'ಲವರ್ ಅಲ್ಲ.. ಬಾಂಬರ್..'; ಕಾರಿನಲ್ಲೇ ಯುವತಿಗೆ ಚಾಕು ಇರಿತ, ಪೆಟ್ರೋಲ್ ಬಾಂಬ್ ಸ್ಫೋಟಿಸಿದ ಭಗ್ನ ಪ್ರೇಮಿ, Video
ನಾಗೇಂದ್ರನ ಈ ರೌದ್ರಾವತಾರದಿಂದ ಬೆಚ್ಚಿಬಿದ್ದ ರಮ್ಯಾ, ಬೊಬ್ಬೆ ಹೊಡೆದು ಜೀವ ಉಳಿಸಿಕೊಳ್ಳಲು ಚಲಿಸುತ್ತಿದ್ದ ಕಾರಿನಿಂದಲೇ ಹೊರಗೆ ಹಾರಿದ್ದಾರೆ.

ತುಮಕೂರು: ತುಮಕೂರು ಹೆದ್ದಾರಿಯಲ್ಲಿ ಭೀಕರ ದುರಂತ ಸಂಭವಿಸಿದ್ದು, ಚಲಿಸುತ್ತಿದ್ದ ಕಾರಿನಲ್ಲೇ ಭಗ್ನ ಪ್ರೇಮಿಯೋರ್ವ ಯುವತಿಗೆ ಚಾಕು ಇರಿದಿದ್ದು ಮಾತ್ರವಲ್ಲದೇ ಪೆಟ್ರೋಲ್ ಬಾಂಬ್ ಸಿಡಿಸಿದ್ದಾನೆ.
ತುಮಕೂರು — ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯ ಶಿರಾ ತಾಲೂಕಿನ ಜೋಗಿಹಳ್ಳಿ ಬಳಿ ಶನಿವಾರ ಅತ್ಯಂತ ಭೀಕರ ಘಟನೆಯೊಂದು ಸಂಭವಿಸಿದೆ. ಚಲಿಸುತ್ತಿದ್ದ ಖಾಸಗಿ ಕಾರಿನೊಳಗೆ ಯುವಕನೊಬ್ಬ ಯುವತಿಗೆ ಚಾಕುವಿನಿಂದ ಇರಿದು, ಬಳಿಕ ಕಾರಿನ ಎಲ್ಲಾ ಡೋರ್‌ಗಳನ್ನು ಲಾಕ್ ಮಾಡಿಕೊಂಡು ಪೆಟ್ರೋಲ್ ಬಾಂಬ್ ಸಿಡಿಸಿಕೊಂಡು ಸಜೀವ ದಹನವಾಗಿದ್ದಾನೆ.
ಮೃತನನ್ನು ಬೆಂಗಳೂರಿನ ನಾಗೇಂದ್ರ (30) ಎಂದು ಗುರುತಿಸಲಾಗಿದೆ. ಇನ್ನು ತೀವ್ರ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿರುವ ಯುವತಿ ರಮ್ಯಾ ಉಲ್ಲಾಸ್ (23) ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮೊದಲೇ ಸಂಚು ರೂಪಿಸಿದ್ದ ಭಗ್ನ ಪ್ರೇಮಿ
ಇನ್ನು ಮೂಲಗಳ ಪ್ರಕಾರ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಗಸೂರು ಗ್ರಾಮದ ನಿವಾಸಿ ರಮ್ಯಾ ಉಲ್ಲಾಸ್, ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಒಟಿ ಟೆಕ್ನಿಷಿಯನ್ (OT Technician) ಆಗಿ ಕೆಲಸ ಮಾಡುತ್ತಿದ್ದರು. ಊರಿಗೆ ತೆರಳುವ ಉದ್ದೇಶದಿಂದ ರಮ್ಯಾ ಕಾರು ಬುಕ್ ಮಾಡಿಕೊಂಡಿದ್ದರು. ಅವರೊಂದಿಗೆ ನಾಗೇಂದ್ರ ಕೂಡ ಪ್ರಯಾಣ ಬೆಳೆಸಿದ್ದ.
ತುಮಕೂರು ಬಳಿ ತೀವ್ರ ಜಗಳ
ತುಮಕೂರು ದಾಟುತ್ತಿದ್ದಂತೆ ನಾಗೇಂದ್ರ ಮತ್ತು ರಮ್ಯಾ ನಡುವೆ ಜಗಳ ನಡೆದಿದ್ದು, ಮಾತಿನ ಚಕಮಕಿ ವಿಕೋಪಕ್ಕೆ ಹೋದಾಗ, ನಾಗೇಂದ್ರ ತಾನು ಮೊದಲೇ ಪ್ಲಾನ್ ಮಾಡಿ ತಂದಿದ್ದ ಚಾಕುವಿನಿಂದ ರಮ್ಯಾ ಅವರ ತಲೆ ಹಾಗೂ ದೇಹದ ಭಾಗಕ್ಕೆ ಮನಸೋಇಚ್ಛೆ ಚುಚ್ಚಿದ್ದಾನೆ. ಈ ವೇಳೆ ಪೆಟ್ರೋಲ್ ಬಾಂಬ್ ಇದೆ ಎಂಬುದು ಯುವತಿಗೆ ತಿಳಿದಿದೆ.
ನಾಗೇಂದ್ರನ ಈ ರೌದ್ರಾವತಾರದಿಂದ ಬೆಚ್ಚಿಬಿದ್ದ ರಮ್ಯಾ, ಬೊಬ್ಬೆ ಹೊಡೆದು ಜೀವ ಉಳಿಸಿಕೊಳ್ಳಲು ಚಲಿಸುತ್ತಿದ್ದ ಕಾರಿನಿಂದಲೇ ಹೊರಗೆ ಹಾರಿದ್ದಾರೆ. ಕಾರಿನೊಳಗೆ ನಡೆಯುತ್ತಿದ್ದ ಈ ಭೀಕರ ದೃಶ್ಯ ಹಾಗೂ ಯುವತಿ ಕೆಳಗೆ ಬಿದ್ದಿದ್ದನ್ನು ಕಂಡು ಗಾಬರಿಗೊಂಡ ವಾಹನ ಚಾಲಕ ತಕ್ಷಣವೇ ಕಾರನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸಿ ಇಳಿದಿದ್ದಾನೆ.
ಕಾರು ಲಾಕ್ ಮಾಡಿಕೊಂಡು ಪೆಟ್ರೋಲ್ ಬಾಂಬ್ ಸ್ಫೋಟ
ಚಾಲಕ ಕೆಳಗೆ ಇಳಿಯುತ್ತಿದ್ದಂತೆಯೇ ನಾಗೇಂದ್ರ ಒಳಗಿನಿಂದ ಕಾರಿನ ಎಲ್ಲಾ ಡೋರ್‌ಗಳನ್ನು ಸೆಂಟ್ರಲ್ ಲಾಕ್ ಮಾಡಿಕೊಂಡಿದ್ದಾನೆ. ಬಳಿಕ ಪೆಟ್ರೋಲ್ ಬಾಂಬ್ ಸಿಡಿಸಿಕೊಂಡು ಸಜೀವ ದಹನವಾಗಿದ್ದಾನೆ. ಇಡೀ ಕಾರು ಧಗಧಗನೆ ಹೊತ್ತಿ ಉರಿಯಲಾರಂಭಿಸಿದೆ.
ಸಾಯುವ ಉದ್ದೇಶದಿಂದಲೇ ಪೆಟ್ರೋಲ್ ಬಾಂಬ್ ತಂದಿದ್ದ ನಾಗೇಂದ್ರ?
ನಾಗೇಂದ್ರ ತಾನು ಮೊದಲೇ ಸಿದ್ಧಪಡಿಸಿಕೊಂಡು ತಂದಿದ್ದ ‘ಪೆಟ್ರೋಲ್ ಬಾಂಬ್’ ಅನ್ನು ಕಾರಿನೊಳಗೆ ಸಿಡಿಸಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ. ಬೆಂಕಿ ಇಡೀ ಕಾರನ್ನು ಆವರಿಸಿದ್ದರಿಂದ ನಾಗೇಂದ್ರನಿಗೆ ಹೊರಬರಲು ಸಾಧ್ಯವಾಗದೆ ಕಾರಿನೊಳಗೇ ಸಜೀವ ದಹನವಾಗಿದ್ದಾನೆ. ರಾಷ್ಟ್ರೀಯ ಹೆದ್ದಾರಿಯಲ್ಲೇ ಕಾರು ಹೊತ್ತಿ ಉರಿದು ಭಸ್ಮವಾಗಿದೆ.
ಯುವತಿ ಆಸ್ಪತ್ರೆಗೆ ದಾಖಲು
ಇತ್ತ ಕಾರಿನಿಂದ ಜಿಗಿದು ತೀವ್ರ ರಕ್ತಸ್ರಾವ ಹಾಗೂ ಗಾಯಗಳಾಗಿದ್ದ ರಮ್ಯಾ ಉಲ್ಲಾಸ್ ಅವರನ್ನು ತಕ್ಷಣವೇ ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಸದ್ಯ ಅವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪೊಲೀಸರ ದೌಡು
ವಿಚಾರ ತಿಳಿಯುತ್ತಲೇ ಸ್ಥಳಕ್ಕೆ ಭೇಟಿ ನೀಡಿದ ಎಸ್ಪಿ ಅಶೋಕ್ ತನಿಖೆ ನಡೆಸಿದ್ದು, ಗಾಯಗೊಂಡ ರಮ್ಯಾ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಯತ್ನ ಹಾಗೂ ಆತ್ಮಹತ್ಯೆಯ ಕಾರಣಗಳ ತನಿಖೆ ನಡೆಯುತ್ತಿದೆ.
ಈ ಭೀಕರ ಘಟನೆ ಕಳ್ಳಂಬೆಳ್ಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸುಟ್ಟು ಕರಕಲಾದ ಕಾರನ್ನು ವಶಕ್ಕೆ ಪಡೆದಿದ್ದಾರೆ. ಯುವಕ – ಯುವತಿ ಪ್ರೇಮಿಗಳಾಗಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಈ ಸಂಬಂಧ ತನಿಖೆ ನಡೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



