ರಾಜ್ಯ

ಪುತ್ರಿಯರ ಅಕ್ರಮ ನೇಮಕಕ್ಕೆ ನೆರವು: KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ಅಮಾನತುಗೊಳಿಸಿ ರಾಜ್ಯಪಾಲರ ಆದೇಶ

ಶಿವಶಂಕರಪ್ಪ ವಿರುದ್ಧದ ಆರೋಪಗಳ ಬಗ್ಗೆ ತನಿಖೆಗೆ ಶಿಫಾರಸು ಮಾಡಲಾಗಿದೆ ಸುಪ್ರೀಂಕೋರ್ಟಿಗೆ ಉಲ್ಲೇಖಿಸಲು ರಾಷ್ಟ್ರಪತಿಗಳಿಗೆ ರಾಜ್ಯಪಾಲರು ಶಿಫಾರಸು ಮಾಡಿದ್ದಾರೆ.

ಪುತ್ರಿಯರ ಅಕ್ರಮ ನೇಮಕಕ್ಕೆ ನೆರವು: KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ಅಮಾನತುಗೊಳಿಸಿ ರಾಜ್ಯಪಾಲರ ಆದೇಶ
ಶಿವಶಂಕರಪ್ಪ ಸಾಹುಕಾರ
Published On :

ಬೆಂಗಳೂರು: ತನ್ನ ಇಬ್ಬರು ಪುತ್ರಿಯರು ಕೈಗಾರಿಕಾ ವಿಸ್ತರಣಾಧಿಕಾರಿಯಾಗಿ ನೇಮಕವಾಗಲು ಸಹಕರಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ಅವರನ್ನು ಕೂಡಲೇ ಜಾರಿಗೆ ಬರುವಂತೆ ಅಮಾನತುಗೊಳಿಸಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೊಟ್ ಆದೇಶ ಹೊರಡಿಸಿದ್ದಾರೆ.

ಶಿವಶಂಕರಪ್ಪ ವಿರುದ್ಧದ ಆರೋಪಗಳ ಬಗ್ಗೆ ತನಿಖೆಗೆ ಶಿಫಾರಸು ಮಾಡಲಾಗಿದೆ ಸುಪ್ರೀಂಕೋರ್ಟಿಗೆ ಉಲ್ಲೇಖಿಸಲು ರಾಷ್ಟ್ರಪತಿಗಳಿಗೆ ರಾಜ್ಯಪಾಲರು ಶಿಫಾರಸು ಮಾಡಿದ್ದಾರೆ. ಮುಂದಿನ ಆದೇಶದವರೆಗೆ ಹಿರಿಯ ಸದಸ್ಯರು ಕೆಪಿಎಸ್ ಸಿ ಹಂಗಾಮಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುವಂತೆ ರಾಜ್ಯಪಾಲರ ಆದೇಶದಲ್ಲಿ ತಿಳಿಸಲಾಗಿದೆ.

ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಾದ ಶಿವಶಂಕರಪ್ಪ ಎಸ್. ಸಾಹುಕಾರ ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿರುವ ಗಂಭೀರ ಆರೋಪ ಕೇಳಿಬಂದಿದೆ. ತಮ್ಮ ಪುತ್ರಿಗೆ ಸರ್ಕಾರಿ ಹುದ್ದೆ ಕೊಡುವ ಸಲುವಾಗಿ, ಕುಟುಂಬದ ವಾರ್ಷಿಕ ಆದಾಯ ಪ್ರಮಾಣಪತ್ರದಲ್ಲಿ ಸುಳ್ಳು ಮಾಹಿತಿ ಹಾಕಲು ಅವರು ಸಹಕರಿಸಿದ್ದಾರೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ.

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿನ 50 ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗಳಿಗೆ 2024ರ ಮಾರ್ಚ್ 15ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಈ ಹುದ್ದೆಗಾಗಿ ಅಧ್ಯಕ್ಷರ ಪುತ್ರಿ ಸುಮಾ ಎಸ್. ಸಾಹುಕಾರ್ ಅವರು 3ಬಿ ಮೀಸಲಾತಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. 1:3 ಅನುಪಾತದ ಅರ್ಹತಾ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಅವರು ಫೆಬ್ರವರಿ 19ರಂದು ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗಿದ್ದರು. ದಾಖಲೆಗಳ ಪರಿಶೀಲನೆ ವೇಳೆ, ಅವರು ಸಲ್ಲಿಸಿದ್ದ 2020ರ ಮಾರ್ಚ್ 4ರ ದಿನಾಂಕ ಹೊಂದಿರುವ ಜಾತಿ ಮತ್ತು ಆದಾಯ ಪ್ರಮಾಣಪತ್ರದಲ್ಲಿ ಕುಟುಂಬದ ವಾರ್ಷಿಕ ಆದಾಯ ಕೇವಲ 40 ಸಾವಿರ ಎಂದಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.

ಶಿವಶಂಕರಪ್ಪ ಸಾಹುಕಾರ್ ಅವರು 2019 ರಿಂದಲೇ ಆಯೋಗದ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದು, ಆಯೋಗದಿಂದ ವೇತನ ಪಡೆಯುತ್ತಿದ್ದಾರೆ. ಹೀಗಿರುವಾಗ ಅವರ ಆದಾಯ ಕೇವಲ 40 ಸಾವಿರ ಎನ್ನುವುದು ಶುದ್ಧ ಸುಳ್ಳು ಎಂಬುದು ಸ್ಪಷ್ಟವಾಗಿದೆ.

ಹೀಗಾಗಿ ಕೆಪಿಎಸ್ ಸಿ ಸಮಗ್ರತೆ ಮತ್ತು ವಿಶ್ವಾಸಾರ್ಹತೆಯನ್ನು ರಕ್ಷಿಸುವ ಜೊತೆಗೆ ನ್ಯಾಯಯುತ, ನಿಷ್ಪಕ್ಷಪಾತ ಮತ್ತು ಪ್ರಭಾವ ರಹಿತ ತನಿಖೆಯನ್ನು ಖಚಿತಪಡಿಸಲು, ರಾಷ್ಟ್ರಪತಿಗಳಿಂದ ಮುಂದಿನ ಆದೇಶ ಬರುವವರೆಗೆ ರಾಜ್ಯಪಾಲರು ಶಿವಶಂಕರಪ್ಪ ಸಾಹುಕಾರ ಅವರನ್ನು ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಸ್ಥಾನದಿಂದ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದ್ದಾರೆ. ಅಲ್ಲದೇ ಮುಂದಿನ ಆದೇಶ ಆಗುವವರಗೆ ಆಯೋಗದ ಹಿರಿಯ ಸದಸ್ಯರು ಆಯೋಗದ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವಂತೆ ರಾಜ್ಯಪಾಲರು ಆದೇಶಿಸಿದ್ದಾರೆ ಎಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.