ರಾಜ್ಯ

ಕರ್ನಾಟಕ ಬಜೆಟ್ 2026: ಉರ್ದು ಶಾಲೆಗಳ ಅಭಿವೃದ್ಧಿಗೆ ಬರೋಬ್ಬರಿ 400 ಕೋಟಿ ಹೆಚ್ಚುವರಿ ಅನುದಾನ; ಮೌಲಾನಾ ಆಜಾದ್ ಸ್ಕೂಲ್ ಗಳ ಉನ್ನತೀಕರಣ!

ಹೆಚ್ಚಿನ ಬೇಡಿಕೆ ಇರುವ ಜಿಲ್ಲೆಗಳಲ್ಲಿ 150 ಸಂಖ್ಯಾಬಲದ 25 ಹೊಸ ಮೆಟ್ರಿಕ್‌ ನಂತರದ ವಿದ್ಯಾರ್ಥಿನಿಲಯಗಳನ್ನು ಪ್ರಾರಂಭಿಸಲಾಗುವುದು. ಹಾಲಿ ಕಾರ್ಯನಿರ್ವಹಿಸುತ್ತಿರುವ 25 ವಿದ್ಯಾರ್ಥಿನಿಲಯಗಳಲ್ಲಿ 50 ವಿದ್ಯಾರ್ಥಿಗಳ ಸಂಖ್ಯಾಬಲವನ್ನು ಹೆಚ್ಚಿಸಲಾಗುವುದು.

ಕರ್ನಾಟಕ ಬಜೆಟ್ 2026: ಉರ್ದು ಶಾಲೆಗಳ ಅಭಿವೃದ್ಧಿಗೆ ಬರೋಬ್ಬರಿ 400 ಕೋಟಿ ಹೆಚ್ಚುವರಿ ಅನುದಾನ; ಮೌಲಾನಾ ಆಜಾದ್ ಸ್ಕೂಲ್ ಗಳ ಉನ್ನತೀಕರಣ!
ಸಂಗ್ರಹ ಚಿತ್ರ
Published On :

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ರಾಜ್ಯದ ಆಯವ್ಯಯದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.

ಅಲ್ಪಸಂಖ್ಯಾತರ ವಸತಿ ಶಾಲೆಗಳಿಗೆ ಹೆಚ್ಚಿನ ಬೇಡಿಕೆ ಇರುವ ಕಾರಣ ಸಂತ ಶಿಶುನಾಳ ಶರೀಫರ ಹೆಸರಿನಲ್ಲಿ 10 ಹೊಸ ವಸತಿ ಶಾಲೆಗಳನ್ನು CBSE ಪಠ್ಯಕ್ರಮದಡಿಯಲ್ಲಿ ಪ್ರಾರಂಭಿಸಲಾಗುವುದು. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ ₹10 ಕೋಟಿ ಅನುದಾನ ಮೀಸಲಿಟ್ಟಿದ್ದಾರೆ.

ಹೆಚ್ಚಿನ ಬೇಡಿಕೆ ಇರುವ ಜಿಲ್ಲೆಗಳಲ್ಲಿ 150 ಸಂಖ್ಯಾಬಲದ 25 ಹೊಸ ಮೆಟ್ರಿಕ್‌ ನಂತರದ ವಿದ್ಯಾರ್ಥಿನಿಲಯಗಳನ್ನು ಪ್ರಾರಂಭಿಸಲಾಗುವುದು. ಹಾಲಿ ಕಾರ್ಯನಿರ್ವಹಿಸುತ್ತಿರುವ 25 ವಿದ್ಯಾರ್ಥಿನಿಲಯಗಳಲ್ಲಿ 50 ವಿದ್ಯಾರ್ಥಿಗಳ ಸಂಖ್ಯಾಬಲವನ್ನು ಹೆಚ್ಚಿಸಲಾಗುವುದು.

2025-26ನೇ ಸಾಲಿನಲ್ಲಿ 117 ಮೌಲಾನಾ ಆಜಾದ್ ಮಾದರಿ ಶಾಲೆಗಳು ಹಾಗೂ ಉರ್ದು ಶಾಲೆಗಳನ್ನು ಕೆ.ಪಿ.ಎಸ್.‌ ಮಾದರಿಯಲ್ಲಿ ₹600 ಕೋಟಿ ವೆಚ್ಚದಲ್ಲಿ ಉನ್ನತೀಕರಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಇನ್ನೂ 100 ಶಾಲೆಗಳನ್ನು ₹400 ಕೋಟಿ ವೆಚ್ಚದಲ್ಲಿ ಇದೇ ಮಾದರಿಯಲ್ಲಿ ಉನ್ನತೀಕರಿಸಲಾಗುವುದು.

ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪೈಕಿ 25 ವಸತಿ ಶಾಲೆಗಳಲ್ಲಿ ಪಿ.ಯು.ಸಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳನ್ನು ಪ್ರಾರಂಭಿಸಲಾಗುವುದು. 18 ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆಗಳಲ್ಲಿ ವಾಣಿಜ್ಯ ವಿಭಾಗವನ್ನು ಪ್ರಾರಂಭಿಸಲಾಗುವುದು.

ಅಲ್ಪಸಂಖ್ಯಾತರ ವಸತಿ ಶಾಲೆಗಳಲ್ಲಿ ಪಿ.ಯು.ಸಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರವೇಶ ಪರೀಕ್ಷೆಯ ಮೂಲಕ ಆಯ್ಕೆ ಮಾಡಿ, ಅವರಿಗೆ K-CET/JEE/NEET ಪರೀಕ್ಷೆಗಳಿಗೆ ಗುಣಮಟ್ಟದ ತರಬೇತಿ ನೀಡಲು ನಾಲ್ಕು ವಸತಿ ಶಾಲೆಗಳನ್ನು Center of Excellenceಗಳನ್ನಾಗಿ ಸ್ಥಾಪಿಸಲಾಗುವುದು. ಅಲ್ಲದೇ 20 ವಸತಿ ಶಾಲೆಗಳಲ್ಲಿನ ಮಕ್ಕಳಿಗೆ CET/JEE/NEET ವಿಶೇಷ ತರಬೇತಿ ನೀಡಲಾಗುವುದು.

ಎಲ್ಲಾ ಸಮುದಾಯಗಳ ವಿದ್ಯಾರ್ಥಿಗಳಿಗೆ ನಿರಂತರ ಕಲಿಕಾ ಅವಕಾಶಗಳನ್ನು ಒದಗಿಸಲು ಮತ್ತು ಜ್ಞಾನವನ್ನು ವೃದ್ಧಿಸಲು ಆಯ್ದ ವಕ್ಫ್ ಆಸ್ತಿಗಳಲ್ಲಿ ಕಲಿಕಾ ಕೇಂದ್ರ ಹಾಗೂ ನಾಗರಿಕ ಸೇವಾ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು.

ಅಲ್ಪಸಂಖ್ಯಾತರ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ತಾಂತ್ರಿಕ ಹಾಗೂ ಉನ್ನತ ಮಟ್ಟದ ಡಿಜಿಟಲ್ ಶಿಕ್ಷಣವನ್ನು ಪ್ರೋತ್ಸಾಹಿಸಲು 5,000 ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಖರೀದಿಗಾಗಿ ತಲಾ ₹50,000ಗಳನ್ನು ನೀಡಲಾಗುವುದು. ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಇತರೆ ಸಮಾಜ ಸುಧಾರಕರ ಪುಸ್ತಕಗಳನ್ನು ಉರ್ದು ಭಾಷೆಯಲ್ಲಿ ಅನುವಾದಿಸಲಾಗುವುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.