಂವಿಧಾನ ಉಲ್ಲಂಘಿಸಿದೆ. ಸಿಎಂ ಮೀಡಿಯಾ ಸೆಕ್ರೆಟರಿಗೂ ಕ್ಯಾಬಿನೆಟ್ ದರ್ಜೆ ಬೇಕೆ, ಮಂತ್ರಿಗಳನ್ನು ಹೊಡೆಯುವವರು ಯಾರಿದ್ದಾರೆ ಎಂದು ಅತಿಯಾದ ಸೆಕ್ಯೂರಿಟಿ ಬಗ್ಗೆ ಟೀಕಿಸಿದರು.
ಬೆಂಗಳೂರು ಅಭಿವೃದ್ಧಿ ಶೂನ್ಯ
ಬೆಂಗಳೂರಿನ ಅಭಿವೃದ್ಧಿಗೆ ಅನುದಾನ ಇಲ್ಲದಾಗಿದೆ. ಪಕ್ಷಪಾತ ಹೆಚ್ಚಾಗಿದೆ. ಸಂಚಾರ ದಟ್ಟಣೆ, ತ್ಯಾಜ್ಯ ನಿರ್ವಹಣೆ, ರಸ್ತೆ ದುರಸ್ತಿ ಸೇರಿ ಯಾವ ಮೂಲಸೌಕರ್ಯಕ್ಕೂ ಆದ್ಯತೆ ಸಿಗುತ್ತಿಲ್ಲ. ಭ್ರಷ್ಟಾಚಾರ ಹೆಚ್ಚಾಗಿದೆ. ಉದ್ಯಮಗಳು ಬೆಂಗಳೂರಿನ ಕೈತಪ್ಪುತ್ತಿವೆ. ಒಟ್ಟಾರೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮೂಲಕ ಬೆಂಗಳೂರನ್ನು ಐದು ಪಾಲಿಕೆಗಳಾಗಿ ವಿಭಾಗಿಸಿದ್ದರಿಂದ ಯಾವ ಪ್ರಯೋಜನವೂ ಆಗಿಲ್ಲ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



