ರಾಮ ಮಂದಿರ ದೇಣಿಗೆ ಏನಾಯ್ತು ಎಂದು ಮಂತ್ರಾಕ್ಷತೆ ಕೊಟ್ಟವರನ್ನು ಕೇಳಬೇಕು; ರಾಹುಲ್ ಗಾಂಧಿಯಂತೆ ಯಾರಾದರೂ ಪಾದಯಾತ್ರೆ ಮಾಡಿದ್ದಾರಾ?
"ಬಸವಣ್ಣನವರು ಕಾಯಕವೇ ಕೈಲಾಸ ಎಂದು ಹೇಳಿದ್ದಾರೆ. ಕಾಯಕದ ಮುಖಾಂತರ ಕೈಲಾಸ ನೋಡಬೇಕು ಎಂದು ನನ್ನ ಪ್ರವಾಸವನ್ನ ಈ ನೆಲದಿಂದ ಪ್ರಾರಂಭ ಮಾಡಿದ್ದೇನೆ. ಪರಮೇಶ್ವರ್ ಅವರು, ಸಚಿವರು ಜೊತೆಯಾಗಿದ್ದಾರೆ" ಎಂದು ಹೇಳಿದರು.

ಬೀದರ್: ನಾನು ನಾಡಿನ ದೊರೆಯಲ್ಲ. ಯಾರೇ ಆಗಲಿ ನನ್ನನ್ನ ನಾಡಿನ ದೊರೆ ಎಂದು ಕರೆಯಬಾರದು. ನಾನು ನಿಮ್ಮೆಲ್ಲರ ಸೇವಕ ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಮನವಿ ಮಾಡಿದರು.
ಬಸವಕಲ್ಯಾಣದ ಬಸವೇಶ್ವರ ದೇವಸ್ಥಾನದ ಬಳಿ ನಡೆದ ಸನ್ಮಾನ ಸಮಾರಂಭದಲ್ಲಿ ಹಾಗೂ ನೂತನ ಅನುಭವ ಮಂಟಪ ಕಾಮಗಾರಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಶಿವಕುಮಾರ್ ಅವರು ಮಾತನಾಡಿದರು.
"ಬಸವಣ್ಣನವರು ಕಾಯಕವೇ ಕೈಲಾಸ ಎಂದು ಹೇಳಿದ್ದಾರೆ. ಕಾಯಕದ ಮುಖಾಂತರ ಕೈಲಾಸ ನೋಡಬೇಕು ಎಂದು ನನ್ನ ಪ್ರವಾಸವನ್ನ ಈ ನೆಲದಿಂದ ಪ್ರಾರಂಭ ಮಾಡಿದ್ದೇನೆ. ಪರಮೇಶ್ವರ್ ಅವರು, ಸಚಿವರು ಜೊತೆಯಾಗಿದ್ದಾರೆ" ಎಂದು ಹೇಳಿದರು.
"ನೂರಾರು ವರ್ಷಗಳ ಹಿಂದೆ ಸ್ಥಾಪನೆಯಾದ ಅನುಭವ ಮಂಟಪ ಎನ್ನುವ ಸಂಸತ್ತಿಗೆ ಹೊಸ ರೂಪವನ್ನು ನೀಡಲು ನಾವು ಪ್ರಯತ್ನ ಮಾಡುತ್ತಿದ್ದೇವೆ. ಇತಿಹಾಸ ಮರೆತವನು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ ಎಂದು ಬಾಬಾಸಾಹೇಬ್ ಅಂಬೇಡ್ಕರ್ ಹೇಳಿದ್ದಾರೆ. ಇತಿಹಾಸವನ್ನ ನಾವು ಯಾರೂ ಮರೆಯಲು ಸಾಧ್ಯವಿಲ್ಲ" ಎಂದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಕಾರಣಕ್ಕೆ ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಯೋಜನೆ ಹಾಗೂ ಇತರ ಜನಪರ ಕಾರ್ಯಕ್ರಮಗಳನ್ನು ಜಾರಿ ಮಾಡಲಾಗಿದೆ. 2028ಕ್ಕೆ ಮತ್ತೆ ನಿಮ್ಮ ಸರ್ಕಾರ ಬಂದೇ ಬರುತ್ತದೆ. ಕಾರ್ಯಕರ್ತರು ಆತ್ಮವಿಶ್ವಾಸದಿಂದ ಇರಿ. ಬೀದರ್ ಜಿಲ್ಲೆಯಲ್ಲಿ ಆರು ಕ್ಷೇತ್ರಗಳಲ್ಲಿ ಗೆಲ್ಲಲು ಶ್ರಮವಹಿಸಿ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಕಾರ್ಯಕರ್ತರಿಗೆ ಕರೆ ನೀಡಿದರು.
“ಇದು ನನ್ನ ಬದುಕಿನಲ್ಲಿ ಶಾಶ್ವತವಾಗಿ ನೆನಪಿನಲ್ಲಿ ಉಳಿಯುವಂತಹ ದಿನ. ನಾನು ಆರು ವರ್ಷ ಮೂರು ತಿಂಗಳ ಕಾಲ ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿದ್ದೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ನನಗೆ ಈ ಅವಕಾಶ ಮಾಡಿಕೊಟ್ಟರು. ನಾನು ಆಗಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದೆ, ದಿನೇಶ್ ಗುಂಡೂರಾವ್ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಉಪಚುನಾವಣೆಗಳಲ್ಲಿ ಸೋತಿದ್ದೆವು. ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು, ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಸಮಯದಲ್ಲಿ ಕೋವಿಡ್ ಕೂಡ ಆರಂಭವಾಗಿತ್ತು.
ಒಬ್ಬರಿಂದ ಒಬ್ಬರು ದೂರ ಇರುತ್ತಿದ್ದರು. ಹೆಣಗಳು ರಾಶಿ ರಾಶಿ ಬೀಳುತ್ತಿದ್ದವು. ಇಂತಹ ಭೀಕರ ಸಂದರ್ಭದಲ್ಲಿ ನನಗೆ ಪಕ್ಷದ ಜವಾಬ್ದಾರಿ ವಹಿಸಲಾಯಿತು. ಆಗ ನಾನು ಜೂಮ್ ಮೂಲಕ ಪ್ರತಿಜ್ಞಾ ಕಾರ್ಯಕ್ರಮ ಮಾಡಿದೆ. 11 ಸಾವಿರ ಪಂಚಾಯ್ತಿ ಹಾಗೂ ವಾರ್ಡ್ ಗಳಲ್ಲಿ ನಿಮ್ಮೆಲ್ಲರ ಸಾಕ್ಷಿಯಾಗಿ ನಾನು ಅಧಿಕಾರ ಸ್ವೀಕಾರ ಮಾಡಿದೆ” ಎಂದು ನೆನಪುಗಳನ್ನು ಮೆಲುಕು ಹಾಕಿದರು.
ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನರಿಗೆ ಆಸರೆಯಾಗಿದ್ದೇವೆ. ಪ್ರಧಾನಮಂತ್ರಿಗಳು ದೇಶದ ಜನರಿಗೆ ಚಿನ್ನ ಖರೀದಿ ಮಾಡಬೇಡಿ, ಅಡುಗೆಯಲ್ಲಿ ಕಡಿಮೆ ಎಣ್ಣೆ ಬಳಸಿ, ಪೆಟ್ರೋಲ್ ಹೆಚ್ಚು ಬಳಸಬೇಡಿ, ಮಾಂಗಲ್ಯ ಖರೀದಿ ಮಾಡಬೇಡಿ ಎಂದು ಜನರಿಗೆ ಸಲಹೆ ನೀಡಿದರು. ಇದು ಧರ್ಮವೇ? ರಾಮನ ದೇವಸ್ಥಾನಕ್ಕಾಗಿ ಜನ ಇಟ್ಟಿಗೆಯಿಂದ, ಚಿನ್ನದವರೆಗೂ, ಹಣದಿಂದ ಬೆಳ್ಳಿಯವರೆಗೂ ಎಲ್ಲವನ್ನು ದಾನ ಕೊಟ್ಟರು. ಬಿಜೆಪಿಯವರು ನಮ್ಮ ಅಕ್ಕಿಗೆ ಅರಿಶಿನ ಬೆರೆಸಿ ರಾಮಮಂದಿರ ಅಕ್ಷತೆ ಎಂದು ಹಂಚಿ ಪ್ರಚಾರ ಪಡೆದರು” ಎಂದು ಕಿಡಿ ಕಾರಿದರು.
“ಮಂತ್ರಾಕ್ಷತೆ ಕೊಟ್ಟವರಿಗೆ ಕೇಳಬೇಕು, ರಾಮ ಮಂದಿರ ದೇಣಿಗೆ ಏನಾಯ್ತು? ಎಂದು ಕೇಳಬೇಕು. ಧರ್ಮ ಹಾಗೂ ರಾಮನ ಹೆಸರಿನಲ್ಲಿ ಲೂಟಿ ಮಾಡಿದವರಿಗೆ ಮತ್ತೆ ಜನರ ಬಳಿ ಮತ ಕೇಳುವ ನೈತಿಕತೆ ಕಳೆದುಕೊಂಡಿದ್ದಾರೆ. ನಮ್ಮದು ಇತಿಹಾಸ ಹೊಂದಿರುವ ಪಕ್ಷ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗದ ಜನ ಅಧಿಕಾರಕ್ಕೆ ಬಂದಂತೆ.
ನಾವು ಎಲ್ಲಾ ವರ್ಗದ ಜನರನ್ನು ಒಟ್ಟಾಗಿ ಸೇರಿಸುವ ಕೆಲಸ ಮಾಡುತ್ತೇವೆ. ರಾಹುಲ್ ಗಾಂಧಿ ಅವರು ನಮ್ಮಲ್ಲಿರುವ ಭಿನ್ನಾಭಿಪ್ರಾಯ ತೆಗೆದುಹಾಕಿ ಎಲ್ಲರನ್ನು ಒಂದುಗೂಡಿಸಲು ಭಾರತ ಜೋಡೋ ಯಾತ್ರೆ ಮಾಡಿದರು. ಬಿಜೆಪಿಯವರು ಸಮಾಜ ಕತ್ತರಿಸುವ ಕತ್ತರಿ, ಕಾಂಗ್ರೆಸ್ ಸಮಾಜವನ್ನು ಒಂದುಗೂಡಿಸುವ ಸೂಜಿಯಂತೆ. ಅದಕ್ಕಾಗಿ ರಾಹುಲ್ ಗಾಂಧಿ ಅವರು ಪಾದಯಾತ್ರೆ ಮಾಡಿದರು.
ಇಂತಹ ಪಾದಯಾತ್ರೆ ದೇಶದ ಬೇರೆ ಯಾವುದಾದರೂ ನಾಯಕರು ಮಾಡಿದ್ದಾರಾ? ಸೋನಿಯಾ ಗಾಂಧಿ ಅವರಂತೆ ದೇಶದ ಪ್ರಧಾನಮಂತ್ರಿ ಸ್ಥಾನವನ್ನು ಬೇರೆ ಯಾರಾದರೂ ತ್ಯಾಗ ಮಾಡಿದ್ದಾರಾ? ಇಂತಹ ಪಕ್ಷದಲ್ಲಿ ಸೇವೆ ಮಾಡುತ್ತಿರುವ ನಾವು ಭಾಗ್ಯವಂತರು” ಎಂದು ತಿಳಿಸಿದರು.
ಒಂದೇ ದಿನ ಬರ ಎಂದು ಘೋಷಿಸಲು ಸಾಧ್ಯವಿಲ್ಲ
ಉತ್ತರ ಕರ್ನಾಟಕದಲ್ಲಿ ಬರದ ಛಾಯೆ ಆವರಿಸಿದೆ. ಬರಗಾಲ ಎಂದು ಘೋಷಣೆ ಮಾಡುವಿರಾ ಎಂದು ಕೇಳಿದಾಗ, "ಇದರ ಬಗ್ಗೆ ನಾಳೆ (ಮಂಗಳವಾರ) ಸಭೆಯಿದೆ. ಒಂದೇ ದಿನಕ್ಕೆ ಬರ ಎಂದು ಘೋಷಣೆ ಮಾಡೋಕೆ ಆಗಲ್ಲ. ಕಣ್ಣಲ್ಲಿ ನೋಡಬೇಕು, ಕಿವಿಯಲ್ಲಿ ಕೇಳಬೇಕು, ಜನರ ಅಭಿಪ್ರಾಯ ಪಡೀಬೇಕು, ಸಮೀಕ್ಷೆ ಮಾಡಬೇಕು, ಮಾಹಿತಿ ತಿಳಿಬೇಕು" ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




