SIR ಕಂಪ್ಯೂಟರೀಕರಣ: ಚಿಕ್ಕಬಳ್ಳಾಪುರ ಅಪರೂಪದ ಸಾಧನೆ; ರಾಜ್ಯದಲ್ಲೇ ಮೊದಲ ಸ್ಥಾನ!
ಇದು ಶೇ.97ರಷ್ಟು ಪ್ರಗತಿಯಾಗಿದ್ದು, ಉಳಿದಿರುವ 38,391 ಮತದಾರರಿಗೆ ಮುಂದಿನ ಎರಡು ದಿನಗಳಲ್ಲಿ ನಮೂನೆಗಳನ್ನು ವಿತರಿಸುವ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ಚಿಕ್ಕಬಳ್ಳಾಪುರ: ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ರಾಜ್ಯದಲ್ಲೇ ಮುಂಚೂಣಿಯಲ್ಲಿದ್ದು, ಗಣತಿ ನಮೂನೆಗಳ ವಿತರಣೆ ಹಾಗೂ ಮತದಾರರ ಮಾಹಿತಿಯನ್ನು ಸಾಫ್ಟ್‌ವೇರ್‌ನಲ್ಲಿ ದಾಖಲಿಸುವ ಕಂಪ್ಯೂಟರೀಕರಣ ಕಾರ್ಯದಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದೆ ಎಂದು ಜಿಲ್ಲಾಧಿಕಾರಿ ಜಿ. ಪ್ರಭು ತಿಳಿಸಿದ್ದಾರೆ.
'ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್'ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಜಿ. ಪ್ರಭು ಅವರು, ಜಿಲ್ಲೆಯಲ್ಲಿ ಒಟ್ಟು 10,69,504 ಮತದಾರರಿದ್ದು, ಈ ಪೈಕಿ ಈಗಾಗಲೇ 10,31,113 ಮಂದಿಗೆ ಗಣತಿ ನಮೂನೆಗಳನ್ನು ವಿತರಿಸಲಾಗಿದೆ.
ಇದು ಶೇ.97ರಷ್ಟು ಪ್ರಗತಿಯಾಗಿದ್ದು, ಉಳಿದಿರುವ 38,391 ಮತದಾರರಿಗೆ ಮುಂದಿನ ಎರಡು ದಿನಗಳಲ್ಲಿ ನಮೂನೆಗಳನ್ನು ವಿತರಿಸುವ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ನಿಗದಿತ ಕಾಲಮಿತಿಯೊಳಗೆ ಪಾರದರ್ಶಕವಾಗಿ ನಡೆಸಲಾಗುತ್ತಿದೆ. ಜೂನ್ 30ರಿಂದ ಜಿಲ್ಲೆಯ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆ ಮನೆಗೆ ಭೇಟಿ ನೀಡಿ ಗಣತಿ ನಮೂನೆಗಳನ್ನು ವಿತರಿಸುತ್ತಿದ್ದು, ಮತದಾರರಿಂದ ಅಗತ್ಯ ದಾಖಲೆಗಳು, ವೈಯಕ್ತಿಕ ಮಾಹಿತಿ ಹಾಗೂ ಭಾವಚಿತ್ರಗಳನ್ನು ಸಂಗ್ರಹಿಸಿ ಆನ್‌ಲೈನ್ ಸಾಫ್ಟ್‌ವೇರ್‌ನಲ್ಲಿ ದಾಖಲಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಈ ಕಾರ್ಯಕ್ಕೆ ಸಾರ್ವಜನಿಕರು, ಜನಪ್ರತಿನಿಧಿಗಳು ಹಾಗೂ ಮತಗಟ್ಟೆ ಮಟ್ಟದ ಏಜೆಂಟರು (ಬಿಎಲ್‌ಎ) ಉತ್ತಮ ಸಹಕಾರ ನೀಡುತ್ತಿರುವುದು ಶ್ಲಾಘನೀಯ. ಮತಗಟ್ಟೆ ಮಟ್ಟದ ಅಧಿಕಾರಿಗಳು ಅತ್ಯಂತ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿರುವುದರಿಂದ ಜಿಲ್ಲೆ ರಾಜ್ಯದಲ್ಲಿ ಮೊದಲ ಸ್ಥಾನ ಪಡೆಯಲು ಸಾಧ್ಯವಾಗಿದೆ ಎಂದು ಜಿಲ್ಲಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದರು.
ಇಲ್ಲಿಯವರೆಗೆ 3,18,978 ಮತದಾರರ ಮಾಹಿತಿಯನ್ನು ಯಶಸ್ವಿಯಾಗಿ ಸಾಫ್ಟ್‌ವೇರ್‌ನಲ್ಲಿ ದಾಖಲಿಸಲಾಗಿದ್ದು, ಇದು ಒಟ್ಟು ಮತದಾರರ ಶೇ.30ರಷ್ಟಾಗಿದೆ. ಮುಂದಿನ ಹತ್ತು ದಿನಗಳಲ್ಲಿ ಶೇ.100ರಷ್ಟು ಮಾಹಿತಿಯನ್ನು ಸಾಫ್ಟ್‌ವೇರ್‌ನಲ್ಲಿ ದಾಖಲಿಸುವ ಗುರಿ ಹೊಂದಲಾಗಿದ್ದು, ಅದಕ್ಕಾಗಿ ಅಗತ್ಯ ಕಾರ್ಯಯೋಜನೆ ರೂಪಿಸಿ ಚಟುವಟಿಕೆಗಳನ್ನು ಮತ್ತಷ್ಟು ವೇಗಗೊಳಿಸಲಾಗಿದೆ ಎಂದು ಹೇಳಿದರು.
ಇನ್ನೂ ತಮ್ಮ ಮಾಹಿತಿಯನ್ನು ಸಲ್ಲಿಸದ ಮತದಾರರು ತಮ್ಮ ವ್ಯಾಪ್ತಿಯ ಬಿಎಲ್‌ಒಗಳನ್ನು ಸಂಪರ್ಕಿಸಿ ಅಗತ್ಯ ದಾಖಲೆಗಳು ಹಾಗೂ ಮಾಹಿತಿಯನ್ನು ಒದಗಿಸಬೇಕು. ಇದರಿಂದ ಮತದಾರರ ಪಟ್ಟಿಯನ್ನು ನಿಖರವಾಗಿ ಮತ್ತು ದೋಷರಹಿತವಾಗಿ ಸಿದ್ಧಪಡಿಸಲು ಸಾಧ್ಯವಾಗುತ್ತದೆ. ಈ ಸಮಗ್ರ ಪರಿಷ್ಕರಣೆ ಕಾರ್ಯವನ್ನು ಯಶಸ್ವಿಗೊಳಿಸಲು ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಕೈಜೋಡಿಸುವಂತೆ ಜಿಲ್ಲಾಧಿಕಾರಿ ಜಿ. ಪ್ರಭು ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



