ಧರ್ಮಸ್ಥಳ ವಿಚಾರದಲ್ಲಿ ದೊಡ್ಡ ಷಡ್ಯಂತ್ರ; ಸತ್ಯಾಸತ್ಯತೆ ಹೊರಗೆ ಬರಬೇಕು: ಬಿ.ವೈ ವಿಜಯೇಂದ್ರ
ಧರ್ಮಸ್ಥಳದ ಪ್ರಕರಣದಲ್ಲಿ ಸಾಕಷ್ಟು ವಿಷಯಗಳು ಈಗ ಬೆಳಕಿಗೆ ಬಂದಿವೆ. ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ ಏಕಾಏಕಿ ಎಸ್‍ಐಟಿ ತನಿಖೆಗೆ ಆದೇಶಿಸಿದಾಗ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು ಎಂದು ನುಡಿದರು.

ಬೆಂಗಳೂರು: ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಕಳಂಕ ತರುವ, ಹಿಂದೂಗಳ ಧಾರ್ಮಿಕ ಶ್ರದ್ಧೆಗೆ ಕೊಡಲಿ ಪೆಟ್ಟು ಕೊಡುವ ದೊಡ್ಡ ಷಡ್ಯಂತ್ರ ನಡೆದಿದೆ ಎಂದು ಶಾಸಕ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹೇಳಿದ್ದಾರೆ.
ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಂದಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಯಾವುದನ್ನೂ ಪರಾಮರ್ಶೆ ಮಾಡದೇ ಯಾರೋ ಬೀದಿಯಲ್ಲಿ ಹೋಗುವವರು ಹೇಳಿದರೆಂದು ಎಸ್‍ಐಟಿ ತನಿಖೆಗೆ ಆದೇಶಿಸಿದ್ದು ಸಮರ್ಪಕ ನಿರ್ಧಾರ ಆಗಿರಲಿಲ್ಲ ಎಂದು ಆಕ್ಷೇಪಿಸಿದರು.
ಧರ್ಮಸ್ಥಳದ ಪ್ರಕರಣದಲ್ಲಿ ಸಾಕಷ್ಟು ವಿಷಯಗಳು ಈಗ ಬೆಳಕಿಗೆ ಬಂದಿವೆ. ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ ಏಕಾಏಕಿ ಎಸ್‍ಐಟಿ ತನಿಖೆಗೆ ಆದೇಶಿಸಿದಾಗ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು ಎಂದು ನುಡಿದರು.
ಅಂದಿನ ಮುಖ್ಯಮಂತ್ರಿಗಳು ಒಂದು ದಿನ ಮುಂಚಿತವಾಗಿ ಯಾವುದೇ ತನಿಖೆಯ ಅವಶ್ಯಕತೆ ಇಲ್ಲ ಎಂದಿದ್ದರು. ಪಟ್ಟಭದ್ರ ಹಿತಾಸಕ್ತಿಗಳು ಅವರನ್ನು ಸ್ವಗೃಹದಲ್ಲಿ ಭೇಟಿ ಮಾಡಿದ ನಂತರ ಮುಖ್ಯಮಂತ್ರಿಗಳೇ ಎಸ್‍ಐಟಿ ತನಿಖೆಗೆ ಆದೇಶಿಸಿದ್ದರು ಎಂದು ಗಮನ ಸೆಳೆದರು. ಬಿಜೆಪಿ ಹಿಂದೆ ಧರ್ಮಸ್ಥಳ ಚಲೋ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿತ್ತು ಎಂದು ವಿವರಿಸಿದರು.
ಇದರಲ್ಲಿ ನೂರಾರು ಕೋಟಿ ಒಳಗೊಂಡದ್ದು ಈಗ ಗೊತ್ತಾಗುತ್ತಿದೆ. ನೂರಾರು ಕೋಟಿ ತೊಡಗಿಸಿಕೊಂಡ ಕಾರಣ ವಿದೇಶಿ ಶಕ್ತಿಗಳ ಕೈವಾಡದ ತನಿಖೆಯೂ ಆಗಬೇಕಿದೆ ಎಂದು ಒತ್ತಾಯಿಸಿದರು. ಕಾಂಗ್ರೆಸ್ ಸರಕಾರವು ಇಂಥ ಷಡ್ಯಂತ್ರಗಳಿಗೆ ಶಕ್ತಿ ತುಂಬುವ ಕೆಲಸ ಮಾಡಿರುವುದು ನಮಗೆ ನೋವು ತಂದಿದೆ ಎಂದು ತಿಳಿಸಿದರು. ಯಾರ್ಯಾರು ಇದರ ಹಿಂದಿದ್ದರು? ಯಾರ್ಯಾರು ಬಂಡವಾಳ ಹಾಕಿದ್ದರು? ಅಂದಿನ ಸಿಎಂ ಯಾಕೆ ಕಣ್ಮುಚ್ಚಿ ಎಸ್‍ಐಟಿಗೆ ಕೊಟ್ಟರು- ಇವೆಲ್ಲವೂ ಸತ್ಯಾಸತ್ಯತೆ ಹೊರಕ್ಕೆ ಬರಬೇಕು ಎಂಬುದು ನಾಡಿನ ಜನರ ಮತ್ತು ಹಿಂದೂಗಳ ಅಪೇಕ್ಷೆ ಎಂದು ತಿಳಿಸಿದರು.
ಇನ್ನು ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಎಸ್‍ಐಆರ್ ಬಗ್ಗೆ ಚರ್ಚೆಗಳಾಗಿವೆ. ಕೇಂದ್ರ ಚುನಾವಣಾ ಆಯೋಗ ತೀರ್ಮಾನಿಸಿದ ಬಳಿಕ ಎಸ್‍ಐಆರ್ ನಡೆಯುತ್ತಿದ್ದು, ರಾಜ್ಯ ಸರಕಾರ ಇದಕ್ಕೆ ಕಲ್ಲು ಹಾಕುವ ಕೆಲಸ ಮಾಡುತ್ತಿದೆ ಎಂಬ ಅಭಿಪ್ರಾಯ ಎಲ್ಲ ಮುಖಂಡರಿಂದ ವ್ಯಕ್ತವಾಗಿದೆ. ರಾಜ್ಯ ಸರ್ಕಾರ ಬಿಎಲ್‍ಒಗಳಿಗೆ ಸಮರ್ಪಕ ಆದೇಶ, ಮಾರ್ಗದರ್ಶನ ಮಾಡುತ್ತಿಲ್ಲ. ಡೂಪ್ಲಿಕೇಟ್ ಹೆಸರು, ಸತ್ತವರ ಹೆಸರು ಕೈಬಿಡುವ ಕೆಲಸ ನಡೆಯಬೇಕಿದೆ. ಬಿಎಲ್‍ಒಗಳನ್ನು ದುರುಪಯೋಗ ಪಡಿಸಿಕೊಂಡು, ಸ್ವಚ್ಛಗೊಳಿಸುವ ಕಾರ್ಯ ಕರ್ನಾಟಕದಲ್ಲಿ ಸಮರ್ಪಕವಾಗಿ ಆಗುತ್ತಿಲ್ಲ ಎಂಬ ಆಕ್ಷೇಪ ಇದೆ. ಮುಂದಿನ ದಿನಗಳಲ್ಲಿ ನಮ್ಮ ನಡೆ ಯಾವ ರೀತಿ ಇರಬೇಕೆಂಬ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ವಿವರ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




