'ದೇವೇಗೌಡರ ಮನೆಯಲ್ಲಿ ಸೂತಕದ ಛಾಯೆ ಹೇಳಿಕೆ': ನಮ್ಮ ಕುಟುಂಬ ನಾಶ ಬಯಸಿದವರ ಬಗ್ಗೆ ನಾನು ಚರ್ಚಿಸಲ್ಲ; ಮತ ಹಾಕುವಾಗ ಈ ಕುಮಾರಣ್ಣ ನೆನಪಿಗೆ ಬರುವುದಿಲ್ಲವೇ?
ದೇವೇಗೌಡರದ್ದು ಹೋರಾಟದ ಬದುಕು, ಅಧಿಕಾರಕ್ಕಾಗಿ ಅವರು ಯಾವತ್ತೂ ಇನ್ನೊಬ್ಬರ ಮನೆ ಬಾಗಿಲಿಗೆ ಹೋಗಿಲ್ಲ. ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಪ್ರಧಾನಿ ಸ್ಥಾನವನ್ನೇ ಬಿಟ್ಟು ಬಂದವರು ದೇವೇಗೌಡರು ಎಂದು ತಂದೆಯ ಬದುಕಿನ ಹಾದಿ ಬಗ್ಗೆ ಕುಮಾರಸ್ವಾಮಿ ಕೊಂಡಾಡಿದರು.

ಮಂಡ್ಯ: ದೇವೇಗೌಡರ ಸಾವನ್ನು ಬಯಸಿದ್ದಾರೋ ಅಥವಾ ಅವರ ಕುಟುಂಬ ನಾಶವಾಗಬೇಕೆಂದು ಬಯಸಿದ್ದಾರೋ ಅವರ ಬಗ್ಗೆ ನಾನು ಚರ್ಚೆ ಮಾಡಬಾರದು. ಇಂತಹ ವ್ಯಕ್ತಿಗಳ ಬಗ್ಗೆ ನಾನು ಹೆಚ್ಚು ಹೇಳುವುದಿಲ್ಲ. ನಾವು ಬೆಳೆಸಿದ್ದರಿಂದ ಅವರು ಈಗ ದೊಡ್ಡ ಮಟ್ಟದಲ್ಲಿ ಬೆಳೆದಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು, ದೇವೇಗೌಡರ ಮನೆಯಲ್ಲಿ ಸೂತಕ ಎಂದಿದ್ದ ಚಲುವರಾಯಸ್ವಾಮಿ ಹೇಳಿಕೆಗೆ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಅಲ್ಲದೇ ಜಮೀರ್ ಅಹಮದ್ ಜೊತೆ ಹೆಚ್‌ಡಿಕೆ ಸಂಪರ್ಕ ವಿಚಾರಕ್ಕೆ ಸ್ಪಷ್ಟನೆ ನೀಡಿದ ಅವ್ರು ನಾನು ಯಾವ ಕಾಂಗ್ರೆಸ್‌ನ ನಾಯಕರನ್ನೂ ಸಂಪರ್ಕಿಸಿಲ್ಲ ಎಂದಿದ್ದಾರೆ.
ದೇವೇಗೌಡರದ್ದು ಹೋರಾಟದ ಬದುಕು, ಅಧಿಕಾರಕ್ಕಾಗಿ ಅವರು ಯಾವತ್ತೂ ಇನ್ನೊಬ್ಬರ ಮನೆ ಬಾಗಿಲಿಗೆ ಹೋಗಿಲ್ಲ. ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಪ್ರಧಾನಿ ಸ್ಥಾನವನ್ನೇ ಬಿಟ್ಟು ಬಂದವರು ದೇವೇಗೌಡರು ಎಂದು ತಂದೆಯ ಬದುಕಿನ ಹಾದಿ ಬಗ್ಗೆ ಕುಮಾರಸ್ವಾಮಿ ಕೊಂಡಾಡಿದ್ರು.
ಕುಮಾರಸ್ವಾಮಿ ಸಲಹೆ ಕೇಳುವುದಾಗಿ ಸಿಎಂ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ HDK, ನಾನೇನು ಸಲಹೆ ನೀಡಲಿ, ಕುಮಾರಸ್ವಾಮಿ ಎರಡೂ ಬಾರಿ ಸಿಎಂ ಆಗಿ ಏನು ಹರಿದಿದ್ದಾರೆ ಅಂತ ಪ್ರಶ್ನೆ ಮಾಡಿದ್ರು. ಎಲ್ಲದಕ್ಕೂ ಸಾಕ್ಷಿ ಕೇಳುತ್ತಾರೆ. ನಾನೇನು ಹರಿದಿಲ್ಲ, ನನ್ನತ್ರ ಏನು ಸಲಹೆ ಕೇಳ್ತಾರೆ.? ಎಂದು ವ್ಯಂಗವಾಡಿದರು.
ಮಾಜಿ ಪ್ರಧಾನಿ ದೇವೇಗೌಡರು 70 ವರ್ಷ ರಾಜಕಾರಣದಲ್ಲಿ ಕೆಲವೇ ವರ್ಷ ಅಧಿಕಾರ ನಡೆಸಿದ್ದಾರೆ. ಹಲವು ರೀತಿಯ ಜನಪರ ಕಾರ್ಯಕ್ರಮ ಕೊಡಬೇಕೆಂದು ಆಸೆ ಇತ್ತಾದರೂ ಅವರಿಗೆ ಸಿಕ್ಕ ಕಡಿಮೆ ಅವಧಿಯಲ್ಲಿ ಅಧಿಕಾರ ನಡೆಸಲು ಸಾಧ್ಯವಾಗದೆ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಆಗಲಿಲ್ಲ. ಅವರ ಮಗನಾಗಿ ನಾನು ದೇವೇಗೌಡರ ಗುರಿಯನ್ನು ಸಾಧಿಸಿ ಯಶಸ್ಸು ಕಾಣಬೇಕೆಂದು ಹೃದಯದಲ್ಲಿರುವ ಕನಸನ್ನು ಸಾಕಾರಗೊಳಿಸಲು ನೀವು ತೀರ್ಮಾನಿಸಿ ನನಗೆ ಶಕ್ತಿ ಕೊಡಬೇಕು ಎಂದರು.
5 ವರ್ಷದ ಸರ್ಕಾರಕ್ಕೆ ಹಳೇ ಮೈಸೂರು ಭಾಗದ ಜನರು ಆಶೀರ್ವದಿಸುತ್ತಾರೆ. ಉತ್ತರ ಕರ್ನಾಟಕ ಭಾಗದ ಜನರು ಸಾಲ ಮನ್ನಾ ಯೋಜನೆಯನ್ನು ದೊಡ್ಡ ಮಟ್ಟದಲ್ಲಿ ಅನುಕೂಲ ಪಡೆದುಕೊಂಡರೂ ಕೂಡ ನಮ್ಮ ಬಗ್ಗೆ ಮಮತೆ ಬಂದಿಲ್ಲ. ಆ ಭಾಗದಲ್ಲಿ ನಾನು ಪ್ರವಾಸ ಕೈಗೊಂಡಾಗ ನಿಮ್ಮಿಂದ ನಮಗೆ ಬಹಳಷ್ಟು ಅನುಕೂಲವಾಯಿತು ಎನ್ನುತ್ತಾರೆ.
ಆದರೆ, ಮತ ಹಾಕುವಾಗ ಈ ಕುಮಾರಣ್ಣ ನೆನಪಿಗೆ ಬರುವುದಿಲ್ಲ. ನೀವೆಲ್ಲರೂ ನನ್ನನ್ನು ಉಳಿಸಿದ್ದೀರಿ ನಿಮ್ಮೆಲ್ಲರ ಋಣ ತೀರಿಸುತ್ತೇನೆ ಎಂದರು. ನಾನು ಈ ಮಟ್ಟಕ್ಕೆ ಬೆಳೆಯಲು ರಾಮನಗರ ಜಿಲ್ಲೆ ಒಂದು ಭಾಗ, ನಂತರ ಜಿಲ್ಲೆಯ ಜನರು ತೋರಿದ ಪ್ರೀತಿ ವಿಶ್ವಾಸ ನಂಬಿಕೆಯನ್ನು ನಾನು ಮಣ್ಣಿಗೆ ಹೋಗುವ ತನಕ ಮರೆಯುವುದಿಲ್ಲ. ಕರ್ನಾಟಕ ಸಂಪದ್ಬರಿತ ರಾಜ್ಯ. ಇಲ್ಲಿನ ಸಂಪತ್ತನ್ನು ಜನರಿಗೆ ತಲುಪಿಸಿ ಒಳ್ಳೆಯ ಕಾರ್ಯಕ್ರಮ ರೂಪಿಸಲು ಒಂದು ಅವಕಾಶ ಕೊಟ್ಟು ನನ್ನ ಜೀವನದ ಗುರಿ ಸಾಧಿಸಲು ಅವಕಾಶ ನೀಡಿ ಎಂದು ಮನವಿ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



