ರಾಮಲಿಂಗಾ ರೆಡ್ಡಿ ರಾಜೀನಾಮೆ ವಿವಾದಕ್ಕೆ ತೆರೆ: 'ಎಲ್ಲವೂ ಬಗೆಹರಿದಿದೆ'- ಸಿಎಂ ಡಿ.ಕೆ ಶಿವಕುಮಾರ್
ಶುಕ್ರವಾರ ರಾತ್ರಿ ಜಯನಗರದ ಖಾಸಗಿ ಹೋಟೆಲ್‌ನಲ್ಲಿ ರಾಮಲಿಂಗಾ ರೆಡ್ಡಿ ಅವರೊಂದಿಗೆ ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ಮಹತ್ವದ ಸಭೆಯ ಬಳಿಕ ಸಿಎಂ ಈ ಮಾಹಿತಿ ನೀಡಿದರು.

ಬೆಂಗಳೂರು: ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆ ವಿಚಾರವಾಗಿ ಅಸಮಾಧಾನಗೊಂಡು ರಾಜೀನಾಮೆ ನೀಡಿದ್ದ ಕಾಂಗ್ರೆಸ್ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಅವರ ಮನವೊಲಿಸಲು ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ನಡೆಸಿದ ಯತ್ನ ಯಶಸ್ವಿಯಾಗಿದೆ.
ಖಾತೆ ಹಂಚಿಕೆ ವಿಚಾರವಾಗಿ ಉಂಟಾಗಿದ್ದ ಸಚಿವ ರಾಮಲಿಂಗಾ ರೆಡ್ಡಿ ಅವರ ರಾಜೀನಾಮೆ ವಿವಾದ ಇದೀಗ ಬಗೆಹರಿದಿದೆ ಎಂದು ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ ಜಯನಗರದ ಖಾಸಗಿ ಹೋಟೆಲ್‌ನಲ್ಲಿ ರಾಮಲಿಂಗಾ ರೆಡ್ಡಿ ಅವರೊಂದಿಗೆ ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ಮಹತ್ವದ ಸಭೆಯ ಬಳಿಕ ಸಿಎಂ ಈ ಮಾಹಿತಿ ನೀಡಿದರು.
ಸಭೆ ಶನಿವಾರ ಮುಂಜಾನೆವರೆಗೂ ಮುಂದುವರಿದಿತ್ತು. ಕಾಂಗ್ರೆಸ್ ಹಿರಿಯ ನಾಯಕರು ಹಾಗೂ ರೆಡ್ಡಿ ಆಪ್ತರು ಕೂಡ ಚರ್ಚೆಯಲ್ಲಿ ಭಾಗವಹಿಸಿದ್ದರು ಎಂದು ತಿಳಿದುಬಂದಿದೆ.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, “ಇದು ಕುಟುಂಬದ ವಿಷಯ. ಎಲ್ಲರೂ ಕೂತು ಮಾತನಾಡಿದ್ದೇವೆ. ಎಲ್ಲವೂ ಬಗೆಹರಿದಿದೆ. ಇದು ಕೇವಲ ಸಂವಹನದ ಸಮಸ್ಯೆಯಾಗಿತ್ತು. ಸರ್ಕಾರವನ್ನು ಉತ್ತಮವಾಗಿ ನಡೆಸುತ್ತೇವೆ ಎಂದು ಹೇಳಿದರು.
ರಾಮಲಿಂಗಾ ರೆಡ್ಡಿ ಮತ್ತು ನಾನು 1980ರಿಂದ ಸ್ನೇಹಿತರು. ಈಗ ನಾನು ಮುಖ್ಯಮಂತ್ರಿ, ಅವರು ಸಚಿವರು. ನಾವು ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ. ಹಿರಿಯ ನಾಯಕರಿಗೆ ಸೂಕ್ತ ಅವಕಾಶಗಳನ್ನು ನೀಡಲಾಗಿದೆ. ಉಂಟಾಗಿರುವ ಗೊಂದಲವನ್ನು ಸರಿಪಡಿಸಲಾಗುವುದು ಎಂದು ತಿಳಿಸಿದರು.
ಬಳಿಕ ಮಾತನಾಡಿದ ರಾಮಲಿಂಗಾ ರೆಡ್ಡಿಯವರು, ರಾಜೀನಾಮೆ ವಾಪಸ್ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ನೀಡದೆ, ‘ಕಮ್ಯುನಿಕೇಶನ್ ಗ್ಯಾಪ್ ಆಗಿದೆ ಅಷ್ಟೇ’ ಎಂದು ಮಾರ್ಮಿಕವಾಗಿ ನುಡಿದರು.
ಮುಖ್ಯಮಂತ್ರಿ ಹೇಳಿದ್ದನ್ನೇ ನಾನು ಹೇಳುತ್ತೇನೆ. ಎಲ್ಲಾ ನಿವಾರಣೆ ಆಗಿದೆ, ಹೋಗಿ…’ ಎಂದು ಮಾರ್ಮಿಕವಾಗಿ ಹೇಳಿ ಹೊರಟರು.
ಹೊಸ ಸರ್ಕಾರದಲ್ಲಿ ಬೆಂಗಳೂರು ಅಭಿವೃದ್ಧಿ ಖಾತೆ ನೀಡುವುದಾಗಿ ಭರವಸೆ ನೀಡಿದ್ದರೂ ಅದನ್ನು ಪಾಲಿಸಲಾಗಿಲ್ಲ ಎಂದು ಆರೋಪಿಸಿ ರಾಮಲಿಂಗಾ ರೆಡ್ಡಿ ಶುಕ್ರವಾರ ರಾಜೀನಾಮೆ ಘೋಷಿಸಿದ್ದರು. ಈ ಬೆಳವಣಿಗೆ ಮೂರು ದಿನಗಳ ಹಿಂದಷ್ಟೇ ಅಧಿಕಾರಕ್ಕೆ ಬಂದ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಮೊದಲ ದೊಡ್ಡ ರಾಜಕೀಯ ಸವಾಲಾಗಿ ಪರಿಣಮಿಸಿತ್ತು. ಪ್ರಸ್ತುತದ ಬೆಳವಣಿಗೆ ಕಾಂಗ್ರೆಸ್ ಸರ್ಕಾರದ ಒಳಗಿನ ಅಸಮಾಧಾನಕ್ಕೆ ತಾತ್ಕಾಲಿಕ ತೆರೆ ಬಿದ್ದಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



