ರಾಜ್ಯ

ರಾಜ್ಯದ ರೇಷನ್ ಅಂಗಡಿಗಳಲ್ಲಿ 'ಸರ್ಕಾರಿ ನ್ಯಾಯಬೆಲೆ ಅಂಗಡಿ' ಸಿನಿಮಾ ಪ್ರೀಮಿಯರ್ ಶೋ ಟಿಕೆಟ್ ಮಾರಾಟ! ಜನರ ಆಕ್ರೋಶ

ಒಂದೊಂದು ಅಂಗಡಿಗೆ 50 ಟಿಕೆಟ್, 100 ಟಿಕೆಟ್, 150 ಟಿಕೆಟ್​ಗಳನ್ನು ನೀಡಲಾಗಿದೆ. ಹೀಗೆ 20 ಸಾವಿರಕ್ಕೂ ಅಧಿಕ ಅಂಗಡಿಗಳಲ್ಲಿ ಸಿನಿಮಾದ ಟಿಕೆಟ್ ಮಾರಾಟ ಮಾಡಲಾಗುತ್ತಿದೆ ಎನ್ನಲಾಗಿದೆ.

ರಾಜ್ಯದ ರೇಷನ್ ಅಂಗಡಿಗಳಲ್ಲಿ 'ಸರ್ಕಾರಿ ನ್ಯಾಯಬೆಲೆ ಅಂಗಡಿ' ಸಿನಿಮಾ ಪ್ರೀಮಿಯರ್ ಶೋ ಟಿಕೆಟ್ ಮಾರಾಟ! ಜನರ ಆಕ್ರೋಶ
ರಾಗಿಣಿ ದ್ವಿವೇದಿ
Published On :

ಹಾವೇರಿ: ರಾಜ್ಯದ ರೇಷನ್‌ ಅಂಗಡಿಗಳಲ್ಲಿ ಕುಮಾರ್‌ ಬಂಗಾರಪ್ಪ ನಟನೆಯ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾದ ಫ್ರೀಮಿಯರ್ ಶೋ ಟಿಕೆಟ್​​ ಮಾರಾಟವಾಗುತ್ತಿರುವುದು ವಿವಾದಕ್ಕೆ ಕಾರಣವಾಗಿದೆ.

ಹಾವೇರಿಯ ಸುಭಾಷ್ ವೃತ್ತ ಸೇರಿದಂತೆ ಹಲವು ಕಡೆಯ ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ-ಜೋಳದ ಜೊತೆಯಲ್ಲಿ ಸಿನಿಮಾ ಟಿಕೆಟ್ ಮಾರಾಟ ಮಾಡಲಾಗುತ್ತಿದ್ದು, 150 ರೂ.ಗೆ ಟಿಕೆಟ್ ಕೊಟ್ಟು ಖರೀದಿಸುವಂತೆ ಅಂಗಡಿ ಮಾಲೀಕರು ಒತ್ತಡ ಹಾಕುತ್ತಿದ್ದಾರೆ ಎಂದು ಪಡಿತರದಾರರು ಆರೋಪಿಸುತ್ತಿದ್ದಾರೆ.

ಒಂದೊಂದು ಅಂಗಡಿಗೆ 50 ಟಿಕೆಟ್, 100 ಟಿಕೆಟ್, 150 ಟಿಕೆಟ್​ಗಳನ್ನು ನೀಡಲಾಗಿದೆ. ಹೀಗೆ 20 ಸಾವಿರಕ್ಕೂ ಅಧಿಕ ಅಂಗಡಿಗಳಲ್ಲಿ ಸಿನಿಮಾದ ಟಿಕೆಟ್ ಮಾರಾಟ ಮಾಡಲಾಗುತ್ತಿದೆ ಎನ್ನಲಾಗಿದೆ.

ಕೆಲವು ಅಂಗಡಿಯ ಮಾಲೀಕರು ಗ್ರಾಹಕರು ಜಗಳ ಮಾಡುತ್ತಾರೆ ಅನ್ನೋ ಕಾರಣಕ್ಕಾಗಿ ಟಿಕೆಟ್ ಮಾರಾಟ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಬಡಜನರು ಮುಂದಿನ ತಿಂಗಳು ರೇಷನ್ ಕೊಡುತ್ತಾರೋ ಇಲ್ಲೋ ಅನ್ನೋ ಭಯದಲ್ಲಿ ಟಿಕೆಟ್ ತೆಗೆದುಕೊಳ್ಳುತ್ತಿದ್ದಾರೆ. ಆಹಾರ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿಯೇ ಪಡಿತರ ಅಂಗಡಿಯಲ್ಲಿ ಸಿನಿಮಾ ಟಿಕೆಟ್ ಮಾರಾಟ ಮಾಡೋದು ಎಷ್ಟು ಸರಿ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟಿಕೆಟ್ ಮಾರಾಟದ ಬಗ್ಗೆ ಮಾತನಾಡಿದ ಆಹಾರ ಇಲಾಖೆಯ ಉಪನಿರ್ದೇಶಕ ಡಿ.ಜೆ. ಮಂಜುನಾಥ್, ಸರ್ಕಾರಿ ನ್ಯಾಯ ಬೆಲೆ ಅಂಗಡಿ ಚಲನಚಿತ್ರದಲ್ಲಿ ಅನ್ನಭಾಗ್ಯ ಯೋಜನೆ ಜಾಗೃತಿ ಕುರಿತು ಮಾಹಿತಿ ಇದೆ. ಈ ಸಿನಿಮಾದ ಪೋಸ್ಟರ್ ಅನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಆಹಾರ ಸಚಿವ ಕೆ. ಹೆಚ್​. ಮುನಿಯಪ್ಪ ಅವರು ಎರಡು ತಿಂಗಳ ಹಿಂದೆ ಬಿಡುಗಡೆ ಮಾಡಿದ್ದರು. ಆಯುಕ್ತರೂ ಸಹ ರಾಜ್ಯದ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದ್ರೆ ಯಾರಿಗೂ ಬಲವಂತವಾಗಿ ಟಿಕೆಟ್ ಮಾರಾಟ ಮಾಡುತ್ತಿಲ್ಲ. ನ್ಯಾಯಬೆಲೆ ಅಂಗಡಿಗಳ ಬಗ್ಗೆ ಜಾಗೃತಿ ಮೂಡಿಸುವ ವಿಷಯ ಸಿನಿಮಾದಲ್ಲಿ ಇರುವ ಕಾರಣಕ್ಕಾಗಿ ಪ್ರೀಮಿಯರ್ ಶೋ ಪ್ರದರ್ಶನಕ್ಕಾಗಿ ಈ ರೀತಿ ಮಾಡಲಾಗಿದೆ. ಯಾವುದೇ ಗ್ರಾಹಕರಿಗೆ ಒತ್ತಾಯ ಮಾಡಿಲ್ಲ ಎಂದು ತಿಳಿಸಿದ್ದಾರೆ.

ಜು. 31ಕ್ಕೆ ಚಿತ್ರ ಬಿಡುಗಡೆ; ಇದೇ ಜುಲೈ 31ಕ್ಕೆ ಚಿತ್ರ ಬಿಡುಗಡೆ ಆಗುತ್ತಿದೆ. ನಟಿ ರಾಗಿಣಿ ದ್ವಿವೇದಿ, ನಟರಾದ ಕುಮಾರ್ ಬಂಗಾರಪ್ಪ, ದೊಡ್ಡಣ್ಣ, ನವೀನ್ ಸಜ್ಜು, ಕೃಷ್ಣಪ್ಪ, ರುದ್ರೇಗೌಡ ಸೇರಿ ಮೊದಲಾದ ಕಲಾವಿದರು ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿರುವ ಈ ಸಿನಿಮಾದ ಟ್ರೇಲರ್ ಇತ್ತೀಚೆಗೆ ಅನಾವರಣಗೊಂಡಿತ್ತು.

ಜಯಶಂಕರ ಟಾಕೀಸ್‌ ಬ್ಯಾನರ್​ನಲ್ಲಿ ನಿರ್ಮಾಣವಾಗುತ್ತಿರುವ ಸರ್ಕಾರಿ ನ್ಯಾಯಬೆಲೆ ಅಂಗಡಿ ಚಿತ್ರವನ್ನು ತೇಜು ಮೂರ್ತಿ ಮತ್ತು ಪದ್ಮಾವತಿ ಚಂದ್ರಶೇಖರ್‌ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಅನಂತ್‌ ಆರ್ಯನ್‌ ಸಂಗೀತ ಸಂಯೋಜಿಸುತ್ತಿದ್ದಾರೆ. ಬಿ. ರಾಮಮೂರ್ತಿ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯಿರುವ ಚಿತ್ರಕ್ಕೆ ಸಾತ್ವಿಕ್‌ ಪವನ್‌ ಕುಮಾರ್‌ ಛಾಯಾಗ್ರಹಣ ಮತ್ತು ನಿರ್ದೇಶನ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.