ಬೆಂಗಳೂರಲ್ಲಿ ಆಪರೇಷನ್ ಫುಟ್‌ಪಾತ್: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!
ಸಿಎಂ ಡಿಕೆ ಶಿವಕುಮಾರ್ ಅವರು ಇಂದು ದಿಢೀರ್ ಸಿಟಿ ರೌಂಡ್ ನಡೆಸಿ, ನಗರದ ವಿವಿಧ ಸ್ಥಳಗಳಲ್ಲಿ ನಡೆಯುತ್ತಿರುವ ಪಾದಚಾರಿ ಮಾರ್ಗ ಅತಿಕ್ರಮಣ ತೆರವು ಅಭಿಯಾನವನ್ನು ಪರಿಶೀಲಿಸಿದರು.

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಆಪರೇಷನ್ ಫುಟ್‌ಪಾತ್ ಮುಂದುವರೆದಿದ್ದು, ಜುಲೈ 1 ರಿಂದ ಇದುವರೆಗೆ ಬೆಂಗಳೂರಿನಾದ್ಯಂತ 435 ಕಿ.ಮೀ. ಪಾದಚಾರಿ ಮಾರ್ಗದಲ್ಲಿ ಒಟ್ಟು 9,878 ಅತಿಕ್ರಮಣಗಳನ್ನು ತೆರವುಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಶುಕ್ರವಾರ ತಿಳಿಸಿದ್ದಾರೆ.
ಕೇಂದ್ರ, ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ - ಐದು ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಫುಟ್‌ಪಾತ್ ಅತಿಕ್ರಮಣ-ತೆರವು ಅಭಿಯಾನ ಮುಂದುವರಿಯಲಿದೆ ಎಂದು ಸಿಎಂ ಹೇಳಿದ್ದಾರೆ.
ಸಿಎಂ ಶಿವಕುಮಾರ್ ಅವರು ಇಂದು ದಿಢೀರ್ ಸಿಟಿ ರೌಂಡ್ ನಡೆಸಿ, ನಗರದ ವಿವಿಧ ಸ್ಥಳಗಳಲ್ಲಿ ನಡೆಯುತ್ತಿರುವ ಪಾದಚಾರಿ ಮಾರ್ಗ ಅತಿಕ್ರಮಣ ತೆರವು ಅಭಿಯಾನವನ್ನು ಪರಿಶೀಲಿಸಿದರು. ಅವರಿಗೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಮತ್ತು ಇತರ ಅಧಿಕಾರಿಗಳು ಸಾಥ್ ನೀಡಿದರು.
ನಂತರ, ಜಯನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಬೀದಿ ವ್ಯಾಪಾರಿಗಳಿಗೆ ಪರ್ಯಾಯ ಸ್ಥಳಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು. ನಾಗರಿಕರ ಅನುಕೂಲತೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಈ ಕಾರ್ಯಾಚರಣೆ ಹೊಂದಿದೆ ಎಂದು ಅವರು ಹೇಳಿದರು.
"ಜುಲೈ 1 ರಿಂದ ಇಲ್ಲಿಯವರೆಗೆ, 435 ಕಿ.ಮೀ. ಪಾದಚಾರಿ ಮಾರ್ಗಗಳಿಂದ ಒಟ್ಟು 9,878 ಅತಿಕ್ರಮಣಗಳನ್ನು ತೆರವುಗೊಳಿಸಲಾಗಿದೆ. ಈ ಅತಿಕ್ರಮಣ ತೆರವು ಅಭಿಯಾನ ಮುಂದುವರಿಯಲಿದೆ" ಎಂದು ಸಿಎಂ ತಿಳಿಸಿದರು.
ಒಟ್ಟು 1,340 ಅಂಗಡಿಗಳು ಮತ್ತು ಸುಮಾರು 1,800 ತಳ್ಳುಗಾಡಿಗಳನ್ನು ತೆರವುಗೊಳಿಸಲು ಅವರಿಗೇ ಅವಕಾಶ ನೀಡಲಾಗಿತ್ತು. ಅಂಗಡಿಗಳ ಮುಂದೆ ಅಳವಡಿಸಲಾದ ಸುಮಾರು 2,267 ಸೀಟ್ ಗಳನ್ನು ತೆಗೆದುಹಾಕಲಾಗಿದೆ. ಇದರ ಜೊತೆಗೆ, 2,300 ಮೆಟ್ಟಿಲುಗಳು ಮತ್ತು ಇಳಿಜಾರುಗಳು, 2,662 ಕಂಬಗಳು ಮತ್ತು ಸೈನ್‌ಬೋರ್ಡ್‌ಗಳು ಹಾಗೂ 2,247 ಶೆಡ್‌ಗಳನ್ನು ತೆರವುಗೊಳಿಸಲಾಗಿದೆ. ಅಲ್ಲದೆ ಪಾದಚಾರಿ ಮಾರ್ಗಗಳನ್ನು ದುರಸ್ತಿ ಮಾಡುವ ಕೆಲಸವೂ ನಡೆಯುತ್ತಿದೆ ಎಂದು ಸಿಎಂ ಮಾಹಿತಿ ನೀಡಿದರು.
ಪಾದಚಾರಿಗಳ ಸುರಕ್ಷತೆಗಾಗಿ ಬೃಹತ್ ಬೆಂಗಳೂರು ಪ್ರಾಧಿಕಾರವು 'ಸುರಕ್ಷಿತ ಪಾದಚಾರಿ ಮಾರ್ಗ' (Safe Footpath) ಅಭಿಯಾನಕ್ಕೆ ಚಾಲನೆ ನೀಡಿದೆ. ಬೃಹತ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ಅವರ ನೇತೃತ್ವದಲ್ಲಿ ಈ ಯೋಜನೆಯು ತೀವ್ರಗತಿಯಲ್ಲಿ ಅನುಷ್ಠಾನಗೊಳ್ಳುತ್ತಿದೆ.
ಈಗಾಗಲೇ ನಗರದಾದ್ಯಂತ 430 ಕಿಲೋಮೀಟರ್‌ಗಿಂತಲೂ ಅಧಿಕ ಉದ್ದದ ಪಾದಚಾರಿ ಮಾರ್ಗಗಳನ್ನು ಒತ್ತುವರಿಯಿಂದ ಮುಕ್ತಗೊಳಿಸಲಾಗಿದ್ದು, ಪಾದಚಾರಿಗಳ ಸುಲಭ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಯಾವುದೇ ಮುಲಾಜಿಲ್ಲದೆ ಈ ಕಾರ್ಯಾಚರಣೆ ಮುಂದುವರಿಯಲಿದೆ. ಇದೇ ವೇಳೆ, ಬೀದಿ ಬದಿ ವ್ಯಾಪಾರಿಗಳ ಹಿತರಕ್ಷಣೆಗೂ ಸರ್ಕಾರ ಬದ್ಧವಾಗಿದೆ. ನೋಂದಾಯಿತ ವ್ಯಾಪಾರಿಗಳಿಗೆ ಪ್ರತ್ಯೇಕ ವಲಯಗಳನ್ನು ಗುರುತಿಸಿ, ತಳ್ಳುವ ಬಂಡಿಗಳನ್ನು ವಿತರಿಸಲಾಗುವುದು. ಇದರಿಂದ ಅವರ ಜೀವನೋಪಾಯಕ್ಕೂ ಧಕ್ಕೆಯಾಗುವುದಿಲ್ಲ, ಇತ್ತ ಪಾದಚಾರಿಗಳ ಹಕ್ಕನ್ನೂ ರಕ್ಷಿಸಿದಂತಾಗುತ್ತದೆ ಎಂದು ಸಿಎಂ ಹೇಳಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ಬೆಂಗಳೂರಿನಲ್ಲಿ ರಸ್ತೆ ದಾಟುವಾಗ ಹಾಗೂ ಪಾದಚಾರಿ ಮಾರ್ಗಗಳಿಲ್ಲದೆ 900ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸುರಕ್ಷಿತ ನಡಿಗೆಗಾಗಿ ಸಾರ್ವಜನಿಕರಿಂದ ನಿರಂತರ ಒತ್ತಾಯ ಕೇಳಿಬಂದ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ಸರ್ಕಾರ ಈ ಕಠಿಣ ಕ್ರಮಕ್ಕೆ ಮುಂದಾಗಿದೆ. ಮುಂದಿನ ದಿನಗಳಲ್ಲಿ ಈ ಅಭಿಯಾನ ಮತ್ತಷ್ಟು ಚುರುಕುಗೊಳ್ಳಲಿದ್ದು, ಫುಟ್‌ಪಾತ್‌ಗಳ ಮೇಲೆ ಅಡ್ಡಾದಿಡ್ಡಿಯಾಗಿ ಬಿಟ್ಟುಹೋಗಿರುವ ಹಳೇ ವಾಹನಗಳನ್ನು ಸಹ ತೆರವುಗೊಳಿಸಲಾಗುವುದು.
ಇಲ್ಲಿಯವರೆಗೆ ಅಂಗಡಿ ಮುಂಗಟ್ಟುಗಳು ರಸ್ತೆ ಆಕ್ರಮಿಸಿಕೊಂಡಿದ್ದ ಸಾವಿರಾರು ಪ್ರಕರಣಗಳು ಸೇರಿದಂತೆ ಒಟ್ಟು 9,878 ವಿವಿಧ ರೀತಿಯ ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ. ಕೇವಲ ಒತ್ತುವರಿ ತೆರವು ಅಷ್ಟೇ ಅಲ್ಲದೆ, ಹಾಳಾಗಿರುವ ಪಾದಚಾರಿ ಮಾರ್ಗಗಳ ದುರಸ್ತಿ ಕಾರ್ಯವೂ ಭರದಿಂದ ಸಾಗುತ್ತಿದ್ದು, ಸಾರ್ವಜನಿಕರ ಬಳಕೆಗೆ ಯೋಗ್ಯವಾಗುವಂತೆ ಸಿದ್ಧಪಡಿಸಲಾಗುತ್ತಿದೆ ಎಂದರು.
ಎಚ್.ಎ.ಎಲ್ ಹಳೇ ವಿಮಾನ ನಿಲ್ದಾಣ ರಸ್ತೆ, ಎಚ್.ಎಸ್.ಆರ್ ಲೇಔಟ್, ಜಯನಗರ 4ನೇ ಬ್ಲಾಕ್ ಹಾಗೂ ಅಶೋಕ ಪಿಲ್ಲರ್ ಪ್ರದೇಶಗಳಲ್ಲಿ ನಡೆಯುತ್ತಿರುವ ಪಾದಚಾರಿ ಮಾರ್ಗ ಒತ್ತುವರಿ ತೆರವು ಮತ್ತು ದುರಸ್ತಿ ಕಾರ್ಯವನ್ನು ಸಿಎಂ ಪರಿಶೀಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



