ನ್ಯಾಯಕ್ಕಾಗಿ ಸಮಾಧಿ ಅಗೆದು ತಾಯಿಯ ಕೊಳೆತ ಶವವನ್ನೇ ಬೈಕ್‌ನಲ್ಲಿ ತಂದ ಮಕ್ಕಳು: ಬೆಚ್ಚಿಬಿದ್ದ ದಾವಣಗೆರೆ!
ತಮ್ಮ ತಾಯಿಯ ಸಾವು ಸಹಜವಲ್ಲ, ಅದೊಂದು ಕೊಲೆ ಎಂದು ಆರೋಪಿಸಿರುವ ಮಕ್ಕಳು, ಪೊಲೀಸರು ಪ್ರಕರಣವನ್ನು ಮುಚ್ಚಿ ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಾವಣಗೆರೆ: ಮೂರು ತಿಂಗಳ ಹಿಂದೆ ಹತ್ಯೆಯಾಗಿದ್ದ ತಮ್ಮ ತಾಯಿಯ ಸಾವಿಗೆ ನ್ಯಾಯಕ್ಕಾಗಿ ಆಗ್ರಹಿಸಿದ ಮಕ್ಕಳು, ಹೂತಿಟ್ಟಿದ್ದ ತಾಯಿಯ ಕೊಳೆತ ಶವವನ್ನು ಸಮಾಧಿಯಿಂದ ಹೊರತೆಗೆದು, ಬಟ್ಟೆಯಲ್ಲಿ ಸುತ್ತಿಕೊಂಡು ರಾತ್ರೋರಾತ್ರಿ ಬೈಕ್ ಮೇಲೆ ಆಸ್ಪತ್ರೆಗೆ ಹೊತ್ತೊಯ್ದ ಆಘಾತಕಾರಿ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಅದಾಪುರ ಗ್ರಾಮದಲ್ಲಿ ನಡೆದಿದೆ.
ತಮ್ಮ ತಾಯಿಯ ಸಾವು ಸಹಜವಲ್ಲ, ಅದೊಂದು ಕೊಲೆ ಎಂದು ಆರೋಪಿಸಿರುವ ಮಕ್ಕಳು, ಪೊಲೀಸರು ಪ್ರಕರಣವನ್ನು ಮುಚ್ಚಿ ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊನೆಗೆ ನ್ಯಾಯಕ್ಕಾಗಿ ಆಗ್ರಿಸಿದ ಮಕ್ಕಳು ಇಡೀ ದಾವಣಗೆರೆ ಜಿಲ್ಲೆಯನ್ನೇ ಬೆಚ್ಚಿಬೀಳಿಸುವಂತಹ ಕೆಲಸ ಮಾಡಿದ್ದಾರೆ. ಮೂರು ತಿಂಗಳ ಹಿಂದೆ ಅಂತ್ಯಕ್ರಿಯೆ ಮಾಡಿದ್ದ ತಾಯಿಯ ಶವವನ್ನು ಸಮಾಧಿಯಿಂದ ಹೊರತೆಗೆದು ಬೈಕ್‌ನಲ್ಲಿ ಹೊತ್ತುಕೊಂಡು ಜಿಲ್ಲಾಸ್ಪತ್ರೆಗೆ ಬಂದಿರುವ ಘೋರ ಘಟನೆ ನಡೆದಿದೆ.
ಆದಾಪುರ ಗ್ರಾಮದ ಈರಮ್ಮ ಎಂಬುವವರು ಏಪ್ರಿಲ್ 29ರಂದು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆರಂಭದಲ್ಲಿ ವೈದ್ಯರು ಇದೊಂದು ಆತ್ಮಹತ್ಯೆ ಎಂದು ಹೇಳಲಾಗಿತ್ತು. ಆದರೆ ಇದನ್ನು ಒಪ್ಪದ ಮಕ್ಕಳು, ತಾಯಿಯ ಸಾವಿಗೆ ಅಕ್ಕಪಕ್ಕದ ಮನೆಯವರೇ ಕಾರಣ ಎಂದು ಮಗ ಮಂಜುನಾಥ್ ಆರೋಪಿಸಿದ್ದರು. ಈ ಸಂಬಂಧ 11 ಜನರ ವಿರುದ್ಧ ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮಲೆಬೆನ್ನೂರು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಶವವನ್ನು ಗ್ರಾಮದಲ್ಲಿ ಅಂತ್ಯಕ್ರಿಯೆ ಮಾಡಲಾಗಿತ್ತು.
ಆದರೆ, ಗ್ರಾಮದಲ್ಲಿ ಈ ಸಾವಿನ ಕುರಿತು ಹತ್ತಾರು ಅನುಮಾನಗಳು ಕೇಳಿಬರಲಾರಂಭಿಸಿದವು. ಗ್ರಾಮದಲ್ಲಿ ಬಾಕ್ಸ್ ಚರಂಡಿ ನಿರ್ಮಾಣದ ವಿಚಾರವಾಗಿ ಸಂಬಂಧಿಕರಾದ ಕರಿಯಪ್ಪ, ಭದ್ರಾ, ಶಕುಂತಲಾ ಸೇರಿದಂತೆ ಸುಮಾರು 10 ಜನರ ಜೊತೆ ಈರಮ್ಮ ಜಗಳವಾಡಿದ್ದರು. ಅವರೇ ತಾಯಿಯನ್ನು ಹೊಡೆದು ಕೊಲೆ ಮಾಡಿ, ನಂತರ ನೇಣು ಹಾಕಿದ್ದಾರೆ ಎಂದು ಮಕ್ಕಳು ಗಂಭೀರವಾಗಿ ಆರೋಪ ಮಾಡಿದ್ದಾರೆ.
ತಾಯಿಯ ಮೈಮೇಲೆ ಗಾಯದ ಗುರುತುಗಳಿದ್ದವು ಎಂದು ಹಿರಿಯ ಮಗ ಮಂಜುನಾಥ್ ಹಾಗೂ ಕಿರಿಯ ಮಗ ವೆಂಕಟೇಶ್ ದೂರಿದ್ದಾರೆ.
ನ್ಯಾಯಕ್ಕಾಗಿ ಸಮಾಧಿ ಅಗೆದು ಶವ ಹೊರತೆಗೆದ ಮಕ್ಕಳು
ತಮ್ಮ ತಾಯಿಯ ಸಾವಿಗೆ ನ್ಯಾಯ ಸಿಗಬೇಕು ಮತ್ತು ಮರು ಮರಣೋತ್ತರ ಪರೀಕ್ಷೆ ಆಗಬೇಕು ಎಂದು ಮಕ್ಕಳು ಮಲೇಬೆನ್ನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಪೊಲೀಸರು ಸೂಕ್ತ ತನಿಖೆ ನಡೆಸದ ಕಾರಣ, ಹಗಲು ಸಮಾಧಿ ಅಗೆದರೆ ತೊಂದರೆಯಾಗಬಹುದೆಂದು ಭಾವಿಸಿದ ಸಹೋದರರು, ತಡರಾತ್ರಿ ತಾಯಿಯ ಸಮಾಧಿ ಅಗೆದಿದ್ದಾರೆ. ಕೊಳೆತ ಸ್ಥಿತಿಯಲ್ಲಿದ್ದ ಶವವನ್ನು ಬಟ್ಟೆಯಲ್ಲಿ ಸುತ್ತಿಕೊಂಡು ಬೈಕ್ ಮಧ್ಯೆ ಇರಿಸಿಕೊಂಡು ದಾವಣಗೆರೆ ಜಿಲ್ಲಾ ಆಸ್ಪತ್ರೆಯತ್ತ ಮುಖ ಮಾಡಿದ್ದಾರೆ. ಆದರೆ ಶಾಮನೂರು ರಸ್ತೆಯ ಬಳಿ ನಿಯಂತ್ರಣ ತಪ್ಪಿ ಬೈಕ್ ಬಿದ್ದಾಗ ಸಾರ್ವಜನಿಕರು ಸೇರಿದ್ದು, ಶವ ಪತ್ತೆಯಾದಾಗ ಇಡೀ ವಿಷಯ ಬೆಳಕಿಗೆ ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



