Dandeli Zipline ದುರಂತ: ರೆಸಾರ್ಟ್ ಮಾಲೀಕ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು..!
ಈ ಪ್ರಕರಣದಲ್ಲಿ ಸ್ಟಾರ್ಲಿಂಗ್ ರಿವರ್ ರೆಸಾರ್ಟ್‌ನ ಮಾಲೀಕ ಉಸ್ಮಾನ್, ಸಿಬ್ಬಂದಿಗಳಾದ ರಾಘವೇಂದ್ರ ಹಾಗೂ ಪವನ್ ವಿರುದ್ಧ ಡಾಂಡೇಲಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಹುಬ್ಬಳ್ಳಿ: ಉತ್ತರ ಕನ್ನಡ ಜಿಲ್ಲೆಯ ಡಾಂಡೇಲಿಯ ಖಾಸಗಿ ರೆಸಾರ್ಟ್‌ನಲ್ಲಿ ಜಿಪ್‌ಲೈನ್ ಸಾಹಸ ಕ್ರೀಡೆ ವೇಳೆ ವಿಜಯಪುರ ಮೂಲದ ವ್ಯಕ್ತಿ ಗಂಭೀರವಾಗಿ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿ, ರೆಸಾರ್ಟ್ ಮಾಲೀಕ ಸೇರಿದಂತೆ ಮೂವರ ವಿರುದ್ಧ ಪೊಲೀಸರು ನಿರ್ಲಕ್ಷ್ಯದ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.
ಗಾಯಗೊಂಡಿರುವ ವಿಜಯಪುರದ ಕುಬೇರ ಸುರಪುರ (40) ಅವರು ಮಹಾರಾಷ್ಟ್ರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಪ್ರಕರಣದಲ್ಲಿ ಸ್ಟಾರ್ಲಿಂಗ್ ರಿವರ್ ರೆಸಾರ್ಟ್‌ನ ಮಾಲೀಕ ಉಸ್ಮಾನ್, ಸಿಬ್ಬಂದಿಗಳಾದ ರಾಘವೇಂದ್ರ ಹಾಗೂ ಪವನ್ ವಿರುದ್ಧ ಡಾಂಡೇಲಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಜುಲೈ 3ರಂದು ರೆಸಾರ್ಟ್‌ನಲ್ಲಿ ಜಿಪ್‌ಲೈನ್ ಸಾಹಸ ಕ್ರೀಡೆ ನಡೆಸುತ್ತಿದ್ದ ವೇಳೆ ಕುಬೇರ ಸುರಪುರ ಅವರು ಮೇಲಿನಿಂದ ಕೆಳಗೆ ಬಿದ್ದಿದ್ದರು. ಈ ಸಂಪೂರ್ಣ ಘಟನೆ ಅವರ ಸಹೋದರ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದರು.
ಅಪಘಾತ ಸಂಭವಿಸಿದ ತಕ್ಷಣ ಯಾವುದೇ ಪೊಲೀಸ್ ಪ್ರಕರಣ ದಾಖಲಾಗಿರಲಿಲ್ಲ. ಆದರೆ, ಗಾಯಾಳುವಿನ ಆಸ್ಪತ್ರೆ ವೆಚ್ಚವನ್ನು ಭರಿಸುವುದಾಗಿ ಭರವಸೆ ನೀಡಿದ್ದ ರೆಸಾರ್ಟ್ ಆಡಳಿತ ನಂತರ ಅದನ್ನು ಪಾಲಿಸದ ಹಿನ್ನೆಲೆಯಲ್ಲಿ ಕುಟುಂಬದವರು ಮಾಧ್ಯಮಗಳ ಮುಂದೆ ಬಂದರು. ಇದರ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ತಾಂತ್ರಿಕ ದೋಷದಿಂದ ಅಪಘಾತ: ರೆಸಾರ್ಟ್ ಸ್ಪಷ್ಟನೆ
ಘಟನೆ ಕುರಿತು ಪ್ರತಿಕ್ರಿಯಿಸಿರುವ ರೆಸಾರ್ಟ್ ಆಡಳಿತ, ತಾಂತ್ರಿಕ ದೋಷದಿಂದ ಅಪಘಾತ ಸಂಭವಿಸಿದ್ದು, ಇದು ನಿರ್ಲಕ್ಷ್ಯದಿಂದ ಆಗಿಲ್ಲ ಎಂದು ಸ್ಪಷ್ಟಪಡಿಸಿದೆ.
ಸುರಕ್ಷತಾ ಕ್ರಮಗಳಲ್ಲಿ ಲೋಪವೇ ಕಾರಣ?
ಆದರೆ, ತಜ್ಞರು ಈ ವಾದವನ್ನು ತಳ್ಳಿಹಾಕಿದ್ದು, ಉಪಕರಣಗಳ ನಿಯಮಿತ ಪರಿಶೀಲನೆ ಮಾಡದಿರುವುದು ಮತ್ತು ಅತಿಯಾದ ಪ್ರವಾಸೋದ್ಯಮದ ಒತ್ತಡವೇ ಇಂತಹ ಅವಘಡಗಳಿಗೆ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.
"ಜಿಪ್‌ಲೈನ್‌ನಲ್ಲಿ ಭಾಗವಹಿಸಿದ ವ್ಯಕ್ತಿಗೆ ಹೆಚ್ಚುವರಿ ಸುರಕ್ಷತಾ ಹಾರ್ನೆಸ್ ಏಕೆ ಅಳವಡಿಸಲಾಗಿರಲಿಲ್ಲ? ಮುಖ್ಯ ಹಗ್ಗ ತುಂಡಾದರೂ ವ್ಯಕ್ತಿ ಕೆಳಗೆ ಬೀಳದಂತೆ ತಡೆಯುವ ಸುರಕ್ಷತಾ ವ್ಯವಸ್ಥೆ ಇರಬೇಕಿತ್ತು. ಒಂದೇ ಜಿಪ್‌ಲೈನ್ ಅನ್ನು ಎಷ್ಟು ಜನ ಬಳಸಿದ್ದಾರೆ ಎಂಬುದರ ದಾಖಲೆ ಕೂಡ ಸರಿಯಾಗಿ ಇರಬೇಕು. ಉಪಕರಣಗಳನ್ನು ನಿಯಮಿತವಾಗಿ ತಪಾಸಣೆ ಮಾಡಬೇಕು ಮತ್ತು ಪರಿಣಿತರ ತಂಡವು ಸಮಯಕ್ಕೆ ಸರಿಯಾಗಿ ಪರಿಶೀಲನೆ ನಡೆಸಬೇಕು" ಎಂದು ಹೇಳಿದ್ದಾರೆ.
ಇದೇ ವೇಳೆ ಹೋಂಸ್ಟೇ ಮತ್ತು ರೆಸಾರ್ಟ್‌ಗಳಲ್ಲಿ ಪರಿಣಿತರ ತಂಡವಿಲ್ಲದೆ ಸಾಹಸ ಕ್ರೀಡೆಗಳನ್ನು ನಡೆಸುವುದಕ್ಕೆ ನಿರ್ಬಂಧ ಹೇರಬೇಕೆಂದು ತಜ್ಞರು ಆಗ್ರಹಿಸಿದ್ದಾರೆ.
ಸರ್ಕಾರದ ನಿಯಮಾವಳಿಗಳ ಪ್ರಕಾರ, ಅನೇಕ ಚಟುವಟಿಕೆಗಳಿಗೆ ನಿರ್ದಿಷ್ಟ ಅನುಮತಿ ಅಗತ್ಯವಿದೆ. ಆದರೂ ಹಲವು ಸಣ್ಣ ರೆಸಾರ್ಟ್‌ಗಳು ಮತ್ತು ಹೋಂಸ್ಟೇಗಳು ನಿಯಮ ಉಲ್ಲಂಘಿಸಿ ವಾಟರ್ ಸ್ಪೋರ್ಟ್ಸ್ ಹಾಗೂ ಸಾಹಸ ಕ್ರೀಡೆಗಳನ್ನು ನಡೆಸುತ್ತಿವೆ. ಇಂತಹ ಬೆಳವಣಿಗೆಗಳ ಮೇಲೆ ಪ್ರವಾಸೋದ್ಯಮ ಇಲಾಖೆ ಕಟ್ಟುನಿಟ್ಟಿನ ನಿಗಾ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



