ಕಾರ್ಕಳ ಪೊಲೀಸ್ ಕಚೇರಿಯಲ್ಲೇ ಲಂಚ ಸ್ವೀಕಾರ: ಸ್ಟಿಂಗ್ ಆಪರೇಷನ್ ನಲ್ಲಿ ಸಿಕ್ಕಿಬಿದ್ದ Dysp, CPI ಅಮಾನತು!
ಕಾನೂನುಬಾಹಿರ ಚಟುವಟಿಕೆಗಳಿಗೆ ಪೊಲೀಸ್ ರಕ್ಷಣೆ ಕೊಡುವಂತೆ ಕೇಳುವ ವ್ಯಕ್ತಿಯಿಂದ ಸಂದೀಪ್ ಜಿ.ಎಸ್. ಹಣ ಪಡೆಯುವುದು ಸ್ಟಿಂಗ್ ಆಪರೇಷನ್‌ನ ವಿಡಿಯೋದಲ್ಲಿ ಕಂಡುಬಂದಿದೆ.

ಉಡುಪಿ: ಖಾಸಗಿ ಟಿವಿ ವಾಹಿನಿಯೊಂದು ನಡೆಸಿದ ಸ್ಟಿಂಗ್ ಆಪರೇಷನ್ ನಲ್ಲಿ ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡುವ ಸಲುವಾಗಿ ಗ್ರಾಹಕರಂತೆ ನಟಿಸಿದ ವ್ಯಕ್ತಿ (Decoy) ನೀಡಿದ ಲಂಚದ ಹಣವನ್ನು ಸ್ವೀಕರಿಸಿದ ಹಿನ್ನೆಲೆಯಲ್ಲಿ ಕಾರ್ಕಳ ಡಿವೈಎಸ್‌ಪಿ ಎಸ್. ವಿಜಯ ಪ್ರಸಾದ್, ಕಾರ್ಕಳ ವೃತ್ತ ನಿರೀಕ್ಷಕ (ಸಿಪಿಐ) ಸಂದೀಪ್ ಜಿ.ಎಸ್. ಮತ್ತು ಡಿವೈಎಸ್‌ಪಿ ಕಚೇರಿ ಸಿಬ್ಬಂದಿ ಶಿವಾನಂದ ಅವರನ್ನು ಗುರುವಾರ ಅಮಾನತುಗೊಳಿಸಲಾಗಿದೆ.
ಕಾನೂನುಬಾಹಿರ ಚಟುವಟಿಕೆಗಳಿಗೆ ಪೊಲೀಸ್ ರಕ್ಷಣೆ ಕೊಡುವಂತೆ ಕೇಳುವ ವ್ಯಕ್ತಿಯಿಂದ ಸಂದೀಪ್ ಜಿ.ಎಸ್. ಹಣ ಪಡೆಯುವುದು ಸ್ಟಿಂಗ್ ಆಪರೇಷನ್‌ನ ವಿಡಿಯೋದಲ್ಲಿ ಕಂಡುಬಂದಿದೆ. ಈ ದೃಶ್ಯಾವಳಿಗಳು ಮೇಲ್ನೋಟಕ್ಕೆ ಪೊಲೀಸ್ ಇಲಾಖೆಯ ಘನತೆಗೆ ಧಕ್ಕೆ ತಂದಿವೆ ಮತ್ತು ಕರ್ನಾಟಕ ನಾಗರಿಕ ಸೇವಾ (ನಡವಳಿಕೆ) ನಿಯಮಗಳು, 2021ರ ಉಲ್ಲಂಘನೆಯಾಗಿವೆ ಎಂದು ಐಜಿಪಿ (ಪಶ್ಚಿಮ ವಲಯ) ಅಮಿತ್ ಸಿಂಗ್ ಹೊರಡಿಸಿರುವ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಪ್ರತ್ಯೇಕ ಆದೇಶವೊಂದರಲ್ಲಿ ಡಿಜಿ ಮತ್ತು ಐಜಿಪಿ ಡಾ. ಎಂ.ಎ. ಸಲೀಂ ಅವರು ಡಿವೈಎಸ್‌ಪಿ ವಿಜಯ ಪ್ರಸಾದ್ ಅವರನ್ನು ಅಮಾನತುಗೊಳಿಸಿದ್ದಾರೆ; ಈ ಘಟನೆಗೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಎಸಗಿದ್ದಕ್ಕಾಗಿ ಅವರನ್ನು ಹೊಣೆಗಾರರನ್ನಾಗಿ ಮಾಡಲಾಗಿದೆ.
ಡಿವೈಎಸ್‌ಪಿ ಸ್ವತಃ ಹಣವನ್ನು ಸ್ವೀಕರಿಸುತ್ತಿರುವುದು ಕಂಡುಬರದಿದ್ದರೂ, ಹಣ ಹಸ್ತಾಂತರಿಸಲು ಬಯಸುವುದಾಗಿ ಹೇಳಿ ವ್ಯಕ್ತಿಯೊಬ್ಬರು ತಮ್ಮ ಕಚೇರಿಗೆ ಪ್ರವೇಶಿಸಿದ್ದರು ಮತ್ತು ನಂತರ ಹಣ ಪಡೆಯಲು ತಮ್ಮ ಅಧೀನ ಸಿಬ್ಬಂದಿಯೊಬ್ಬರ ಮೇಲೆ ಬಲವಂತಪಡಿಸಿದರು ಎಂದು ತಮ್ಮ ಹೇಳಿಕೆಯಲ್ಲಿ ಅವರು ಒಪ್ಪಿಕೊಂಡಿದ್ದಾರೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಆ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಅವಕಾಶವಿದ್ದರೂ ಡಿವೈಎಸ್‌ಪಿ ಹಾಗೆ ಮಾಡಿಲ್ಲ, ಇದು ಗಂಭೀರ ಕರ್ತವ್ಯ ಲೋಪವಾಗಿದೆ ಅಲ್ಲದೆ, ಈ ಘಟನೆಯು ಪೊಲೀಸ್ ಇಲಾಖೆಗೆ ಅಪಖ್ಯಾತಿ ತಂದಿದೆ ಮತ್ತು ಸಾರ್ವಜನಿಕ ಸೇವಕರಿಗೆ ಅನ್ವಯಿಸುವ ನಡವಳಿಕೆ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಅದು ತಿಳಿಸಿದೆ.
ಇಲಾಖಾ ವಿಚಾರಣೆಯವರೆಗೂ ಈ ಪೊಲೀಸರು ಅಮಾನತುಗೊಂಡಿರುತ್ತಾರೆ. ಹೆಚ್ಚುವರಿ ಎಸ್‌ಪಿ ನಡೆಸಿದ ಪ್ರಾಥಮಿಕ ತನಿಖೆಯ ನಂತರ ಶಿಸ್ತು ಕ್ರಮದ ಆದೇಶದವರೆಗೆ ಮೂವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಉಡುಪಿ ಎಸ್‌ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



