News Wrap 04-03-26 | KAS ಫಲಿತಾಂಶದಲ್ಲಿ ಮತ್ತೆ ಅಕ್ರಮ ಆರೋಪ; ಖಮೇನಿ ಹತ್ಯೆ ಖಂಡಿಸಿ ಪ್ರತಿಭಟನೆ; ಪ್ರಕರಣ ದಾಖಲು: ಪರಂ; ಪವಿತ್ರಗೌಡ ಮನೆಯೂಟಕ್ಕೆ ಬ್ರೇಕ್!

1. KAS ಫಲಿತಾಂಶದಲ್ಲಿ ಮತ್ತೆ ಅಕ್ರಮ ಆರೋಪ
ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಮತ್ತೆ ಅಕ್ರಮ ಆರೋಪ ಕೇಳಿಬಂದಿದೆ. ಕೆಪಿಎಸ್ಸಿಯ ಕೆಎಎಸ್ ಫಲಿತಾಂಶದಲ್ಲಿ ಅಕ್ರಮ ನಡೆದಿದೆ ಎಂದು ಅಭ್ಯರ್ಥಿಗಳು ಗಂಭೀರ ಆರೋಪ ಮಾಡಿದ್ದಾರೆ. ಒಂದೇ ಪರೀಕ್ಷಾ ಕೊಠಡಿಯಲ್ಲಿ ಪರೀಕ್ಷೆ ಬರೆದಿದ್ದ 15 ಮಂದಿ ಸಂದರ್ಶನಕ್ಕೆ ಆಯ್ಕೆಯಾಗಿರುವುದು ಅಭ್ಯರ್ಥಿಗಳಲ್ಲಿ ತೀವ್ರ ಅನುಮಾನ ಹುಟ್ಟುಹಾಕಿದೆ. ಹೀಗಾಗಿ ಅಭ್ಯರ್ಥಿಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಕ್ಯಾಂಪೇನ್ ಶುರು ಮಾಡಿದ್ದಾರೆ. ಕೆಎಎಸ್ ಫಲಿತಾಂಶದಲ್ಲಿ ಅಕ್ರಮ ಆರೋಪ ಬೆನ್ನಲ್ಲೇ ಕೆಪಿಎಸ್‌ಸಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ವಿಚಾರದ ಕುರಿತು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವರದಿ ನೀಡುವಂತೆ ಕೆಪಿಎಸ್‌ಸಿ ಕಾರ್ಯದರ್ಶಿಗೆ ಸೂಚಿಸಿದ್ದಾರೆ. ಇನ್ನು ಮಾಜಿ ಐಪಿಎಸ್ ಅಧಿಕಾರಿ, ಬಿಜೆಪಿ ಮುಖಂಡ ಭಾಸ್ಕರ್ ರಾವ್ ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ರಾಜ್ಯದ ಅಧಿಕಾರಿಗಳನ್ನು ನೇಮಿಸಿಕೊಳ್ಳುವ ಜವಾಬ್ದಾರಿಯುತ ಸಂಸ್ಥೆಯ ನಂಬಿಕೆಯನ್ನು ಸಾರ್ವಜನಿಕರು ಸಂಪೂರ್ಣವಾಗಿ ಕಳೆದುಕೊಳ್ಳುತ್ತಾರೆಂದು ಕಿಡಿಕಾರಿದ್ದಾರೆ.
2. ಖಮೇನಿ ಹತ್ಯೆ ಖಂಡಿಸಿ ಪ್ರತಿಭಟನೆ; ಪ್ರಕರಣ ದಾಖಲು: ಪರಂ
ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯನ್ನು ಖಂಡಿಸಿ ರಾಜ್ಯದಲ್ಲಿ ಪ್ರತಿಭಟನೆಗಳು ನಡೆದಿದ್ದು, ನಿಯಮಗಳನ್ನು ಉಲ್ಲಂಘಿಸಿ ಪ್ರತಿಭಟನೆ ನಡೆಸುವವರ ವಿರುದ್ಧ ಪ್ರಕರಣಗಳು ದಾಖಲಾಗಿವೆ ಎಂದು ಗೃಹ ಸಚಿವ ಜಿ ಪರಮೇಶ್ವರ ಹೇಳಿದ್ದಾರೆ. ಪ್ರತಿಭಟನೆಗಳ ಬಗ್ಗೆ ರಾಜ್ಯ ಸರ್ಕಾರ ದೃಢವಾದ ನಿಲುವನ್ನು ತೆಗೆದುಕೊಂಡಿದೆ. ನಗರದಲ್ಲಿ ಯಾವುದೇ ಸಭೆ ಸೇರಲು ಅನುಮತಿ ಅಗತ್ಯವಿದೆ ಎಂದರು. ಅನುಮತಿ ಇಲ್ಲದೆ ನಿಯಮಗಳನ್ನು ಉಲ್ಲಂಘಿಸಿ ಪ್ರತಿಭಟನೆ ನಡೆಸಿದರೆ ನಾವು ಪ್ರಕರಣಗಳನ್ನು ದಾಖಲಿಸುತ್ತೇವೆ. ಮೊದಲನೆಯದಾಗಿ ಬೆಂಗಳೂರು ನಗರದಲ್ಲಿ ಅನುಮತಿಯಿಲ್ಲದೆ ಪ್ರತಿಭಟನೆ ನಡೆಸಬಾರದು. ನಾವು ಪ್ರಕರಣಗಳನ್ನು ದಾಖಲಿಸುತ್ತಿದ್ದು ಅವರನ್ನು ಬೀದಿಗೆ ಬರಲು ಬಿಡುವುದಿಲ್ಲ ಎಂದು ಗೃಹ ಸಚಿವರು ಎಚ್ಚರಿಸಿದರು.
3. ಮಧ್ಯಪ್ರಾಚ್ಯ ಸಂಘರ್ಷ: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 34 ವಿಮಾನ ಹಾರಾಟ ರದ್ದು
ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ವಿಮಾನಯಾನ ಕಾರ್ಯಾಚರಣೆಗೆ ಅಡ್ಡಿಯಾಗಿದ್ದರಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು 34 ಅಂತರರಾಷ್ಟ್ರೀಯ ವಿಮಾನಗಳು ರದ್ದಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮಾರ್ಚ್ 4ರಂದು ವಾಯುಪ್ರದೇಶ ನಿರ್ಬಂಧಗಳಿಂದಾಗಿ 18 ಆಗಮನ ಮತ್ತು 16 ನಿರ್ಗಮನ ವಿಮಾನಗಳು ರದ್ದಾಗಿವೆ ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ರದ್ದತಿಯಿಂದ ಅಬುಧಾಬಿ, ರಿಯಾದ್, ಜೆಡ್ಡಾ, ದಮ್ಮಾಮ್, ದುಬೈ ಮತ್ತು ದೋಹಾ ಸೇರಿದಂತೆ ಪಶ್ಚಿಮ ಏಷ್ಯಾದ ನಗರಗಳೊಂದಿಗೆ ಬೆಂಗಳೂರನ್ನು ಸಂಪರ್ಕಿಸುವ ಹಲವು ಪ್ರಮುಖ ಅಂತರರಾಷ್ಟ್ರೀಯ ವಿಮಾನಗಳ ಮೇಲೆ ಪರಿಣಾಮ ಬೀರಿದೆ. ಏತನ್ಮಧ್ಯೆ ಪ್ರಯಾಣಿಕರಿಗೆ ಮಾಹಿತಿ ಒದಗಿಸಲು ಟರ್ಮಿನಲ್ 2ರ ಕರ್ಬ್‌ಸೈಡ್‌ನಲ್ಲಿ ಸಹಾಯ ಕೇಂದ್ರವನ್ನು ಸ್ಥಾಪಿಸಲಾಗಿದೆ.
4. ಚಿತ್ತೂರಿನಲ್ಲಿ ಅಪಘಾತ; ಬೆಂಗಳೂರು ಮೂಲದ ಐವರು ಸಾವು
ಬೆಂಗಳೂರಿನಿಂದ ತಿರುಪತಿಗೆ ಹೊರಟಿದ್ದ ಕಾರು ಆಂಧ್ರದ ಚಿತ್ತೂರು ಬಳಿ ಅಪಘಾತಕ್ಕೀಡಾಗಿದ್ದು, ಅಪಘಾತದಲ್ಲಿ ಕರ್ನಾಟಕದ ಐವರು ಸಾವನ್ನಪ್ಪಿದ್ದಾರೆ. ಚಿತ್ತೂರಿನ ಪಲಮನೇರು ಬಳಿ ಈ ಘಟನೆ ನಡೆದಿದ್ದು, ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದಾರೆ. ಮೃತರನ್ನು ಬೆಂಗಳೂರಿನ ರಾಜಾಜಿ ನಗರದ ನಿವಾಸಿಗಳಾದ ಮೋಹನ್‌ದಾಸ್, ನಾಗರಾಜ್ ಕುಸುಮಾ, ಜಯಂತಿ, ಪೂಜಾ ಎಂದು ತಿಳಿದುಬಂದಿದೆ. ಬೆಂಗಳೂರಿನಿಂದ ತಿರುಪತಿ ದೇಗುಲಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಅತಿವೇಗ ಹಾಗೂ ಚಾಲಕ ನಿದ್ರೆಗೆ ಜಾರಿದ್ದರಿಂದ ದುರ್ಘಟನೆ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.
5. ಪವಿತ್ರಗೌಡ ಮನೆಯೂಟಕ್ಕೆ ಬ್ರೇಕ್
ಮನೆ ಊಟಕ್ಕೆ ಬೇಡಿಕೆ ಇಟ್ಟಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ಪವಿತ್ರಾಗೌಡ ಮತ್ತು ಇತರರಿಗೆ ಕರ್ನಾಟಕ ಹೈಕೋರ್ಟ್ ಶಾಕ್ ನೀಡಿದೆ. 'ವೈದ್ಯಕೀಯ ಕಾರಣಗಳಿಗಾಗಿ ಮಾತ್ರ ಮನೆ ಊಟ ಸೌಲಭ್ಯ ನೀಡಲಾಗುವುದು, ಕೋರಿಕೆ ಮೇರೆಗೆ ಅಲ್ಲ' ಎಂದು ಹೇಳಿದೆ. ಆರೋಪಿಗಳಾದ ಪವಿತ್ರಾ ಗೌಡ, ನಾಗರಾಜ್ ಹಾಗೂ ಲಕ್ಷ್ಮಣ್ ಮೂವರು ಆರೋಪಿಗಳಿಗೆ ಮನೆ ಊಟಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ. ವಾರಕ್ಕೊಮ್ಮೆ ಹಾಗೂ ವೈದ್ಯಕೀಯ ಕಾರಣಗಳಿಂದ ಮನೆ ಊಟ ತರಿಸಿಕೊಳ್ಳಬಹುದು ಎಂಬ ಕೆಳ ಹಂತದ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಪವಿತ್ರಾಗೌಡ, ನಾಗರಾಜು ಮತ್ತು ಲಕ್ಷ್ಮಣ್‌ಗೆ ಮನೆ ಊಟ ಬರುತ್ತಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


