ಕೃಷ್ಣಾ ಮೇಲ್ದಂಡೆ ಯೋಜನೆಗೆ 5 ಸಾವಿರ ಕೋಟಿ ರೂ ಅನುದಾನ: ಅಭಿವೃದ್ಧಿಗೆ ಹಣವಿಲ್ಲವೆಂಬ BJP ಆರೋಪ ಸತ್ಯಕ್ಕೆ ದೂರ; ಸಿಎಂ ಸಿದ್ದರಾಮಯ್ಯ
ಗುಜರಾತ್‌ನಲ್ಲಿ ನದಿ ನೀರು ಹಂಚಿಕೆ ಕುರಿತು ವ್ಯಾಜ್ಯ ಇದ್ದರೂ, ಗೆಜೆಟ್ ನೋಟಿಫಿಕೇಷನ್ ಹೊರಡಿಸಲಾಯಿತು. ಪ್ರಧಾನಿ ಮೋದಿ, ಸಚಿವ ಅಮಿತ್ ಷಾ ಅವರು ತಮ್ಮ ಸ್ವಂತ ರಾಜ್ಯಕ್ಕೆ ಮಾಡಿದ ಅನುಕೂಲವನ್ನು ಯುಕೆಪಿ ವಿಷಯದಲ್ಲಿ ಕರ್ನಾಟಕಕ್ಕೆ ಏಕೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಭೂಸ್ವಾಧೀನಕ್ಕೆ ಪೂರಕ ಬಜೆಟ್‌ನಲ್ಲಿ ₹5 ಸಾವಿರ ಕೋಟಿ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನವನಗರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಶಂಕುಸ್ಥಾಪನೆ ಹಾಗೂ ಯುಕೆಪಿ–3ರ ಅಡಿ ಭೂಮಿ ಕಳೆದುಕೊಳ್ಳುವರ ರೈತರಿಗೆ ಪರಿಹಾರ ಚೆಕ್ ವಿತರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಬಜೆಟ್‌ನಲ್ಲಿ ಈಗಾಗಲೇ ₹3 ಸಾವಿರ ಕೋಟಿ ಅನುದಾನ ನೀಡಲಾಗಿತ್ತು. ಕಡಿಮೆಯಾಗುತ್ತದೆ ಎಂಬ ಮನವಿ ಮೇರೆಗೆ ಹೆಚ್ಚುವರಿ ಅನುದಾನ ನೀಡಲಾಗುವುದು ಎಂದರು.
ಯುಕೆಪಿ ವಿಷಯದಲ್ಲಿ 13 ವರ್ಷಗಳಾದರೂ ಗೆಜೆಟ್ ನೋಟಿಫಿಕೇಷನ್ ಹೊರಡಿಸಿಲ್ಲ. ಗುಜರಾತ್‌ನಲ್ಲಿ ನದಿ ನೀರು ಹಂಚಿಕೆ ಕುರಿತು ವ್ಯಾಜ್ಯ ಇದ್ದರೂ, ಗೆಜೆಟ್ ನೋಟಿಫಿಕೇಷನ್ ಹೊರಡಿಸಲಾಯಿತು. ಪ್ರಧಾನಿ ಮೋದಿ, ಸಚಿವ ಅಮಿತ್ ಷಾ ಅವರು ತಮ್ಮ ಸ್ವಂತ ರಾಜ್ಯಕ್ಕೆ ಮಾಡಿದ ಅನುಕೂಲವನ್ನು ಯುಕೆಪಿ ವಿಷಯದಲ್ಲಿ ಕರ್ನಾಟಕಕ್ಕೆ ಏಕೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಅನೇಕ ಬಾರಿ ಪತ್ರ ಬರೆದಿದ್ದೇನೆ. ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಮನವಿ ಮಾಡಲಾಗಿದೆ. ಆದರೂ, ಕೇಂದ್ರ ಸರ್ಕಾರ ಸ್ಪಂದಿಸಲಿಲ್ಲ. ಮಹದಾಯಿ ವಿಷಯದಲ್ಲಿ ಯಾವುದೇ ಕೋರ್ಟ್‌ನಲ್ಲಿ ಪ್ರಕರಣಗಳಿಲ್ಲ. ಆದರೂ, ಅನುಮತಿ ನೀಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸಲು ಸರ್ಕಾರ ಬದ್ಧವಾಗಿದ್ದು, ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಜನರ ಸರ್ಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಈ ಭಾಗದ ಶಾಸಕರಾಗಿದ್ದ ಎಚ್.ವೈ. ಮೇಟಿಯವರು ದಿವಂಗತರಾಗಿದ್ದು, ಅವರ ಆತ್ಮಕ್ಕೆ ಚಿರಶಾಂತಿ ಕೋರುವುದಾಗಿ ಸಿಎಂ ತಿಳಿಸಿದರು. ಬಾಗಲಕೋಟೆ ಸರ್ಕಾರಿ ಮೆಡಿಕಲ್ ಕಾಲೇಜಿನ ಶಂಕುಸ್ಥಾಪನೆಯಾಗಲು ಎಚ್.ವೈ. ಮೇಟಿಯವರೇ ಕಾರಣ. ಮೆಡಿಕಲ್ ಕಾಲೇಜ್ ಸ್ಥಾಪಿಸಲು 2025ರ ಬಜೆಟ್‌ನ ಘೋಷಣೆಯಾಗಿದ್ದು, ಇಂದು ಶಂಕುಸ್ಥಾಪನೆಗೊಳ್ಳುತ್ತಿದೆಯೇ ಹೊರತು, ಉಪಚುನಾವಣೆಯ ಕಾರಣಕ್ಕಾಗಿ ಅಲ್ಲ ಎಂದು ಸ್ಪಷ್ಟಪಡಿಸಿದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ, ಅನೇಕ ಜಿಲ್ಲೆಗಳನ್ನು ಅಭಿವೃದ್ಧಿಗೊಳಿಸುವ ದಿಸೆಯಲ್ಲಿ ಹಲವು ಶಂಕುಸ್ಥಾಪನೆ ಹಾಗೂ ಉದ್ಘಾಟನೆಗಳನ್ನು ಮಾಡಲಾಗಿದೆ. ಪ್ರತಿ ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜು ಹಾಗೂ ಟ್ರಾಮಾ ಸೆಂಟರ್‌ಗಳನ್ನು ಸ್ಥಾಪನೆಯ ಉದ್ದೇಶವಿದ್ದು, ಈಗಾಗಲೇ ಸುಮಾರು 25 ಜಿಲ್ಲೆಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ವರ್ಷ ಇಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಗ್ಯಾರಂಟಿ ಯೋಜನೆಗಳಿಂದಾಗಿ ಸರ್ಕಾರದಲ್ಲಿ ಅಭಿವೃದ್ಧಿಗೆ ಹಣವಿಲ್ಲ ಎಂದು ಬಿಜೆಪಿಯವರು ಸುಳ್ಳು ಆರೋಪಗಳನ್ನು ಮಾಡುತ್ತಿರುವುದು ಸತ್ಯಕ್ಕೆ ದೂರವಾದ ಮಾತು. ನಮ್ಮ ಸರ್ಕಾರ ಗ್ಯಾರಂಟಿ ಹಾಗೂ ಅಭಿವೃದ್ಧಿಯನ್ನು ಸಮಾನ ಆದ್ಯತೆ ನೀಡುತ್ತಿದ್ದೇವೆ. ಪ್ರತಿ ವರ್ಷ ಗ್ಯಾರಂಟಿಗಳಿಗೆ ಸುಮಾರು 50 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತಿದ್ದು, ಇದುವರೆಗೆ 1.22 ಲಕ್ಷ ಕೋಟಿಗಳನ್ನು ವೆಚ್ಚ ಮಾಡಲಾಗಿದೆ. ಬಿಜೆಪಿಯವರು ನಾಲ್ಕು ವರ್ಷ ಅಧಿಕಾರದಲ್ಲಿದ್ದರೂ, ಬಾಗಲಕೋಟೆಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸಲಿಲ್ಲ. ಜಾತಿ ಧರ್ಮಗಳ ಮಧ್ಯೆ ವೈಮನಸ್ಯ ತರುವುದು ಅವರ ದುರಾಲೋಚನೆಯಾಗಿದೆ ಎಂದು ಟೀಕಿಸಿದರು.
ಬಿಜೆಪಿಯವರು ತಮ್ಮ ಅವಧಿಯಲ್ಲಿ ಯುಕೆಪಿ ಯೋಜನೆಗೆ ಪರಿಹಾರ ನೀಡಲು ಆಸಕ್ತಿ ವಹಿಸಲಿಲ್ಲ. ಆದ್ದರಿಂದ ರೈತರು ಭೂಮಿ ನೀಡಲು ಮುಂದೆ ಬರಲಿಲ್ಲ. ಈಗ ರೈತರಿಗೆ ಭೂ ಪರಿಹಾರವನ್ನು ಒಂದೇ ಬಾರಿಗೆ ನೀಡಲು ಕಾಂಗ್ರೆಸ್ ಸರ್ಕಾರ ನಿರ್ಣಯಿಸಿದೆ. ಈ ಬಾರಿಯ ಬಜೆಟ್‌ನಲ್ಲಿ ಯುಕೆಪಿ ಯೋಜನೆಯ 3 ಹಂತದಲ್ಲಿ ಭೂಪರಿಹಾರಕ್ಕೆ ಹಣ ಮೀಸಲಿಡಲಾಗಿದ್ದು, ನಂತರವೂ ಹೆಚ್ಚಿನ ಅನುದಾನಕ್ಕೆ ವ್ಯವಸ್ಥೆಗೊಳಿಸಲಾಗುವುದು. ಸ್ವಯಂಪ್ರೇರಣೆಯಿಂದ ಭೂಮಿ ನೀಡುವ ರೈತರಿಗೆ ನೀರಾವರಿ ಜಮೀನಿಗೆ 40 ಲಕ್ಷ ರೂ, ಹಾಗೂ ಖುಷ್ಕಿ ಜಮೀನಿಗೆ 30 ಲಕ್ಷ ರೂ. ನೀಡಲು ಸರ್ಕಾರ ನಿರ್ಣಯಿಸಿದೆ. ಆದರೆ ಈ ಬಗ್ಗೆ ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




