ರಾಜ್ಯ

Bidadi Township: ಭೂಸ್ವಾಧೀನ ಪ್ರಕ್ರಿಯೆಗೆ JDS ವಿರೋಧ; 11 ಕಿ.ಮೀ ಪಾದಯಾತ್ರೆ ನಡೆಸಿದ ನಿಖಿಲ್ ಕುಮಾರಸ್ವಾಮಿ

ಮೊದಲ ಹಂತದಲ್ಲೇ ಸುಮಾರು 498 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ಇದರಿಂದ ಸುಮಾರು 750 ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿದ್ದು, ಇವರಲ್ಲಿ 614 ಮಂದಿ ಸಣ್ಣ ಮತ್ತು ಅತಿಸಣ್ಣ ರೈತರು ಸೇರಿದ್ದಾರೆ.

Bidadi Township: ಭೂಸ್ವಾಧೀನ ಪ್ರಕ್ರಿಯೆಗೆ JDS ವಿರೋಧ; 11 ಕಿ.ಮೀ ಪಾದಯಾತ್ರೆ ನಡೆಸಿದ ನಿಖಿಲ್ ಕುಮಾರಸ್ವಾಮಿ
ಪಾದಯಾತ್ರೆ ನಡೆಸಿದ ನಿಖಿಲ್ ಕುಮಾರಸ್ವಾಮಿ
Published On :

ಬೆಂಗಳೂರು: ಬಿಡದಿ ಮತ್ತು ಹಾರೋಹಳ್ಳಿ ಪ್ರದೇಶಗಳಲ್ಲಿ ಹೊಸ ಟೌನ್‌ಶಿಪ್ ನಿರ್ಮಾಣದ ಹೆಸರಿನಲ್ಲಿ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ರಾಜ್ಯ ಸರ್ಕಾರದ ಕ್ರಮವನ್ನು ಹಿಂಪಡೆಯುವಂತೆ ಜೆಡಿಎಸ್ (JDS) ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದೆ.

ಈ ಸಂಬಂಧ ಜೆಡಿಎಸ್ ನಿಯೋಗವು ಕರ್ನಾಟಕದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಮನವಿ ಸಲ್ಲಿಸಿತು.

ಜೆಡಿಎಸ್‌ನ ಗ್ರೇಟರ್ ಬೆಂಗಳೂರು ಅಧ್ಯಕ್ಷ ಎಚ್‌ಎಂ ರಮೇಶ್ ಗೌಡ ಈ ನಿಯೋಗದ ನೇತೃತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ಬೆಂಗಳೂರು ಪಶ್ಚಿಮ ಜಿಲ್ಲಾ ಅಧ್ಯಕ್ಷ ಟಿ. ತಿಮ್ಮೇಗೌಡ, ಬೆಂಗಳೂರು ದಕ್ಷಿಣ ಜಿಲ್ಲಾ ಅಧ್ಯಕ್ಷ ಎಚ್‌.ಸಿ. ಕೃಷ್ಣ ಹಾಗೂ ಬೆಂಗಳೂರು ಪೂರ್ವ ಜಿಲ್ಲಾ ಅಧ್ಯಕ್ಷ ನಟರಾಜ್ ಗಂಗಾಧರ್ ಉಪಸ್ಥಿತರಿದ್ದರು.

ಮೊದಲ ಹಂತದಲ್ಲೇ ಸುಮಾರು 498 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ಇದರಿಂದ ಸುಮಾರು 750 ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿದ್ದು, ಇವರಲ್ಲಿ 614 ಮಂದಿ ಸಣ್ಣ ಮತ್ತು ಅತಿಸಣ್ಣ ರೈತರು ಸೇರಿದ್ದಾರೆ.

ಮುಂದಿನ ಹಂತದಲ್ಲಿ 7,481 ರಿಂದ 9,600 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಯೋಜನೆ ಇದ್ದು, ರೈತರು ಭೂಮಿ ನೀಡಲು ಸಮ್ಮತಿಸದಿದ್ದರೂ, ಪರಿಹಾರದ ಹಣವನ್ನು ನ್ಯಾಯಾಲಯದಲ್ಲಿ ಠೇವಣಿ ಇಟ್ಟು ಭೂಸ್ವಾಧೀನ ಪ್ರಕ್ರಿಯೆ ಮುಂದುವರಿಸಲು ಸರ್ಕಾರ ಯತ್ನಿಸುತ್ತಿದೆ ಎಂದು ಆರೋಪಿಸಿದೆ.

“ರಿಯಲ್ ಎಸ್ಟೇಟ್ ಕೇಂದ್ರಿತ ಟೌನ್‌ಶಿಪ್ ಯೋಜನೆಗಾಗಿ ಬಿಡದಿ ಪ್ರದೇಶದ ಕೃಷಿ ಭೂಮಿಯನ್ನು ಕಬಳಿಸುವುದು ಸ್ವೀಕಾರಾರ್ಹವಲ್ಲ. ಇದು ಸಾವಿರಾರು ರೈತರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ,” ಎಂದು ಎಚ್‌.ಎಂ. ರಮೇಶ್ ಗೌಡ ಹೇಳಿದ್ದಾರೆ.

ರೈತರ ಪರ ನಿಖಿಲ್ ಕುಮಾರಸ್ವಾಮಿ 11 ಕಿ.ಮೀ ಪ್ರತಿಭಟನಾ ಪಾದಯಾತ್ರೆ

ಇನ್ನೊಂದೆಡೆ, ಜೆಡಿಎಸ್ ಯುವ ಘಟಕದ ನಾಯಕ ನಿಖಿಲ್ ಕುಮಾರಸ್ವಾಮಿ ಭಾನುವಾರ ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ 11 ಕಿಲೋಮೀಟರ್ ಪಾದಯಾತ್ರೆ ನಡೆಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಅವರು, “ಮೂರು ಗ್ರಾಮಗಳ ರೈತರು ಕಳೆದ 450 ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ಆದರೂ ಸರ್ಕಾರದ ಯಾವುದೇ ಹಿರಿಯ ಅಧಿಕಾರಿಗಳು ಅಥವಾ ಸಚಿವರು ಅವರೊಂದಿಗೆ ಮಾತುಕತೆ ನಡೆಸಿಲ್ಲ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೂನ್ 12ರಂದು ರೈತರ ಒಪ್ಪಿಗೆ ಪಡೆಯದೇ ಮೂರು ಗ್ರಾಮಗಳ 499 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿದೆ ಎಂದು ನಿಖಿಲ್ ಆರೋಪಿಸಿದರು.

ರೈತರ ಹಿತಾಸಕ್ತಿಗೆ ಧಕ್ಕೆ ಉಂಟುಮಾಡುವ ಯಾವುದೇ ಕ್ರಮವನ್ನು ಜೆಡಿಎಸ್ ವಿರೋಧಿಸಲಿದೆ ಎಂದು ಎಚ್ಚರಿಕೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.