ಮಾರುವೇಷ ಯಾಕೆ ಸ್ವಾಮಿ.. ಇದು ಚಿಲ್ಲರೆ ಕಾಲವಲ್ಲ, ಕ್ಯೂಆರ್ ಕೋಡ್ ಕಾಲ: ಸಚಿವ ಸುರೇಶ್‌ಗೆ ಶಾಸಕ ಸುರೇಶ್ ಕುಮಾರ್ ಪಾಠ
ಮಾಸ್ಕ್ ಧರಿಸಿ ಸಾರಿಗೆ ಸಚಿವ ಬೈರತಿ ಸುರೇಶ್ ಶನಿವಾರ ರಾತ್ರಿ ದಿಢೀರ್ ಸಿಟಿ ರೌಂಡ್ಸ್ ಕೈಗೊಂಡು ಪ್ರಯಾಣಿಕನ ಸೋಗಿನಲ್ಲಿ BMTC ಬಸ್ ಗಳ ವ್ಯವಸ್ಥೆ ಕುರಿತಂತೆ ಪರಿಶೀಲನೆ ನಡೆಸಿದರು. ಈ ವೇಳೆ ಚಿಲ್ಲರೆ ಇಲ್ಲದ ಕಾರಣಕ್ಕೆ ನಿರ್ವಾಹಕ ಬಸ್ ನಿಂದ ಇಳಿಸಿದ ಘಟನೆ ನಡೆಯಿತು.

ಬೆಂಗಳೂರು: ಮಾಸ್ಕ್ ಧರಿಸಿ ಸಾರಿಗೆ ಸಚಿವ ಬೈರತಿ ಸುರೇಶ್ ಶನಿವಾರ ರಾತ್ರಿ ದಿಢೀರ್ ಸಿಟಿ ರೌಂಡ್ಸ್ ಕೈಗೊಂಡು ಪ್ರಯಾಣಿಕನ ಸೋಗಿನಲ್ಲಿ BMTC ಬಸ್ ಗಳ ವ್ಯವಸ್ಥೆ ಕುರಿತಂತೆ ಪರಿಶೀಲನೆ ನಡೆಸಿದರು. ಈ ವೇಳೆ ಚಿಲ್ಲರೆ ಇಲ್ಲದ ಕಾರಣಕ್ಕೆ ನಿರ್ವಾಹಕ ಬಸ್ ನಿಂದ ಇಳಿಸಿದ ಘಟನೆ ಬಗ್ಗೆ ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಇದು ಚಿಲ್ಲರೆ ಕಾಸಿನ ಕಾಲವಲ್ಲ. ಇಂದು ಎಲ್ಲಾ ಕಡೆ QR ಕೋಡ್ ಮೂಲಕ ಹಣ ಪಾವತಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಸಚಿವರ ಸಿಟಿ ರೌಂಡ್ಸ್ ಕುರಿತಂತೆ ಮಾಹಿತಿ ಸಿಕ್ಕ ತಕ್ಷಣ ನಾನು ಸಚಿವ ಬೈರತಿ ಸುರೇಶ್ ಜೊತೆ ಮಾತನಾಡಿಸಲು ಸಾಕಷ್ಟು ಬಾರಿ ಫೋನ್ ಮಾಡಿದೆ. ಆದರೆ ಅವರ ಜೊತೆ ಮಾತನಾಡುವ ಅವಕಾಶ ಸಿಗಲಿಲ್ಲ. ಹಿಂದಿನ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಜೊತೆ ಮಾತನಾಡುವ ಅವಕಾಶ ದೊರಕಿತ್ತು ಎಂದು ತಿಳಿಸಿದ್ದಾರೆ. ಸಚಿವರು ಈ ರೀತಿ ಮುಖಕ್ಕೆ ಮಾಸ್ಕ್ ಧರಿಸಿ ಮಾರುವೇಷದಲ್ಲಿ ಹೋಗಿ ತನ್ನ ಇಲಾಖೆಯ ಕಾರ್ಯವೈಖರಿಯ ಪರಿಶೀಲನೆ ಮಾಡಿರುವುದು ನಿಜಕ್ಕೂ ಸ್ತುತ್ಯಾರ್ಹ.
ಸಚಿವರು 100 ರೂಪಾಯಿ ನೋಟನ್ನು ತನ್ನ ಟಿಕೆಟ್ ಗೆಂದು ಕೊಟ್ಟಾಗ, ಕಂಡಕ್ಟರ್ ಚಿಲ್ಲರೆ ಕೊಡಿ ಎಂದು ಕೇಳಿರುವುದು ಸಹಜವೇ. ಆದರೆ ಇದು ಚಿಲ್ಲರೆ ಕೊಟ್ಟು ಸಹಕರಿಸಿ ಎಂಬ ಕಾಲವಲ್ಲ. ಇಂದು ಎಲ್ಲಾ ಕಡೆ QR ಕೋಡ್ ಮೂಲಕ ಹಣ ಪಾವತಿ ಮಾಡಲು ವ್ಯವಸ್ಥೆ ಇರುವಾಗ ಬಿಎಂಟಿಸಿ ಬಸ್ ಗಳಲ್ಲೂ ಕಂಡಕ್ಟರ್ ಬಳಿ ಇರುವ ಟಿಕೆಟ್ ಕೊಡುವ ಮೆಷಿನ್ ನಲ್ಲಿಯೇ ಈ ವ್ಯವಸ್ಥೆ ಇರುತ್ತದೆ ಎಂಬುದು ನನಗಿರುವ ಮಾಹಿತಿ. ಆಗಿದ್ದ ಮೇಲೆ ಮಂತ್ರಿಗಳಿಗೆ ಈ ರೀತಿಯ ಅನುಭವ ಹೇಗೆ ಆಯಿತು ಎಂದು ಪ್ರಶ್ನಿಸಿದ್ದಾರೆ.
ಸಂಜೆ 7.10ರಿಂದ ರಾತ್ರಿ 9.10ರವರೆಗೆ ಸುಮಾರು ಎರಡು ಗಂಟೆಗಳ ಕಾಲ ನಗರದ ವಿವಿಧ ಭಾಗಗಳಲ್ಲಿ ಸಂಚರಿಸಿದ ಸಚಿವ ಬೈರತಿ ಸುರೇಶ್ ಅವರು, 10ಕ್ಕೂ ಹೆಚ್ಚು ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸಿದರು. ಜಯಮಹಲ್, ಆರ್.ಟಿ.ನಗರ, ಹೆಬ್ಬಾಳ, ನಾಗವಾರ, ಹೆಣ್ಣೂರು ಹಾಗೂ ಗೆದ್ದಲಹಳ್ಳಿ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಬಸ್ ಏರಿ ಸಾಮಾನ್ಯ ಪ್ರಯಾಣಿಕರಂತೆ ಟಿಕೆಟ್ ಖರೀದಿಸಿ ಪ್ರಯಾಣಿಸಿದರು.
ಇನ್ನು ಬಸ್ ನಿಲ್ದಾಣವೊಂದರಲ್ಲಿ ಬಸ್ ನಿಲ್ಲಿಸದ ಇಲಾಖೆಯ ನಿರ್ವಾಹಕ ಮತ್ತು ಬಸ್ ಚಾಲಕನನ್ನು ಅಮಾನತು ಮಾಡಿದ್ದಾರೆ. ಪ್ರಯಾಣಿಕರೊಬ್ಬರು ಕೈ ತೋರಿಸಿದರೂ ಫನ್ ವರ್ಲ್ಡ್ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸದೇ ಮುಂದುವರೆದಿದ್ದರಿಂದ ಕೆಎ 57 ಎಫ್ 3372 ಸಂಖ್ಯೆಯ ಬಿಎಂಟಿಸಿ ಬಸ್‌ನ ಚಾಲಕ ಮುಷ್ತಾಕ್ ಮತ್ತು ನಿರ್ವಾಹಕ ದಯಾನಂದ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



