ರಾಜ್ಯ

ದೆಹಲಿಯಿಂದ ಬಂದ ಮೇಲೆ ಗುಡ್ ನ್ಯೂಸ್?: ಇಂದು ರಾಜಧಾನಿಯಲ್ಲಿ ಕರ್ನಾಟಕ ಸಂಸದರ ಜೊತೆ ಡಿ.ಕೆ ಶಿವಕುಮಾರ್ ಸಭೆ

ಒಂದು ವೇಳೆ ಕೇಂದ್ರ ಸರ್ಕಾರ ಮೂರು ರಾಜ್ಯಗಳ ಒತ್ತಡಕ್ಕೆ ಮಣಿದು ಭೂ ಸ್ವಾಧೀನಕ್ಕೆ ತಡೆ ನೀಡಿದರೆ, ಮಹತ್ವಾಕಾಂಕ್ಷೆಯ ಆಲಮಟ್ಟಿ ಯೋಜನೆ ಗಗನ ಕುಸುಮವೂ ಆಗಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಡಿ.ಕೆ.ಶಿವಕುಮಾರ್‌ ಸಂಸದರ ಜೊತೆ ಸಭೆ ನಡೆಸುತ್ತಿದ್ದಾರೆ.

ದೆಹಲಿಯಿಂದ ಬಂದ ಮೇಲೆ ಗುಡ್ ನ್ಯೂಸ್?: ಇಂದು ರಾಜಧಾನಿಯಲ್ಲಿ ಕರ್ನಾಟಕ ಸಂಸದರ ಜೊತೆ ಡಿ.ಕೆ ಶಿವಕುಮಾರ್ ಸಭೆ
ಡಿಸಿಎಂ ಡಿ ಕೆ ಶಿವಕುಮಾರ್
Published On :

ಬೆಂಗಳೂರು: ರಾಜ್ಯದ ವಿವಿಧ ಯೋಜನೆಗಳ ಕುರಿತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ದೆಹಲಿಯಲ್ಲಿ ಇಂದು ಮಂಗಳವಾರ ಕರ್ನಾಟಕದ ಸಂಸದರ ಸಭೆ ನಡೆಸಲಿದ್ದಾರೆ.

ದೆಹಲಿ ಪ್ರವಾಸ ಕೈಗೊಂಡಿರುವ ಡಿ.ಕೆ.ಶಿವಕುಮಾರ್‌ ಸಂಜೆ ಎಲ್ಲಾ ಪಕ್ಷದ ಸಂಸದರನ್ನು ಸಭೆಗೆ ಆಹ್ವಾನಿಸಿದ್ದಾರೆ. ಆಲಮಟ್ಟಿ ಅಣೆಕಟ್ಟಿನ ಎತ್ತರಕ್ಕೆ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ರಾಜ್ಯ ಸರ್ಕಾರಗಳು ಅಡ್ಡಿ ಪಡಿಸುತ್ತಿದ್ದು, ಭೂ ಸ್ವಾಧೀನ ಪ್ರಕ್ರಿಯೆ ಕೈಗೊಳ್ಳದಂತೆ ತಡೆ ನೀಡಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ಇದು ರಾಜ್ಯಸರ್ಕಾರಕ್ಕೆ ಸಂಕಷ್ಟವಾಗಿದೆ.

ಒಂದು ವೇಳೆ ಕೇಂದ್ರ ಸರ್ಕಾರ ಮೂರು ರಾಜ್ಯಗಳ ಒತ್ತಡಕ್ಕೆ ಮಣಿದು ಭೂ ಸ್ವಾಧೀನಕ್ಕೆ ತಡೆ ನೀಡಿದರೆ, ಮಹತ್ವಾಕಾಂಕ್ಷೆಯ ಆಲಮಟ್ಟಿ ಯೋಜನೆ ಗಗನ ಕುಸುಮವೂ ಆಗಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಡಿ.ಕೆ.ಶಿವಕುಮಾರ್‌ ಸಂಸದರ ಜೊತೆ ಸಭೆ ನಡೆಸುತ್ತಿದ್ದಾರೆ.

ದೆಹಲಿ ಪ್ರಯಾಣಕ್ಕೂ ಮುನ್ನ ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಡಿ.ಕೆ. ಶಿವಕುಮಾರ್, ಕೇಂದ್ರ ಸರ್ಕಾರದಿಂದ ಬಾಕಿ ಉಳಿದಿರುವ ನೀರಾವರಿ ಕಾಮಗಾರಿಗಳ ಕುರಿತು ಸಂಸತ್ ಸದಸ್ಯರನ್ನು ಭೇಟಿ ಮಾಡಲು ನಾನು ದೆಹಲಿಗೆ ಹೋಗುತ್ತಿದ್ದೇನೆ. ಈ ಭೇಟಿಗೆ ರಾಜ್ಯ ಸಚಿವರಾದ ಹೆಚ್ .ಕೆ. ಪಾಟೀಲ ಮತ್ತು ಎಂ.ಬಿ. ಪಾಟೀಲರೂ ನನ್ನೊಂದಿಗೆ ಬರುತ್ತಿದ್ದಾರೆ. ಕೇಂದ್ರದ ಸಂಸತ್ ಸದಸ್ಯರನ್ನು ಸಭೆಗೆ ಆಹ್ವಾನಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಲ್ಲಿ ಒಂದಾದ ಯುಕೆಪಿ 3ನೇ ಹಂತಕ್ಕೆ ತಕರಾರು ಎತ್ತಿರುವ ಹಾಗೂ ತುಂಗಭದ್ರಾ ಅಣೆಕಟ್ಟಿನ ನೀರು ಪೋಲು ತಡೆಯಲು ಸಹಕಾರ ನೀಡದಿರುವ ಆಂಧ್ರ ಪ್ರದೇಶದ ನಡೆ ವಿರುದ್ಧ ಧ್ವನಿ ಎತ್ತಿ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಹಿನ್ನೆಲೆಯಲ್ಲಿ ರಾಜ್ಯದ ಸಂಸದರ ಜತೆ ದೆಹಲಿಯ ಕರ್ನಾಟಕ ಭವನದಲ್ಲಿ ಬರುವ ಮಂಗಳವಾರ ಸಭೆ ನಡೆಸಲಾಗುವುದು ಎಂದು ಹೇಳಿದರು.

ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್‌ನಲ್ಲಿ 5300 ಕೋಟಿ ರೂ.ಗಳನ್ನು ಘೋಷಿಸಿಲಾಗಿತ್ತು. ಆದರೆ ಆ ಹಣ ಇನ್ನೂ ಬಿಡುಗಡೆಯಾಗಿಲ್ಲ. ಈ ನಿಟ್ಟಿನಲ್ಲಿಯೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಸಂಸದರಿಗೆ ಡಿ.ಕೆ.ಶಿವಕುಮಾರ್‌ ಮನವಿ ಮಾಡಿಕೊಳ್ಳಲಿದ್ದಾರೆ.

ಜೊತೆಗೆ ಮೇಕೆದಾಟು, ಮಹಾದಾಯಿ ನದಿಗೆ ಅಡ್ಡಲಾಗಿ ಕಳಸಾ-ಬಂಡೂರಿ ನಾಲಾ ಯೋಜನೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರದ ಎನ್‌ಓಸಿಗಳು ಬಾಕಿ ಇದ್ದು ಅದಕ್ಕಾಗಿ ಒತ್ತಡ ಹೇರುವಂತೆ ಮನವಿ ಸಲ್ಲಿಸಲಿದ್ದಾರೆ. ಬೆಂಗಳೂರಿನ ನಗರಾಭಿವೃದ್ಧಿ ಹಾಗೂ ಇತರ ಯೋಜನೆಗಳ ಸಂಬಂಧಪಟ್ಟಂತೆಯೂ ಸಂಸದರ ಜೊತೆ ಡಿ.ಕೆ.ಶಿವಕುಮಾರ್‌ ಚರ್ಚೆ ನಡೆಸುವ ಸಾಧ್ಯತೆ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.