ಯತೀಂದ್ರಗೆ 'ಮುಡಾ' ಸಂಕಷ್ಟ: ಕೂಡಲೇ ಖಾತೆ ಬದಲಾಯಿಸುವಂತೆ ಸಿಎಂ ಡಿಕೆಶಿಗೆ ಪತ್ರ!
ನಗರಾಭಿವೃದ್ಧಿ ಖಾತೆ ಹೊರತುಪಡಿಸಿ ಬದಲಿ ಖಾತೆ ನೀಡುವಂತೆ ಪತ್ರದಲ್ಲಿ ಆಗ್ರಹಿಸಲಾಗಿದೆ. ನೈಜ ಹೋರಾಟಗಾರರ ವೇದಿಕೆಯಿಂದ ಸಿಎಂ ಡಿಕೆಶಿವಕುಮಾರ್ ಅವರಿಗೆ ಈ ಪತ್ರ ಬರೆಯಲಾಗಿದೆ.

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರಗೆ ನೀಡಲಾದ ನಗರಾಭಿವೃದ್ಧಿ ಖಾತೆಯನ್ನು ಹಿಂದಕ್ಕೆ ಪಡೆಯುವಂತೆ 'ನೈಜ ಹೋರಾಟಗಾರರ ವೇದಿಕೆ'ಯ ಕಾರ್ಯಕರ್ತ ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬರು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಮೂರು ಪುಟಗಳ ಪತ್ರದಲ್ಲಿ, ಕಾರ್ಯಕರ್ತ ಎಚ್.ಎಂ. ವೆಂಕಟೇಶ್ ಅವರು ಮೈಸೂರು ಲೋಕಾಯುಕ್ತ ಪೊಲೀಸ್, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಕರ್ನಾಟಕ ಹೈಕೋರ್ಟ್ ಮತ್ತು ಜಾರಿ ನಿರ್ದೇಶನಾಲಯದಲ್ಲಿ ರಿಟ್ ಅರ್ಜಿಯನ್ನು ಉಲ್ಲೇಖಿಸಿದ್ದಾರೆ.
ನಗರಾಭಿವೃದ್ಧಿ ಖಾತೆ ಹೊರತುಪಡಿಸಿ ಬದಲಿ ಖಾತೆ ನೀಡುವಂತೆ ಪತ್ರದಲ್ಲಿ ಆಗ್ರಹಿಸಲಾಗಿದೆ. ನೈಜ ಹೋರಾಟಗಾರರ ವೇದಿಕೆಯಿಂದ ಸಿಎಂ ಡಿಕೆಶಿವಕುಮಾರ್ ಅವರಿಗೆ ಈ ಪತ್ರ ಬರೆಯಲಾಗಿದೆ. ಆ ಮೂಲಕ ಮುಡಾ ಪ್ರಕರಣ ಮತ್ತೆ ಚರ್ಚೆಗೆ ಬಂದಂತಾಗಿದೆ.
ಈ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವಾಗ ನಗರಾಭಿವೃದ್ಧಿ ಇಲಾಖೆಯ ಗುರುತರ ಜವಾಬ್ದಾರಿಯನ್ನು ಹೊಂದುವುದು ಸರಿಯಲ್ಲ. ಆರೋಪಿತರ ಮಗನಾಗಿರುವ ಡಾ.ಯತೀಂದ್ರರವರನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ನಗರಾಭಿವೃದ್ಧಿ ಸಚಿವರ ಹೊಣೆಗಾರಿಕೆಯಿಂದ ಬಿಡುಗಡೆಗೊಳಿಸಿ. ಬದಲಿ ಖಾತೆಯಲ್ಲಿ ಅವರನ್ನು ಸಚಿವರಾಗಿ ಕಾರ್ಯನಿರ್ವಹಿಸಲಿ ಎಂದು ಆಗ್ರಹಿಸಲಾಗಿದೆ.
ಒಂದು ವೇಳೆ ಯತೀಂದ್ರರವರು ನಗರಾಭಿವೃದ್ಧಿ ಇಲಾಖೆಯ ಹೊಣೆ ಮುಂದುವರಿಸಿದ್ದಲ್ಲಿ ಸ್ವಹಿತಾಸಕ್ತಿಯ ಸಂಘರ್ಷವಾಗುತ್ತದೆ. ತಂದೆ ತಾಯಿಯ ರಕ್ಷಣೆಗಾಗಿ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆಗಳಿವೆ. ಈ ಬಗ್ಗೆ ಅನುಮಾನದ ಹುತ್ತ ಸಾರ್ವಜನಿಕರಲ್ಲಿ ಮೂಡುತ್ತದೆ. ಇದು ಸಹಜ ಕೂಡ. ಡಾ. ಯತೀಂದ್ರರವರು ನಗರಾಭಿವೃದ್ಧಿ ಖಾತೆಯಲ್ಲಿ ಮುಂದುವರಿಸಿದ್ದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುತ್ತದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.
ಈ ವಿಷಯಕ್ಕೆ ಪ್ರತಿಕ್ರಿಯಿಸಿದ ಯತೀಂದ್ರ ಸೋಮವಾರ ಸುದ್ದಿಗಾರರಿಗೆ ಖಾತೆ ಬದಲಾವಣೆಯ ಅಗತ್ಯವಿಲ್ಲ ಎಂದು ಹೇಳಿದರು. "ಮುಡಾ ಹಗರಣದ ಪ್ರಕರಣವನ್ನು ನನ್ನ ತಂದೆ, ತಾಯಿ ಮತ್ತು ಕುಟುಂಬದ ವಿರುದ್ಧ ದಾಖಲಿಸಲಾಗಿದೆ.
ಲೋಕಾಯುಕ್ತರು ಈಗಾಗಲೇ ತನಿಖೆ ನಡೆಸಿ ವರದಿಯನ್ನು ಸಲ್ಲಿಸಿದ್ದಾರೆ, ಅದನ್ನು ಪ್ರತಿನಿಧಿಗಳ ನ್ಯಾಯಾಲಯ ಅಂಗೀಕರಿಸಿದೆ. ತನಿಖೆ ಪೂರ್ಣಗೊಂಡಿರುವುದರಿಂದ, ನಾವು ಹಸ್ತಕ್ಷೇಪ ಮಾಡುವ ಅಥವಾ ಪ್ರಭಾವ ಬೀರುವ ಯಾವುದೇ ಸನ್ನಿವೇಶವಿಲ್ಲ, ಹಿತಾಸಕ್ತಿ ಸಂಘರ್ಷವಿಲ್ಲ" ಎಂದು ಅವರು ಹೇಳಿದರು.
"ನಾನು ಏನನ್ನೂ ನಿರೀಕ್ಷಿಸಿರಲಿಲ್ಲ. ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ. ಖಾತೆಗಳನ್ನು ಈಗಾಗಲೇ ನಿಯೋಜಿಸಲಾಗಿದೆ ಮತ್ತು ನಾನು ಯಾವುದೇ ಹೆಚ್ಚುವರಿ ಖಾತೆಗಳನ್ನು ಬಯಸಿಲ್ಲ" ಎಂದು ಅವರು ಸ್ಪಷ್ಟಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



