ಸಾರಿಗೆ ಕ್ಷೇತ್ರಕ್ಕೆ ಸರ್ಕಾರ ಬಂಪರ್ ಘೋಷಣೆ: 2,000 ಕೋಟಿ ರೂ ವೆಚ್ಚದಲ್ಲಿ 4,000 ಎಲೆಕ್ಟ್ರಿಕ್ ಬಸ್'ಗಳ ಸೇರ್ಪಡೆ
ಈ ಯೋಜನೆಯಡಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಯ 32 ಎಲೆಕ್ಟ್ರಿಕ್ ಬಸ್ ಡಿಪೋಗಳು ಹಾಗೂ ಇತರ ರಾಜ್ಯ ರಸ್ತೆ ಸಾರಿಗೆ ನಿಗಮಗಳ 62 ಡಿಪೋಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ.

ಬೆಂಗಳೂರು: ರಾಜ್ಯದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಆಧುನಿಕಗೊಳಿಸುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2,000 ಕೋಟಿ ರೂ.ವೆಚ್ಚದಲ್ಲಿ ‘ಕರ್ನಾಟಕ ಎಲೆಕ್ಟ್ರಿಕ್ ಬಸ್ ಪ್ರೋಗ್ರಾಮ್’ (KEBP) ಜಾರಿಗೆ ತರುವುದಾಗಿ ಶುಕ್ರವಾರ ಘೋಷಿಸಿದ್ದಾರೆ.
ಈ ಯೋಜನೆಯಡಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಯ 32 ಎಲೆಕ್ಟ್ರಿಕ್ ಬಸ್ ಡಿಪೋಗಳು ಹಾಗೂ ಇತರ ರಾಜ್ಯ ರಸ್ತೆ ಸಾರಿಗೆ ನಿಗಮಗಳ 62 ಡಿಪೋಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಜೊತೆಗೆ 4,000 ಎಲೆಕ್ಟ್ರಿಕ್ ಬಸ್‌ಗಳನ್ನು ಸೇರ್ಪಡೆ ಮಾಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡುವ ಶಕ್ತಿ ಯೋಜನೆ ಮುಂದುವರಿಯಲಿದೆ.ಈ ಯೋಜನೆಯಡಿ ಈಗಾಗಲೇ ಮಹಿಳಾ ಪ್ರಯಾಣಿಕರು 684 ಕೋಟಿ ಪ್ರಯಾಣಗಳನ್ನು ಮಾಡಿದ್ದಾರೆ ಎಂದು ಸರ್ಕಾರ ತಿಳಿಸಿದೆ. 2026–27ನೇ ಸಾಲಿಗೆ ಈ ಯೋಜನೆಗೆ ರೂ,300 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಸಾರಿಗೆ ಸೇವೆ ಸುಧಾರಣೆಗಾಗಿ 2025–26ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದಂತೆ 2,000 ಡೀಸೆಲ್ ಬಸ್‌ಗಳನ್ನು ನೇರ ಖರೀದಿಯ ಮೂಲಕ ಪಡೆಯಲಾಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಒಟ್ಟು 6,596 ಬಸ್‌ಗಳನ್ನು ಸಾರಿಗೆ ನಿಗಮಗಳಿಗೆ ಸೇರಿಸಲಾಗಿದೆ. ಇದರ ಜೊತೆಗೆ 2026–27ರಲ್ಲಿ ಇನ್ನೂ 1,000 ಡೀಸೆಲ್ ಬಸ್‌ಗಳನ್ನು ನೀಡಲಾಗುತ್ತದೆ.
ರಸ್ತೆ ಸುರಕ್ಷತೆ ಹೆಚ್ಚಿಸಲು ಬೆಂಗಳೂರು ಸೇರಿ ರಾಜ್ಯದಾದ್ಯಂತ ಅಪಘಾತದ ‘ಬ್ಲಾಕ್ ಸ್ಪಾಟ್’ಗಳನ್ನು ಗುರುತಿಸಿ ನಿರ್ವಹಿಸಲು ಆಧುನಿಕ ಸಾಫ್ಟ್‌ವೇರ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುತ್ತದೆ. ಇದನ್ನು ಐಐಟಿ ಮದ್ರಾಸ್ ಹಾಗೂ ನ್ಯಾಷನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್ (NIC) ಸಹಯೋಗದಲ್ಲಿ ರೂ.5 ಕೋಟಿ ವೆಚ್ಚದಲ್ಲಿ ರೂಪಿಸಲಾಗುತ್ತದೆ.
ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಬೇಡಿಕೆಗಳನ್ನು ಪರಿಗಣಿಸಿ, 2021 ಜನವರಿ 1ರಿಂದ 2023 ಫೆಬ್ರವರಿ 28ರವರೆಗೆ ಬಾಕಿ ಇರುವ ವೇತನ ಅರಿಯರ್ಸ್ ನೀಡಲು ಸರ್ಕಾರ ತೀರ್ಮಾನಿಸಿದೆ. ಜೊತೆಗೆ 2025 ಏಪ್ರಿಲ್ 1ರಿಂದ ವೇತನ ಪರಿಷ್ಕರಣೆ ಕೂಡ ಜಾರಿಯಾಗಲಿದೆ. ಈ ಉದ್ದೇಶಕ್ಕೆ ರೂ.1,271 ಕೋಟಿ ಮೀಸಲಿಡಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಸಾರಿಗೆ ಕ್ಷೇತ್ರದಿಂದ 2026 ಫೆಬ್ರವರಿ ತನಕ ರೂ.11,630 ಕೋಟಿ ಆದಾಯ ಸಂಗ್ರಹವಾಗಿದ್ದು, ಕಳೆದ ವರ್ಷಕ್ಕಿಂತ ಶೇ.8.5ರಷ್ಟು ಹೆಚ್ಚಳವಾಗಿದೆ. 2026–27ಕ್ಕೆ ಮೋಟಾರು ವಾಹನಗಳಿಂದ ರೂ.15,500 ಕೋಟಿ ಆದಾಯ ಗುರಿ ಇಡಲಾಗಿದೆ. ಜೊತೆಗೆ ವಾಹನ ಮಾರಾಟದಲ್ಲೂ ಏರಿಕೆ ಕಂಡುಬಂದಿದ್ದು, ದ್ವಿಚಕ್ರ ವಾಹನಗಳ ಮಾರಾಟ ಶೇ.13 ರಷ್ಟು ಹಾಗೂ ಕಾರುಗಳ ಮಾರಾಟ ಶೇ.4ರಷ್ಟು ಹೆಚ್ಚಳವಾಗಿದೆ ಎಂದು ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



