ಬೆಂಗಳೂರಿಗೆ ಸಮಾಧಿ ತೋಡುತ್ತಿದ್ದೀರಿ: 1,139 ಕೋಟಿಯ ಸುರಂಗ ಯೋಜನೆಗೆ ತೇಜಸ್ವೀ ಸೂರ್ಯ ವಿರೋಧ
ರಾಜ್ಯ ಸರ್ಕಾರದ 1,139 ಕೋಟಿ ವೆಚ್ಚದ, 2 ಕಿಲೋಮೀಟರ್ ಉದ್ದದ ಸುರಂಗ ಮಾರ್ಗ ಯೋಜನೆಯನ್ನು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ತೀವ್ರವಾಗಿ ವಿರೋಧಿಸಿದ್ದು ಇದು ಬೆಂಗಳೂರಿನ ಸಂಚಾರ ಸಮಸ್ಯೆಯನ್ನು ಪರಿಹರಿಸಲು ವಿಫಲವಾಗುವ...

ಬೆಂಗಳೂರು: ರಾಜ್ಯ ಸರ್ಕಾರದ 1,139 ಕೋಟಿ ವೆಚ್ಚದ, 2 ಕಿಲೋಮೀಟರ್ ಉದ್ದದ ಸುರಂಗ ಮಾರ್ಗ ಯೋಜನೆಯನ್ನು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ತೀವ್ರವಾಗಿ ವಿರೋಧಿಸಿದ್ದು ಇದು ಬೆಂಗಳೂರಿನ ಸಂಚಾರ ಸಮಸ್ಯೆಯನ್ನು ಪರಿಹರಿಸಲು ವಿಫಲವಾಗುವ ಒಂದು ಅವೈಜ್ಞಾನಿಕ ಪರಿಹಾರವಾಗಿದೆ ಎಂದು ಹೇಳಿದ್ದಾರೆ.
ಮಾನ್ಯ ಮುಖ್ಯಮಂತ್ರಿಗಳೇ, ನೀವು ಇಂದು ಶಂಕುಸ್ಥಾಪನೆ ಮಾಡಿಲ್ಲ. ಬದಲಿಗೆ ಬೆಂಗಳೂರಿನ ವೈಜ್ಞಾನಿಕ ನಗರಾಭಿವೃದ್ಧಿಯ ಸಮಾಧಿ ಕಲ್ಲನ್ನು ನೆಟ್ಟಿದ್ದೀರಿ. ಯೋಜನೆಯು ಆರಂಭವಾದ ಮೊದಲ ದಿನದಿಂದಲೇ ಈ ಸುರಂಗ ಮಾರ್ಗವು ವಾಹನ ದಟ್ಟಣೆಯಿಂದ ಸಂಪೂರ್ಣವಾಗಿ ತುಂಬಿರುತ್ತದೆ ಎಂದು ಸರ್ಕಾರದ ಸ್ವಂತ ಯೋಜನಾ ವರದಿಯೇ (DPR) ಒಪ್ಪಿಕೊಂಡಿದೆ ಎಂಬುದನ್ನು ಸಂಸದರು ಎತ್ತಿ ತೋರಿಸಿದ್ದಾರೆ.
ಐದು ವರ್ಷಗಳ ನಂತರವಲ್ಲ. ಹತ್ತು ವರ್ಷಗಳ ನಂತರವೂ ಅಲ್ಲ. ಮೊದಲ ದಿನವೇ! ಯೋಜನೆಯ ವರದಿಯೇ ಇದು ಟ್ರಾಫಿಕ್ ಜಾಮ್‌ನೊಂದಿಗೆ ತನ್ನ ಯಾನ ಆರಂಭಿಸುತ್ತದೆ ಎಂದು ಹೇಳುವುದಾದರೆ, ಈ ಯೋಜನೆ ಯಾರಿಗೆ ಉಪಯೋಗ? ಖಂಡಿತವಾಗಿಯೂ ಪ್ರಯಾಣಿಕರಿಗಂತೂ ಅಲ್ಲ, ಎಂದು ಅವರು ಪ್ರಶ್ನಿಸಿದ್ದಾರೆ. ಈ ಯೋಜನೆಯು ಕೆಲವೇ ಕೆಲವು ಪ್ರಭಾವಿ ವ್ಯಕ್ತಿಗಳಿಗೆ ಪ್ರಯೋಜನ ನೀಡುತ್ತದೆ ವಿನಃ ಇದರ ವೆಚ್ಚವನ್ನು ಇಡೀ ನಗರದ ಜನರು ಭರಿಸಬೇಕಾಗುತ್ತದೆ ಎಂಬ ಭಾವನೆ ಬೆಂಗಳೂರಿಗರಲ್ಲಿದೆ ಎಂದು ಸೂರ್ಯ ತಿಳಿಸಿದ್ದಾರೆ.
ಈ ಯೋಜನೆಯು ಸದಾಶಿವನಗರದ ವಿಐಪಿಗಳು, ಮುಖ್ಯಮಂತ್ರಿಗಳು ಮತ್ತು ವಿಮಾನ ನಿಲ್ದಾಣಕ್ಕೆ ಹೋಗಲು ಈ ರಸ್ತೆಯನ್ನು ಬಳಸುವ ನಗರದ ಗಣ್ಯರು ಸೇರಿದಂತೆ ಕೆಲವೇ ಕೆಲವು ಪ್ರಭಾವಿ ವ್ಯಕ್ತಿಗಳ ಜೀವನವನ್ನು ಸುಗಮಗೊಳಿಸಲು ರೂಪಿಸಿದಂತೆ ಕಾಣುತ್ತಿದೆ. ಆದರೆ ಬೆಂಗಳೂರಿನಾದ್ಯಂತ ಇರುವ ಸಾಮಾನ್ಯ ತೆರಿಗೆದಾರರು ಇದಕ್ಕೆ ಹಣ ಪಾವತಿಸಬೇಕಾಗಿದೆ. ನಿಸ್ಸಂದೇಹವಾಗಿ, ಈ ಯೋಜನೆಯ ಪ್ರಮುಖ ಫಲಾನುಭವಿಗಳು ಗುತ್ತಿಗೆದಾರರಾಗಿದ್ದು, ಅವರು ಕಾಂಗ್ರೆಸ್‌ನ ನಿಧಿಗೆ ಭಾರಿ ಪ್ರಮಾಣದ ಕಿಕ್‌ಬ್ಯಾಕ್‌ಗಳನ್ನು ನೀಡಬಹುದು ಎಂದು ಅವರು ಆರೋಪಿಸಿದ್ದಾರೆ.
ಸರ್ಕಾರವು ಇದರ ಬದಲು ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡಬೇಕು. ಪ್ರಸ್ತಾವಿತ ರೆಡ್ ಲೈನ್ ಮೆಟ್ರೋ ಕಾರಿಡಾರ್ ಅನ್ನು ವೇಗಗೊಳಿಸಬೇಕು ಎಂದು ಸಂಸದ ಸೂರ್ಯ ಪುನರುಚ್ಚರಿಸಿದ್ದಾರೆ. ಸರ್ಕಾರಕ್ಕೆ ಪ್ರಾಮಾಣಿಕವಾಗಿ ವಾಹನ ದಟ್ಟಣೆಯನ್ನು ಕಡಿಮೆ ಮಾಡುವ ಇಚ್ಛೆಯಿದ್ದರೆ, ಅದು ರೆಡ್ ಲೈನ್ ಮೆಟ್ರೋ ಯೋಜನೆಯನ್ನು ವೇಗಗೊಳಿಸುತ್ತಿತ್ತು. ಸಾರ್ವಜನಿಕ ಸಾರಿಗೆಯೊಂದೇ ಬೆಂಗಳೂರಿಗೆ ಇರುವ ಏಕೈಕ ದೀರ್ಘಾವಧಿಯ ಪರಿಹಾರವಾಗಿದೆ. ಫ್ಲೈಓವರ್‌ಗಳು ವಿಫಲವಾಗಿವೆ. ಸುರಂಗ ಮಾರ್ಗಗಳೂ ವಿಫಲವಾಗುತ್ತವೆ.
ಸಣ್ಣ ಫ್ಲೈಓವರ್‌ಗಳಿಂದ ಸಂಚಾರ ದಟ್ಟಣೆ ನಿವಾರಿಸಲು ಸಾಧ್ಯವಿಲ್ಲ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಪದೇ ಪದೇ ವಾದಿಸುತ್ತಿರುವುದನ್ನು ನೆನಪಿಸಿದ ಸೂರ್ಯ, ರಾಜ್ಯ ಸರ್ಕಾರದ ನಿಲುವನ್ನು ಪ್ರಶ್ನಿಸಿದ್ದಾರೆ. ಬೆಂಗಳೂರಿಗೆ ಹೆಚ್ಚಿನ ಮೆಟ್ರೋ, ಹೆಚ್ಚಿನ ಬಸ್‌ಗಳು, ಉತ್ತಮ ಉಪನಗರ ರೈಲು ಮತ್ತು ಉತ್ತಮ ನಗರಾಭಿವೃದ್ಧಿ ಯೋಜನೆಗಳ ಅಗತ್ಯವಿದೆಯೇ ಹೊರತು, ವಿಫಲ ಆಲೋಚನೆಗಳ ದುಬಾರಿ ಸ್ಮಾರಕಗಳಲ್ಲ ಎಂದು ಸಂಸದರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



