ರಾಜ್ಯ

ಪ್ಲಾಸ್ಟಿಕ್ ಬಾಟಲಿ ನಿಷೇಧ ಆದೇಶ ಉಲ್ಲಂಘನೆ: ಸರ್ಕಾರಿ ಕಚೇರಿಗಳಿಗೆ KSPCB ಕಠಿಣ ಎಚ್ಚರಿಕೆ, ನೋಟಿಸ್ ಜಾರಿ..!

2018ರ ಸೆಪ್ಟೆಂಬರ್‌ನಲ್ಲಿ ರಾಜ್ಯ ಪರಿಸರ ಮತ್ತು ಜೀವ ಪರಿಸರ ಇಲಾಖೆ, ಸರ್ಕಾರಿ ಕಚೇರಿಗಳು ಹಾಗೂ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ಬಾಟಲಿ ಬಳಕೆಯನ್ನು ನಿಷೇಧಿಸುವ ಆದೇಶ ಹೊರಡಿಸಿತ್ತು.

ಪ್ಲಾಸ್ಟಿಕ್ ಬಾಟಲಿ ನಿಷೇಧ ಆದೇಶ ಉಲ್ಲಂಘನೆ: ಸರ್ಕಾರಿ ಕಚೇರಿಗಳಿಗೆ KSPCB ಕಠಿಣ ಎಚ್ಚರಿಕೆ, ನೋಟಿಸ್ ಜಾರಿ..!
ಸಂಗ್ರಹ ಚಿತ್ರ
Published On :

ಬೆಂಗಳೂರು: ಸರ್ಕಾರಿ ಕಚೇರಿಗಳು, ಸಭೆಗಳು ಹಾಗೂ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲಿಗಳ ಬಳಕೆಗೆ ಈಗಾಗಲೇ ನಿಷೇಧವಿದ್ದರೂ ನಿಯಮ ಉಲ್ಲಂಘನೆ ಮುಂದುವರಿದಿರುವ ಹಿನ್ನೆಲೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಇದೀಗ ಕಠಿಣ ಎಚ್ಚರಿಕೆ ನೀಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಕೆಎಸ್‌ಪಿಸಿಬಿ ಅಧ್ಯಕ್ಷ ಪಿ.ಎಂ. ನರೇಂದ್ರ ಸ್ವಾಮಿ, ಎಲ್ಲಾ ಸರ್ಕಾರಿ ಇಲಾಖೆಗಳು, ನಿಗಮಗಳು ಹಾಗೂ ಜಿಲ್ಲಾ ಆಡಳಿತಗಳಿಗೆ ನೋಟಿಸ್ ಜಾರಿ ಮಾಡಿ, ನಿಯಮ ಪಾಲನೆಗೆ ನಿರ್ಲಕ್ಷ್ಯ ತೋರಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗುವುದು ಎಂದು ಹೇಳಿದ್ದಾರೆ.

2018ರ ಸೆಪ್ಟೆಂಬರ್‌ನಲ್ಲಿ ರಾಜ್ಯ ಪರಿಸರ ಮತ್ತು ಜೀವ ಪರಿಸರ ಇಲಾಖೆ, ಸರ್ಕಾರಿ ಕಚೇರಿಗಳು ಹಾಗೂ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ಬಾಟಲಿ ಬಳಕೆಯನ್ನು ನಿಷೇಧಿಸುವ ಆದೇಶ ಹೊರಡಿಸಿತ್ತು.

ಈ ಆದೇಶ ಜಾರಿಗೆ ತರುವ ಜವಾಬ್ದಾರಿಯನ್ನು KSPCBಗೆ ವಹಿಸಲಾಗಿತ್ತು. ಆ ವೇಳೆ ನಡೆಸಿದ ಅಧ್ಯಯನದಲ್ಲಿ ಸರ್ಕಾರಿ ಕಾರ್ಯಕ್ರಮಗಳಿಂದ ವರ್ಷಕ್ಕೆ ಎರಡು ಕೋಟಿಗೂ ಹೆಚ್ಚು ಪ್ಲಾಸ್ಟಿಕ್ ಬಾಟಲಿಗಳು ತ್ಯಾಜ್ಯವಾಗಿ ಸಂಗ್ರಹವಾಗುತ್ತಿರುವುದು ಬೆಳಕಿಗೆ ಬಂದಿತ್ತು.

ಈ ಹಿನ್ನೆಲೆಯಲ್ಲಿ ಗಾಜಿನ ಬಾಟಲಿಗಳು, ಟಂಬ್ಲರ್‌ಗಳು, ನೀರಿನ ಡಿಸ್ಪೆನ್ಸರ್‌ಗಳು ಸೇರಿದಂತೆ ಪರಿಸರ ಸ್ನೇಹಿ ಪರ್ಯಾಯಗಳನ್ನು ಬಳಸುವಂತೆ ಸರ್ಕಾರ ಸೂಚಿಸಿತ್ತು.

ಸಾರ್ವಜನಿಕರಿಗೆ ಮಾದರಿಯಾಗುವ ಉದ್ದೇಶದಿಂದ ಈ ಆದೇಶ ಜಾರಿಗೊಳಿಸಲಾಗಿದ್ದರೂ, ಇಂದಿಗೂ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲ ಎಂದು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.

ರಾಜ್ಯದಲ್ಲಿ ಪ್ಲಾಸ್ಟಿಕ್ ಬಾಟಲಿಗಳ ತ್ಯಾಜ್ಯ ಪ್ರಮಾಣ ದಿನೇದಿನೇ ಹೆಚ್ಚುತ್ತಿದ್ದು, ಇದನ್ನು ತಕ್ಷಣ ನಿಯಂತ್ರಿಸುವ ಅಗತ್ಯವಿದೆ ಎಂದು KSPCB ಅಭಿಪ್ರಾಯಪಟ್ಟಿದೆ.

ಇದರ ನಡುವೆ ಧಾರವಾಡ ಮೂಲದ ಸ್ಟಾರ್ಟ್‌ಅಪ್‌ವೊಂದು PET ಬಾಟಲಿಗಳನ್ನು ತಲಾ ರೂ.1 ನೀಡಿ ಸಂಗ್ರಹಿಸಿ, ಅವುಗಳನ್ನು ಪುಡಿಮಾಡಿ ಮರುಬಳಕೆ ಉತ್ಪನ್ನಗಳ ತಯಾರಿಕೆಗೆ ಬಳಸುವ ಯೋಜನೆಯನ್ನು ಮಂಡಿಸಿದೆ. ಈ ಪ್ರಸ್ತಾವನೆಯನ್ನೂ KSPCB ಪರಿಶೀಲಿಸುತ್ತಿದೆ.

ಕೆಎಸ್‌ಪಿಸಿಬಿ ಅಧ್ಯಕ್ಷ ಪಿ.ಎಂ. ನರೇಂದ್ರ ಸ್ವಾಮಿ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಪೌರಾಡಳಿತ ಇಲಾಖೆಗಳ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಈ ಯೋಜನೆ ಕುರಿತು ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ಕ್ರಮದಿಂದ ಪ್ಲಾಸ್ಟಿಕ್ ತ್ಯಾಜ್ಯ ಕಡಿಮೆಯಾಗುವುದರ ಜೊತೆಗೆ ಸ್ಥಳೀಯ ಸಂಸ್ಥೆಗಳ ಮೇಲಿನ ಹೊರೆ ಸಹ ಇಳಿಯಲಿದೆ ಎನ್ನಲಾಗಿದೆ.

ಇದಲ್ಲದೆ, ಪ್ಲಾಸ್ಟಿಕ್ ಉತ್ಪನ್ನಗಳನ್ನು ಮರುಸಂಗ್ರಹಿಸುವಂತೆ ಕಂಪನಿಗಳಿಗೆ ನೀಡಲಾಗಿರುವ ವಿಸ್ತೃತ ಉತ್ಪಾದಕರ ಜವಾಬ್ದಾರಿ (EPR) ನಿಯಮಗಳು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಸ್ಥಳೀಯ ಆಡಳಿತಗಳೂ ನಿಯಮ ಅನುಷ್ಠಾನದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ ಎಂದು KSPCB ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಚಾರವನ್ನು ಮುಖ್ಯಮಂತ್ರಿ ಅವರ ಗಮನಕ್ಕೂ ತಂದು, ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸಲಾಗುವುದು ಎಂದು ಮಂಡಳಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.