ಒಂದೇ ಸೂರಿನಡಿ ರಾಮ್-ರಹೀಮ್: ದ್ವೇಷ ಹರಡುವವರ ಮಧ್ಯೆ ಮುಸ್ಲಿಮರಿಗಾಗಿ 'ಇಫ್ತಾರ್ ಕೂಟ' ಆಯೋಜಿಸುತ್ತಿರುವ ಹಿಂದೂ ಮಹಿಳೆ..!
80 ವರ್ಷದ ಮೀನಾಕ್ಷಿ ಶ್ರೀನಿವಾಸನ್ ಅವರು ಮುಸ್ಲಿಂ ಬಾಂಧವರಿಗಾಗಿ ಅಮ್ಮಾಸ್ ಇಫ್ತಾರ್ ಕೂಟ ವನ್ನು ಆಯೋಜಿಸುತ್ತಿದ್ದು, ಈ ಮೂಲಕ ಸಮುದಾಯಗಳಲ್ಲಿ ಏಕತೆಯನ್ನು ಬೆಳೆಸುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಇತರರಿಗೆ ಪ್ರೇರಣೆಯಾಗಿದ್ದಾರೆ.

ಬೆಂಗಳೂರು: ಇದು ಪವಿತ್ರ ರಂಜಾನ್ ಮಾಸ...ಮುಸ್ಲಿಂ ಬಾಂಧವರು ತಮ್ಮ ಉಪವಾಸ ಮುರಿಯಲು ಸಾಯಂಕಾಲ ಇಫ್ತಾರ್ ಕೂಟ ಆಯೋಜಿಸುತ್ತಾರೆ. ಬಡವರೊಂದಿಗೆ ಆಹಾರ ಹಂಚಿ ತಿಂದು ಸಂಭ್ರಮಿಸುತ್ತಾರೆ. ಒಂದು ಸಮುದಾಯಕ್ಕೆ ಸೀಮಿತವಾಗಿದ್ದ ಉಪವಾಸ ಮುರಿಯುವ ಇಫ್ತಾರ್ ಕೂಟ, ಇಂದು ಜಾತಿ-ಧರ್ಮಗಳ ಗಡಿ ಮೀರಿ ಸಮಾಜವನ್ನು ಒಗ್ಗೂಡಿಸುವ ‘ಸೌಹಾರ್ದ ಕೊಂಡಿ’ಯಾಗಿ ರೂಪಾಂತರಗೊಂಡಿದೆ.
80 ವರ್ಷದ ಮೀನಾಕ್ಷಿ ಶ್ರೀನಿವಾಸನ್ ಅವರು ಮುಸ್ಲಿಂ ಬಾಂಧವರಿಗಾಗಿ ಅಮ್ಮಾಸ್ ಇಫ್ತಾರ್ ಕೂಟ ವನ್ನು ಆಯೋಜಿಸುತ್ತಿದ್ದು, ಈ ಮೂಲಕ ಸಮುದಾಯಗಳಲ್ಲಿ ಏಕತೆಯನ್ನು ಬೆಳೆಸುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಇತರರಿಗೆ ಪ್ರೇರಣೆಯಾಗಿದ್ದಾರೆ.
ದೇಶದಲ್ಲಿ ಹಿಂದು-ಮುಸ್ಲಿಮರ ನಡುವೆ ದ್ವೇಷ ಬಿತ್ತುವವರ ನಡುವೆ ತಮಿಳುನಾಡು ಮೂಲದ ಮೀನಾಕ್ಷಿ ಅಮ್ಮನ ಕುಟುಂಬ ನಾಲ್ಕನೇ ಬಾರಿಗೆ ಬೆಂಗಳೂರಿನಲ್ಲಿ ‘ಅಮ್ಮನ ಇಫ್ತಾರ್ ಕೂಟವನ್ನು ಏರ್ಪಡಿಸಿದ್ದರು.
ಈ ಇಫ್ತಾರ್ ಕೂಟದಲ್ಲಿ ಹಿಂದೂ-ಮುಸ್ಲಿಮರು ಸೇರಿದಂತೆ ಇತರೆ ಸಮುದಾಯದ ಮಂದಿಯೂ ಭಾಗವಹಿಸಿ, ‘ದ್ವೇಷದ ಭಾಷೆಗೆ ಪ್ರೀತಿಯೇ ಉತ್ತರ’ ಎಂದು ಸಾರಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರನ್ನುದ್ದೇಶಿಸಿ ಮಾತನಾಡಿದ ಮೀನಾಕ್ಷಿ ಶ್ರೀನಿವಾಸನ್ ಅವರು, ಈ ಇಫ್ತಾರ್ ಕೇವಲ ಉಪವಾಸ ಮುರಿಯಲಷ್ಟೇ ಅಲ್ಲ, ವಿಭಿನ್ನ ಧರ್ಮಗಳ ನಡುವೆ ಸ್ನೇಹ, ಭಾವನೆ ಮತ್ತು ಸಹಕಾರದ ಸೇತುವೆಯಾಗಲಿ ಎಂಬುದಾಗಿದೆ ಎಂದು ಹೇಳಿದರು.
ಕೆಲವು ವರ್ಷಗಳ ಹಿಂದೆ ನಗರದಲ್ಲಿ ಕಂಡುಬಂದ ಸಮುದಾಯಿಕ ಉದ್ವಿಗ್ನತೆಗಳು ನನ್ನ ಮನಸ್ಸಿಗೆ ನೋವು ತಂದಿತು. ನಾವೇಕೆ ಕಿತ್ತಾಡಬೇಕು. ಕೋಪ ಹೆಚ್ಚಿಸುವುದಕ್ಕಿಂತ ಒಬ್ಬರನ್ನೊಬ್ಬರು ಬೆಂಬಲಿಸುವುದು ಮುಖ್ಯ ಎಂದು ಭಾವಿಸಿದೆವು, ಇದರೊಂದಿಗೆ ಇಫ್ತಾರ್ ಕೂಟ ಆಯೋಜಿಸುವ ಆಲೋಚನೆ ಬಂದಿತು.
ನಮ್ಮ ಆಹಾರ ಪದ್ಧತಿ ಬೇರೆ ಆಗಿರಬಹುದು. ಆದರೆ, ಅದರಿಂದ ಇತರರನ್ನು ಬೆಂಬಲಿಸುವುದನ್ನು ನಿಲ್ಲಿಸಬಾರದು. ಉಪವಾಸ ಮುರಿಯುವ ಸಮಯದಲ್ಲಿ ಜನರು ಸಂತೋಷದಿಂದ ಊಟ ಮಾಡಬೇಕು ಎಂಬುದು ನಮ್ಮ ಆಶಯ ಎಂದು ತಿಳಿಸಿದರು.
ಮೀನಾಕ್ಷಿಯ ಪುತ್ರ ವೆಂಕಟ್ ಶ್ರೀನಿವಾಸನ್ ಅವರು ಮಾತನಾಡಿ, ಸಮಾಜದಲ್ಲಿ ಹೆಚ್ಚುತ್ತಿರುವ ಧರ್ಮಾಧಾರಿತ ಉದ್ವಿಗ್ನತೆಗಳು ಈ ಪ್ರಯತ್ನಕ್ಕೆ ಪ್ರೇರಣೆಯಾದವು. “ರಾಮನವಮಿ ಮೆರವಣಿಗೆ ವೇಳೆ ನಡೆದ ಘಟನೆಗಳು ಮತ್ತು ಕರ್ನಾಟಕದಲ್ಲಿ ಉಂಟಾದ ಹಿಜಾಬ್ ವಿವಾದ ನಾವು ಈ ರೀತಿ ಆಲೋಚನೆ ಮಾಡುವಂತೆ ಮಾಡಿತು. ಕೋಪದಿಂದ ಪ್ರತಿಕ್ರಿಯಿಸುವ ಬದಲು ಪ್ರೀತಿಯಿಂದ ಪ್ರತಿಕ್ರಿಯಿಸುವುದು ಉತ್ತಮ ಎಂದು ಭಾವಿಸಿದೆವು. ಈ ಇಫ್ತಾರ್ ನಮ್ಮ ಮುಸ್ಲಿಂ ಸ್ನೇಹಿತರಿಗೆ ನಾವು ನಿಮ್ಮ ಜೊತೆಯಲ್ಲಿದ್ದೇವೆ ಎಂಬ ಸಂದೇಶ ನೀಡುತ್ತದೆ ಎಂದು ಹೇಳಿದರು.

ಈ ಇಫ್ತಾರ್‌ಗಾಗಿ ಆಹಾರವನ್ನು ಹತ್ತಿರದ ಹೋಟೆಲ್‌ಗಳಿಂದ ವ್ಯವಸ್ಥೆ ಮಾಡಲಾಗುತ್ತದೆ. ಸ್ನೇಹಿತರು ಕೂಡ ತಮ್ಮಿಂದ ಸಾಧ್ಯವಾದ ಸಹಾಯ ನೀಡುತ್ತಾರೆ. ಕೆಲವರು ಐಸ್‌ಕ್ರೀಮ್, ರಸಮಲೈ ಹೀಗೆ ಆಹಾರ ಪದಾರ್ಥಗಳನ್ನು ನೀಡುತ್ತಾರೆ. ಜನರು ಒಟ್ಟಾಗಿ ಸೇರಿ ಆಹಾರ ಸಿದ್ಧಪಡಿಸಿ, ಸಮುದಾಯದ ಪ್ರಯತ್ನವಾಗಿ ಒಗ್ಗಟ್ಟಿನಿಂದ ಇಫ್ತಾರ್ ಏರ್ಪಡಿಸುತ್ತೇವೆಂದು ಹೇಳಿದ್ದಾರೆ.
ಈ ಇಫ್ತಾರ್ ಸಣ್ಣ ಪ್ರಯತ್ನವಾದರೂ ಅರ್ಥಪೂರ್ಣ, ಅಂತರಧಾರ್ಮಿಕ ಸಮಾಗಮವಾಗಿ ಬೆಳೆಯುತ್ತಿದೆ. ಪ್ರತಿವರ್ಷವೂ ಹಲವಾರು ಜನರು ಸೇರಿ ಉಪವಾಸ ಮುರಿಯುವ ಈ ಕ್ಷಣ, ಕೇವಲ ಊಟವಷ್ಟೇ ಅಲ್ಲ—ಮಾನವೀಯತೆ, ಗೌರವ ಮತ್ತು ಸೌಹಾರ್ದವನ್ನು ಹಂಚಿಕೊಳ್ಳುವ ಸಮಯವಾಗಿ ಜನರನ್ನು ಸೆಳೆಯುತ್ತಿದೆ.
ಇಫ್ತಾರ್ ಮೆನು ಇಂತಿದೆ...
ಉಪವಾಸ ಮುರಿಯಲು: ಖರ್ಜೂರ ಮತ್ತು ಇತರೆ ಡ್ರೈಫ್ರೂಟ್ಸ್
ಮುಖ್ಯ ಭೋಜನ: ಮಟನ್ ಬಿರಿಯಾನಿ, ಚಿಕನ್ ಬಿರಿಯಾನಿ
ಚಹಾ ಮತ್ತು ಕಾಫಿ
ಶಾಕಾಹಾರಿ ಪದಾರ್ಥಗಳು: ಪನೀರ್ ಮತ್ತು ಇತರ ಸಸ್ಯಾಹಾರಿ ಆಹಾರ ಪದಾರ್ಥಗಳು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



