ಬಿಡದಿ ಟೌನ್‌ಶಿಪ್‌ಗೆ ಭೂಮಿ ನೀಡಿದ ರೈತರಿಗೆ ಪರಿಹಾರ: ಎಕರೆಗೆ 2.30 ಕೋಟಿ ರೂ; ಚೆಕ್ ವಿತರಣೆಗೆ ಚಾಲನೆ..!
ರಾಮನಗರದ ಕಂದಾಯ ಭವನದಲ್ಲಿರುವ ಜಿಬಿಡಿಎ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ ಹಾಗೂ ಜಿಬಿಡಿಎ ಅಧ್ಯಕ್ಷ ಗಾಣಕಲ್ ನಟರಾಜು ಅವರು ಫಲಾನುಭವಿ ರೈತರಿಗೆ ಚೆಕ್‌ಗಳನ್ನು ಹಸ್ತಾಂತರಿಸಿದರು.

ರಾಮನಗರ: ರಾಜ್ಯದ ಮಹತ್ವಾಕಾಂಕ್ಷಿ ಹಾಗೂ ಬಹುಚರ್ಚಿತ ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ಭೂಮಿ ಕಳೆದುಕೊಳ್ಳುವ ರೈತರಿಗೆ ಪರಿಹಾರ ವಿತರಣೆ ಪ್ರಕ್ರಿಯೆಗೆ ಅಧಿಕೃತ ಚಾಲನೆ ದೊರೆತಿದೆ.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (GBDA) ವತಿಯಿಂದ ಯೋಜನೆಗೆ ಒಪ್ಪಿಗೆ ನೀಡಿರುವ ರೈತರಿಗೆ ಸಾಂಕೇತಿಕವಾಗಿ ಪರಿಹಾರದ ಚೆಕ್‌ಗಳನ್ನು ವಿತರಿಸಲಾಗಿದ್ದು, ಪ್ರತಿ ಎಕರೆಗೆ 2.30 ಕೋಟಿ ರೂ. ಪರಿಹಾರ ನಿಗದಿಪಡಿಸಲಾಗಿದೆ.
ರಾಮನಗರದ ಕಂದಾಯ ಭವನದಲ್ಲಿರುವ ಜಿಬಿಡಿಎ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ ಹಾಗೂ ಜಿಬಿಡಿಎ ಅಧ್ಯಕ್ಷ ಗಾಣಕಲ್ ನಟರಾಜು ಅವರು ಫಲಾನುಭವಿ ರೈತರಿಗೆ ಚೆಕ್‌ಗಳನ್ನು ಹಸ್ತಾಂತರಿಸಿದರು.
ಮೊದಲ ಹಂತದಲ್ಲಿ ಕೆಂಪಯ್ಯನಪಾಳ್ಯ ಗ್ರಾಮದ ಏಳು ಭೂ ಮಾಲೀಕರಿಗೆ ಸಾಂಕೇತಿಕವಾಗಿ ಪರಿಹಾರ ವಿತರಣೆ ಮಾಡಲಾಯಿತು.
ಎಕರೆಗೆ 2.30 ಕೋಟಿ ರೂ. ಪರಿಹಾರ
ಅಂತಿಮ ಅಧಿಸೂಚನೆ ವ್ಯಾಪ್ತಿಗೆ ಒಳಪಟ್ಟಿರುವ ಗ್ರಾಮಗಳ ರೈತರಿಗೆ ಪ್ರತಿ ಎಕರೆ ಜಮೀನಿಗೆ ರೂ.2 ಕೋಟಿ 30 ಲಕ್ಷ 7 ಸಾವಿರ ಪರಿಹಾರ ನೀಡಲಾಗುತ್ತಿದೆ. ಇದರ ಜೊತೆಗೆ ಜಮೀನಿನಲ್ಲಿ ಬೆಳೆದಿರುವ ವಿವಿಧ ಬೆಳೆಗಳು ಮತ್ತು ಮರಗಳಿಗೂ ಪ್ರತ್ಯೇಕ ಪರಿಹಾರವನ್ನು ನಿಗದಿಪಡಿಸಲಾಗಿದೆ.
ಬೆಳೆ ಮತ್ತು ಮರಗಳಿಗೆ ನಿಗದಿಪಡಿಸಿದ ಪರಿಹಾರ ಇಂತಿದೆ...
ತೆಂಗಿನ ಮರ (ಪ್ರತಿ ಮರಕ್ಕೆ) – ರೂ.40,446
ಮಾವಿನ ಮರ (ಪ್ರತಿ ಮರಕ್ಕೆ) – ರೂ.62,000
ಅಡಿಕೆ ಮರ (ಪ್ರತಿ ಮರಕ್ಕೆ) – ರೂ.7,440
ಬಾಳೆ ಬೆಳೆ (ಪ್ರತಿ ಎಕರೆಗೆ) – ರೂ.10.86 ಲಕ್ಷ
ರೇಷ್ಮೆ ಬೆಳೆ (ಪ್ರತಿ ಎಕರೆಗೆ) – ರೂ.14 ಲಕ್ಷ
ಹಲಸು ಮರ (ಪ್ರತಿ ಎಕರೆಗೆ) – ರೂ.42,750
ಹುಣಸೆ ಮರ (ಪ್ರತಿ ಎಕರೆಗೆ) – ರೂ.53,310
ಸಣ್ಣ ರೈತರಿಗೆ ವಿಶೇಷ ಪ್ಯಾಕೇಜ್
ಕೇವಲ ಒಂದು ಗುಂಟೆ ಅಥವಾ ಅಲ್ಪ ಪ್ರಮಾಣದ ಜಮೀನು ಕಳೆದುಕೊಳ್ಳುವ ರೈತರಿಗೆ ಸಹ ಪರಿಹಾರ ದೊರೆಯುವಂತೆ ಜಿಬಿಡಿಎ ಕ್ರಮ ಕೈಗೊಂಡಿದೆ. ಅಂತಹ ರೈತರಿಗೆ ರೂ.5 ಲಕ್ಷ ಇಡಿಗಂಟು ಪರಿಹಾರ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಹಣ ಕೊಡಿಸಲು ಸಾಧ್ಯವಾಗದಿದ್ದರೆ ರಾಜಕೀಯ ನಿವೃತ್ತಿ’
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಹೆಚ್.ಸಿ. ಬಾಲಕೃಷ್ಣ, ಯೋಜನೆಗೆ ಒಪ್ಪಿಗೆ ನೀಡಿ ನೋಟಿಸ್ ಪಡೆದ ರೈತರ ಖಾತೆಗಳಿಗೆ ಒಂದು ವಾರದೊಳಗೆ ಪರಿಹಾರದ ಹಣ ಜಮೆಯಾಗಲಿದೆ ಎಂದು ಭರವಸೆ ನೀಡಿದ್ದಾರೆ.
“ಒಂದು ವೇಳೆ ರೈತರಿಗೆ ಪರಿಹಾರದ ಹಣ ತಲುಪಿಸಲು ಸಾಧ್ಯವಾಗದಿದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ,” ಎಂದು ಸವಾಲು ಹಾಕಿದರು. ಅಲ್ಲದೆ, ರೈತರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ, ಸರ್ಕಾರ ಅವರ ಹಿತಾಸಕ್ತಿಯನ್ನು ಕಾಪಾಡಲಿದೆ ಎಂದು ಭರವಸೆ ನೀಡಿದರು.
ಮೊದಲ ಹಂತದಲ್ಲಿ ಯಾವ ಗ್ರಾಮಗಳಿಗೆ ಪರಿಹಾರ?
ಬಿಡದಿ ಟೌನ್‌ಶಿಪ್ ಯೋಜನೆಯ ಒಟ್ಟು 9 ಗ್ರಾಮಗಳ ಪೈಕಿ ಮೊದಲ ಹಂತದಲ್ಲಿ ಕೆಂಪಯ್ಯನಪಾಳ್ಯ, ಮಂಡಲಹಳ್ಳಿ ಮತ್ತು ವಡೇರಹಳ್ಳಿ ಗ್ರಾಮಗಳ 519 ಎಕರೆ ಭೂಮಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ.
ಈ ಗ್ರಾಮಗಳ ಉಳಿದ ರೈತರಿಗೆ ಕೂಡ ಹಂತ ಹಂತವಾಗಿ ಪರಿಹಾರ ವಿತರಿಸಲು ಜಿಬಿಡಿಎ ಸಿದ್ಧತೆ ನಡೆಸಿದೆ. ಯೋಜನೆಗೆ ವಿರೋಧದ ಧ್ವನಿಗಳು ಕೇಳಿಬರುತ್ತಿದ್ದರೂ, ಹೆಚ್ಚಿನ ಪರಿಹಾರದ ಕಾರಣ ಹಲವು ರೈತರು ಸ್ವಯಂಪ್ರೇರಿತವಾಗಿ ಭೂಮಿ ನೀಡಲು ಮುಂದೆ ಬರುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



