17 ಭಾಷೆಗಳಲ್ಲಿ ಹಾಡಿದರೂ ಕನ್ನಡದ ನೆಲದಲ್ಲೇ ಮಣ್ಣಾದ ಗಾನಕೋಗಿಲೆ: ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಎಸ್.ಜಾನಕಿ ಅಂತ್ಯಕ್ರಿಯೆ!
ಜಾನಕಿ ಅವರ ಏಕೈಕ ಪುತ್ರ ಕಳೆದ ಜನವರಿಯಲ್ಲಿ ನಿಧನರಾಗಿದ್ದರಿಂದ, ಅವರ ಮೊಮ್ಮಗಳು ಅಪ್ಸರಾ ಅವರು ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು.

ಮೈಸೂರು: 17 ಭಾಷೆಗಳಲ್ಲಿ ಹಾಡಿದರೂ ಕನ್ನಡ ನೆಲೆದಲ್ಲೇ ಬಹುಭಾಷಾ ಹಿರಿಯ ಗಾಯಕಿ, ಗಾನ ಕೋಗಿಲೆ ಎಸ್. ಜಾನಕಿ ಲೀನರಾಗಿದ್ದಾರೆ. ಅವರ ಆಸೆಯಂತೆಯೇ ಎಚ್.ಡಿ. ಕೋಟೆ ರಸ್ತೆಯ ಕಣಿಯನಹುಂಡಿಯಲ್ಲಿರುವ ಸಾಕುಮಗ ನವೀನ್ ಅವರ ‘ನವೀನ್ ಫಾರ್ಮ್ ಹೌಸ್’ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಭಾನುವಾರ ನೆರವೇರಿತು.
ಜಾನಕಿ ಅವರ ಏಕೈಕ ಪುತ್ರ ಕಳೆದ ಜನವರಿಯಲ್ಲಿ ನಿಧನರಾಗಿದ್ದರಿಂದ, ಅವರ ಮೊಮ್ಮಗಳು ಅಪ್ಸರಾ ಅವರು ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು.
ಶ್ರೀರಂಗಪಟ್ಟಣದ ರಮೇಶ್ ಶರ್ಮಾ ಹಾಗೂ ಶಾಶ್ವತಿ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ನಡೆದವು. ಮೈಸೂರು ಜಿಲ್ಲಾಡಳಿತದ ವತಿಯಿಂದ ಪೊಲೀಸ್ ಗೌರವವನ್ನು ಸಲ್ಲಿಸುವ ಮೂಲಕ ಗಾನಕೋಗಿಲೆಗೆ ಭಾವಪೂರ್ಣ ವಿದಾಯ ಹೇಳಲಾಯಿತು.
ಸಕಲ ಸರ್ಕಾರಿ ಗೌರವ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿರ್ದೇಶನದಂತೆ ಜಿಲ್ಲಾಡಳಿತವು ಸಕಲ ಸರ್ಕಾರಿ ಗೌರವಗಳೊಂದಿಗೆ ಗಾಯಕಿಗೆ ವಿದಾಯ ನೀಡಿತು. ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಗೌರವ ವಂದನೆ ಸಲ್ಲಿಸಿದರು.

17 ಭಾಷೆಗಳಲ್ಲಿ 48 ಸಾವಿರ ಹಾಡುಗಳಿಗೆ ಧ್ವನಿ: 2013ರಲ್ಲಿ ಪದ್ಮಭೂಷಣ ತಿರಸ್ಕರಿಸಿದ್ದ ದಿಟ್ಟ ಗಾಯಕಿ ಎಸ್ ಜಾನಕಿ!
ಮಹಾರಾಜ ಕಾಲೇಜು ಮೈದಾನದಲ್ಲಿ ಅಂತಿಮ ದರ್ಶನ ಪಡೆದ ಗಣ್ಯರು: ಇದಕ್ಕೂ ಮುನ್ನ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ನಾದ ಬ್ರಹ್ಮ ಹಂಸಲೇಖ, ಹಿರಿಯ ನಟಿ ಜಯಮಾಲಾ ಸೇರಿದಂತೆ ನೆರೆಯ ಕೇರಳಂ, ತಮಿಳುನಾಡು, ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಂದಲೂ ಅಭಿಮಾನಿಗಳು, ಚಿತ್ರರಂಗದ ಕಲಾವಿದರು, ಸಂಗೀತ ನಿರ್ದೇಶಕರು, ಒಡನಾಡಿಗಳು ಬಂದು ಅಂತಿಮ ದರ್ಶನ ಪಡೆದರು.
ಇದೇ ವೇಳೆ ಮುಂದಿನ ಪೀಳಿಗೆಗೆ ಪ್ರೇರಣೆಯಾಗುವಂತೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಎಸ್. ಜಾನಕಿ ಅಧ್ಯಯನ ಕೇಂದ್ರ ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ಜಯಮಾಲಾ ಆಗ್ರಹಿಸಿದರು.
ಗಾಯಕ ವಿಜಯ್ ಪ್ರಕಾಶ್ ಖಾಸಗಿ ವಾಹಿನಿಯ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿದ್ದ ಮಕ್ಕಳ ತಂಡದೊಂದಿಗೆ ಆಗಮಿಸಿ ಎಸ್. ಜಾನಕಿ ಅವರ ಜನಪ್ರಿಯ ಹಾಡುಗಳಾದ 'ನೋಡು ಬಾ ನೋಡು ಬಾ ನಮ್ಮೂರ...' ಸೇರಿದಂತೆ ಹಲವು ಗೀತೆಗಳನ್ನು ಹಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಜಾನಕಿ ಅವರು ಎಲ್ಲ ಗಾಯಕ-ಗಾಯಕಿಯರಿಗೂ ಆದರ್ಶ ಮತ್ತು ಸ್ಫೂರ್ತಿ ಎಂದು ವಿಜಯ್ ಪ್ರಕಾಶ್ ಹೇಳಿದರು.
17ಕ್ಕೂ ಹೆಚ್ಚು ಭಾಷೆಗಳಲ್ಲಿ ಸುಮಾರು 48 ಸಾವಿರ ಹಾಡುಗಳಿಗೆ ಗಾಯನ
ಕನ್ನಡ, ಹಿಂದಿ ತೆಲುಗು ಸೇರಿದಂತೆ ಸುಮಾರು 17ಕ್ಕೂ ಹೆಚ್ಚು ಭಾಷೆಗಳಲ್ಲಿ ಸುಮಾರು 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದ 88 ವರ್ಷದ ಗಾನ ಕೋಗಿಲೆ ಎಸ್ ಜಾನಕಿ ಅವರು ಶನಿವಾರ ಹೃದಯಾಘಾತದಿಂದ ಮೈಸೂರಿನಲ್ಲಿ ನಿಧನರಾದರು. ಆರು ದಶಕಗಳ ಹಾಡುಗಾರಿಕೆಯ ಸಾಧನೆ ಜಾನಕಿ ಅವರಿಗೆ ಹಲವು ಗೌರವಗಳನ್ನು ತಂದುಕೊಟ್ಟಿದೆ.
ನಾಲ್ಕು ರಾಷ್ಟ್ರ ಪ್ರಶಸ್ತಿಗಳು, ಸುಮಾರು ಮೂವತ್ತು ರಾಜ್ಯ ಪ್ರಶಸ್ತಿಗಳು ಅವರ ಗಾಯನಕ್ಕೆ ದೊರೆತಿವೆ. ಮೈಸೂರು ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು. ರಾಜ್ಯ ಸರ್ಕಾರ 2014ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಿತ್ತು.
ಭಾರತದ ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರಿಗೆ 2013ರಲ್ಲಿ ಭಾರತ ಸರ್ಕಾರವು ಪದ್ಮಭೂಷಣ ಪ್ರಶಸ್ತಿವನ್ನು ಘೋಷಿಸಿತ್ತು. ಆದರೆ, ಈ ಗೌರವ ತಮ್ಮ ಸುದೀರ್ಘ ಐದೂವರೆ ದಶಕಗಳ ವೃತ್ತಿ ಜೀವನಕ್ಕೆ ತಡವಾಗಿ ಬಂದಿದೆ. ದಕ್ಷಿಣ ಭಾರತದ ಕಲಾವಿದರಿಗೆ ಸೂಕ್ತ ಮನ್ನಣೆ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಅವರು ಪ್ರಶಸ್ತಿಯನ್ನು ಸ್ವೀಕರಿಸಲು ತಿರಸ್ಕರಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



