ಸಿಎಂ ಸಿದ್ದರಾಮಯ್ಯ 17ನೇ ಕರ್ನಾಟಕ ಬಜೆಟ್: ಸರ್ಕಾರದ ಆಡಳಿತ ಸುಧಾರಣೆ ಪ್ರಮುಖ ಅಜೆಂಡಾ
ಸಿದ್ದರಾಮಯ್ಯ ಅವರು ವಿವಿಧ ಇಲಾಖೆಗಳಲ್ಲಿನ ವರ್ಗಾವಣೆಗಳನ್ನು ನಿಯಂತ್ರಿಸಲು ಹೊಸ ವ್ಯವಸ್ಥೆಯನ್ನು ಪರಿಚಯಿಸುವ ಸಾಧ್ಯತೆ ಇದೆ.

ಬೆಂಗಳೂರು: ಇಲಾಖೆಗಳಾದ್ಯಂತ ಭ್ರಷ್ಟಾಚಾರದ ಆರೋಪಗಳು ಸರ್ಕಾರದ ಪ್ರತಿಷ್ಠೆಗೆ ಧಕ್ಕೆಯುಂಟುಮಾಡಿರುವ ಮತ್ತು ರಾಜಕೀಯ ಅನಿಶ್ಚಿತತೆ ಮುಂದುವರಿಯುತ್ತಿರುವ ನಡುವೆಯೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತದ ಕಾರ್ಯಕ್ಷಮತೆಯ ಮೇಲೆ ಗಮನಹರಿಸಲು ಸಿದ್ಧರಾಗಿದ್ದಾರೆ. ಇಂದು ಬೆಳಗ್ಗೆ 10.15ಕ್ಕೆ ಅವರು ಮಂಡಿಸಲಿರುವ ತಮ್ಮ 17ನೇ ಬಜೆಟ್‌ನಲ್ಲಿ ಆಡಳಿತ ವ್ಯವಸ್ಥೆಯನ್ನು ಸರಳಗೊಳಿಸುವುದು ಹಾಗೂ ಸಾರ್ವಜನಿಕ ವಿಶ್ವಾಸವನ್ನು ಪುನಃಸ್ಥಾಪಿಸುವ ಉದ್ದೇಶದ ಹಲವು ಕ್ರಮಗಳನ್ನು ಘೋಷಿಸುವ ಸಾಧ್ಯತೆ ಇದೆ.
ಸಿದ್ದರಾಮಯ್ಯ ಅವರು ವಿವಿಧ ಇಲಾಖೆಗಳಲ್ಲಿನ ವರ್ಗಾವಣೆಗಳನ್ನು ನಿಯಂತ್ರಿಸಲು ಹೊಸ ವ್ಯವಸ್ಥೆಯನ್ನು ಪರಿಚಯಿಸುವ ಸಾಧ್ಯತೆ ಇದೆ. ವಿಶೇಷವಾಗಿ ಗಣಿಗಾರಿಕೆ ಮತ್ತು ಭೂವಿಜ್ಞಾನ, ಸಾರಿಗೆ ಹಾಗೂ ಅಬಕಾರಿ ಇಲಾಖೆಗಳಲ್ಲಿ ಹುದ್ದೆಗಳ ವರ್ಗಾವಣೆಯಲ್ಲಿ ಭ್ರಷ್ಟಾಚಾರ ಹೆಚ್ಚು ಇದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಬಹುದು.
ಈ ಬಾರಿ ಪ್ರಥಮ ದರ್ಜೆಯ (ಕ್ಲಾಸ್-1) ಅಧಿಕಾರಿಗಳನ್ನೂ ಕೌನ್ಸೆಲಿಂಗ್ ಆಧಾರಿತ ವರ್ಗಾವಣೆ ವ್ಯವಸ್ಥೆಯ ವ್ಯಾಪ್ತಿಗೆ ತರಲು ಯೋಜಿಸಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಭ್ರಷ್ಟಾಚಾರ ಹಾಗೂ ವಿವಿಧ ಹಗರಣಗಳ ಹಿನ್ನೆಲೆಯಲ್ಲಿ ಸರ್ಕಾರ ತೀವ್ರ ಟೀಕೆಗೆ ಒಳಗಾಗಿದ್ದು, ವಿರೋಧ ಪಕ್ಷಗಳು ವಿಧಾನಸಭೆಯ ಒಳಗೂ ಹೊರಗೂ ಈ ವಿಷಯಗಳನ್ನು ಎತ್ತಿಹಿಡಿದು ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷವನ್ನು ಸಂಕಷ್ಟಕ್ಕೆ ತಳ್ಳಿದ್ದವು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನಿವೇಶನ(MUDA) ಹಂಚಿಕೆ ಹಗರಣ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮ ನಿಧಿ ದುರ್ನಿಯೋಗ ಪ್ರಕರಣ ಹಾಗೂ ಇತ್ತೀಚೆಗೆ ಅಬಕಾರಿ ಇಲಾಖೆಯ ಅಧಿಕಾರಿಗಳು ಪರವಾನಗಿ ನೀಡಲು ಭಾರೀ ಲಂಚ ಕೇಳಿದ ಪ್ರಕರಣಗಳು ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸಿವೆ.
ಸರ್ಕಾರದ ಮೂಲಗಳ ಪ್ರಕಾರ, ವರ್ಗಾವಣೆಗಳನ್ನು ಕಡ್ಡಾಯವಾಗಿ ಕೌನ್ಸೆಲಿಂಗ್ ಮೂಲಕ ನಡೆಸಬೇಕು. ವರ್ಗಾವಣೆಗಳಲ್ಲಿ ಭಾರೀ ಭ್ರಷ್ಟಾಚಾರ ಇದೆ. ಜೊತೆಗೆ ಆಯ್ಕೆಯಾದ ಜನಪ್ರತಿನಿಧಿಗಳ ಒತ್ತಡವೂ ಹೆಚ್ಚಿದೆ. ವರ್ಗಾವಣೆಗಳಲ್ಲಿ ಭ್ರಷ್ಟಾಚಾರವನ್ನು ನಿಯಂತ್ರಿಸಿ, ಸೇವೆಗಳನ್ನು ಪರಿಣಾಮಕಾರಿಯಾಗಿ ನೀಡಿದರೆ ಸರ್ಕಾರದ ಕಾರ್ಯಕ್ಷಮತೆ ಸುಧಾರಿಸುತ್ತದೆ ಎಂದು ಮೂಲಗಳು ತಿಳಿಸಿವೆ.
ಹಿರಿಯ ಕಾಂಗ್ರೆಸ್ ಶಾಸಕ ಹಾಗೂ ಕರ್ನಾಟಕ ಆಡಳಿತಾತ್ಮಕ ಸುಧಾರಣಾ ಆಯೋಗ 2ರ ಅಧ್ಯಕ್ಷರಾದ ಆರ್ ವಿ ದೇಶಪಾಂಡೆ ಅವರು, ಮುಖ್ಯಮಂತ್ರಿಗೆ ಹಲವು ಶಿಫಾರಸುಗಳನ್ನು ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ. ಸರ್ಕಾರ ಮತ್ತು ಜನರ ನಡುವಿನ ಅಂತರವನ್ನು ಕಡಿಮೆ ಮಾಡುವಂತಹ ಆಡಳಿತ ಸುಧಾರಣೆಗಳ ಅಗತ್ಯವಿದೆ. ಸರ್ಕಾರ ನಮ್ಮ ಶಿಫಾರಸುಗಳನ್ನು ಜಾರಿಗೆ ತರುತ್ತದೆ ಎಂಬ ನಿರೀಕ್ಷೆ ಇದೆ ಎಂದು ಹೇಳಿದರು.
ಹಿಂದಿನ ಮುಖ್ಯ ಕಾರ್ಯದರ್ಶಿ ಟಿ ಎಸ್ ವಿಜಯ್ ಭಾಸ್ಕರ್, ಅವರು ಕರ್ನಾಟಕ ಆಡಳಿತಾತ್ಮಕ ಸುಧಾರಣಾ ಆಯೋಗ 1ನ್ನು ಮುನ್ನಡೆಸಿದ್ದರು. ಕೆಲ ಹುದ್ದೆಗಳು ಈಗಿನ ಕಾಲಕ್ಕೆ ಅಷ್ಟಾಗಿ ಅಗತ್ಯವಿಲ್ಲದ ಕಾರಣ ಅವುಗಳನ್ನು ಪುನರ್‌ವ್ಯವಸ್ಥೆಗೊಳಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ. ಲಿಪಿಕೀಯ ಹುದ್ದೆಗಳನ್ನು ಕಡಿಮೆ ಮಾಡಿ ತಾಂತ್ರಿಕ ಹುದ್ದೆಗಳನ್ನು ಹೆಚ್ಚಿಸಬಹುದು. ಜೊತೆಗೆ ಡಿಜಿಟಲೀಕರಣದ ಮೂಲಕ ಆನ್‌ಲೈನ್ ಸೇವೆಗಳನ್ನು ಒದಗಿಸುವುದಕ್ಕೂ ಹೆಚ್ಚಿನ ಒತ್ತು ನೀಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



