ನೀರಿನ ಸೋರಿಕೆ, ಅಕ್ರಮ ಸಂಪರ್ಕಗಳಿಗೆ BWSSB ಕಡಿವಾಣ: AI-ರೋಬೋ ತಂತ್ರಜ್ಞಾನ ಬಳಕೆಗೆ ಮುಂದು..!
ನಗರದ ವಿವಿಧ ಭಾಗಗಳಲ್ಲಿ ನೀರಿನ ಕಳ್ಳತನ ಹಾಗೂ ಲೆಕ್ಕವಿಲ್ಲದ ನೀರಿನ (Unaccounted For Water - UFW) ಮೂಲಗಳನ್ನು ಪತ್ತೆಹಚ್ಚಲು ಎರಡು ಸ್ಟಾರ್ಟ್‌ಅಪ್ ಸಂಸ್ಥೆಗಳೊಂದಿಗೆ ಜಂಟಿ ಪ್ರಾಯೋಗಿಕ ಅಧ್ಯಯನ ನಡೆಸಲು ಒಪ್ಪಿಗೆ ನೀಡಲಾಗಿದೆ.

ಬೆಂಗಳೂರು: ನಗರದಲ್ಲಿ ನೀರಿನ ಸೋರಿಕೆ ಹಾಗೂ ಅಕ್ರಮ ಸಂಪರ್ಕಗಳ ತಡೆಗಟ್ಟಲು ಬೆಂಗಳೂರು ಜಲ ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆಗೆ ಮುಂದಾಗಿದೆ.
ಕೃತಕ ಬುದ್ಧಿಮತ್ತೆ (AI), ಪ್ರಿಡಿಕ್ಟಿವ್ ಅನಾಲಿಟಿಕ್ಸ್ ಹಾಗೂ ರೋಬೋಟಿಕ್ ತಪಾಸಣಾ ತಂತ್ರಜ್ಞಾನಗಳನ್ನು ಬಳಸಿಕೊಂಡು ನೀರಿನ ವಿತರಣಾ ಜಾಲದಲ್ಲಿ ಉಂಟಾಗುವ ನಷ್ಟವನ್ನು ಪತ್ತೆಹಚ್ಚುವ ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ತರಲು ಜಲಮಂಡಳಿ ಮುಂದಾಗಿದೆ.
ಬಿಡಬ್ಲ್ಯೂಎಸ್ಎಸ್ಬಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಅವರು ಮಾತನಾಡಿ, ನಗರದ ವಿವಿಧ ಭಾಗಗಳಲ್ಲಿ ನೀರಿನ ಕಳ್ಳತನ ಹಾಗೂ ಲೆಕ್ಕವಿಲ್ಲದ ನೀರಿನ (Unaccounted For Water - UFW) ಮೂಲಗಳನ್ನು ಪತ್ತೆಹಚ್ಚಲು ಎರಡು ಸ್ಟಾರ್ಟ್‌ಅಪ್ ಸಂಸ್ಥೆಗಳೊಂದಿಗೆ ಜಂಟಿ ಪ್ರಾಯೋಗಿಕ ಅಧ್ಯಯನ ನಡೆಸಲು ಒಪ್ಪಿಗೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಈ ಯೋಜನೆಯಲ್ಲಿ SmartTerra ಹಾಗೂ Solinas ಸಂಸ್ಥೆಗಳು ಭಾಗವಹಿಸಲಿವೆ. ನೀರಿನ ಸೋರಿಕೆ, ಅಕ್ರಮ ಸಂಪರ್ಕಗಳು ಮತ್ತು ಆದಾಯೇತರ ನೀರಿನ ನಷ್ಟವನ್ನು (Non-Revenue Water - NRW) ಕಡಿಮೆ ಮಾಡುವ ಮಾರ್ಗಗಳನ್ನು ಈ ಅಧ್ಯಯನದಲ್ಲಿ ಪರಿಶೀಲಿಸಲಾಗುತ್ತದೆ.
ಈ ಯೋಜನೆ Titan Design Impact Awards 2.0 – Deep Impact Phase ಅಡಿಯಲ್ಲಿ ಆಯ್ಕೆಯಾಗಿದ್ದು, ಸಂಪೂರ್ಣ ವೆಚ್ಚವನ್ನು Titan Company Limited ಅನುದಾನದ ಮೂಲಕ ಭರಿಸಲಾಗುತ್ತಿದೆ. ಜೊತೆಗೆ Villgro ಸಂಸ್ಥೆ ಇನ್‌ಕ್ಯುಬೇಷನ್ ಪಾಲುದಾರರಾಗಿ ಮತ್ತು WELL Labs ತಾಂತ್ರಿಕ ಪಾಲುದಾರರಾಗಿ ಸಹಕರಿಸುತ್ತಿವೆ.
ಒಂದು ವರ್ಷದ ಅವಧಿಯ ಈ ಅಧ್ಯಯನ BWSSBಗೆ ಯಾವುದೇ ಹೆಚ್ಚುವರಿ ಆರ್ಥಿಕ ಹೊರೆ ಉಂಟುಮಾಡುವುದಿಲ್ಲ. ಅಗತ್ಯವಿದ್ದರೆ ಪೈಪ್ ದುರಸ್ತಿ ಹಾಗೂ ಬದಲಾವಣೆ ಕಾರ್ಯಗಳಿಗೆ ಮಾತ್ರ ಮಂಡಳಿ ಸಹಕಾರ ನೀಡಲಿದೆ.
AI ಮತ್ತು ಡಿಜಿಟಲ್ ತಂತ್ರಜ್ಞಾನಗಳ ನೆರವಿನಿಂದ ನೀರಿನ ಬಳಕೆಯ ಮಾದರಿಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವುದು, ಬೇಡಿಕೆ ಅಂದಾಜು ಮಾಡುವುದು, ಸೋರಿಕೆಗಳನ್ನು ತ್ವರಿತವಾಗಿ ಪತ್ತೆಹಚ್ಚುವುದು, ಬಿಲ್ಲಿಂಗ್ ವ್ಯವಸ್ಥೆ ಸುಧಾರಿಸುವುದು ಹಾಗೂ ಆದಾಯ ಸಂಗ್ರಹಣೆಯನ್ನು ಬಲಪಡಿಸುವುದು ಈ ಯೋಜನೆಯ ಪ್ರಮುಖ ಉದ್ದೇಶಗಳಾಗಿವೆ.
ನಗರದ ನೀರಿನ ನಿರ್ವಹಣೆಯಲ್ಲಿ ತಂತ್ರಜ್ಞಾನ ಆಧಾರಿತ ನವೀನ ಪರಿಹಾರಗಳಿಗೆ BWSSB ಉತ್ತೇಜನ ನೀಡುತ್ತಿದೆ. ಸ್ಟಾರ್ಟ್‌ಅಪ್‌ಗಳು ಅಭಿವೃದ್ಧಿಪಡಿಸುವ ಹೊಸ ತಂತ್ರಜ್ಞಾನಗಳನ್ನು ಪರೀಕ್ಷಿಸಲು ನಮ್ಮ ಮೂಲಸೌಕರ್ಯವನ್ನು 'ಟೆಸ್ಟ್ ಬೆಡ್' ಆಗಿ ಬಳಸಲು ಅವಕಾಶ ಕಲ್ಪಿಸುತ್ತಿದ್ದೇವೆ.
ಡೇಟಾ ಆಧಾರಿತ ವೈಜ್ಞಾನಿಕ ವಿಧಾನಗಳು ಮತ್ತು ಡಿಜಿಟಲ್ ವ್ಯವಸ್ಥೆಗಳು ನಗರ ನೀರಿನ ನಿರ್ವಹಣೆಯಲ್ಲಿ ಮಹತ್ವದ ಬದಲಾವಣೆ ತರಬಲ್ಲವು ಎಂದು ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಯೋಜನೆ ಜಾರಿಗೊಳಿಸಲು ಮೊದಲ ಹಂತದಲ್ಲಿ ಆದ್ಯತಾ ಪ್ರದೇಶಗಳನ್ನು ಗುರುತಿಸಲಾಗುವುದು. ಬಳಿಕ ಸ್ಥಳ ಪರಿಶೀಲನೆ ಮತ್ತು ತಂತ್ರಜ್ಞಾನ ಅಳವಡಿಕೆ ಕಾರ್ಯ ಆರಂಭವಾಗಲಿದೆ.
ನೀರಿನ ಸೋರಿಕೆ ಹಾಗೂ ಕಳ್ಳತನದಿಂದ ಉಂಟಾಗುವ ಆರ್ಥಿಕ ನಷ್ಟವನ್ನು ಕಡಿಮೆ ಮಾಡುವುದು, ಜೊತೆಗೆ ವಿತರಣಾ ಜಾಲದ ದೋಷಗಳಿಂದ ಸಂಭವಿಸುವ ನೀರಿನ ಮಾಲಿನ್ಯವನ್ನು ತಡೆಗಟ್ಟುವುದು ಈ ಯೋಜನೆಯ ಪ್ರಮುಖ ಗುರಿಯಾಗಿದೆ. BWSSBಯ ಈ ಹೊಸ ಪ್ರಯತ್ನವು ಬೆಂಗಳೂರಿನ ನೀರು ನಿರ್ವಹಣಾ ವ್ಯವಸ್ಥೆಯನ್ನು ಇನ್ನಷ್ಟು ಆಧುನೀಕರಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



