'ಮೇಕೆದಾಟು ಪಾದಯಾತ್ರೆಯಲ್ಲಿ ನಾನು ಸುಸ್ತಾಗಿ ವಾಲಿಕೊಂಡು ನಡೆದ ವಿಡಿಯೊ ಹಾಕಿ ಕುಡುಕ ಎಂದು ಬರೆದು ಮಜಾ ತಗೊಂಡ್ರು, ಫೇಕ್ ನ್ಯೂಸ್ ನಶೆ ಹತ್ತಿಸಿಕೊಳ್ಳಬೇಡಿ: CM ಡಿ ಕೆ ಶಿವಕುಮಾರ್
ಇಂದು ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಿಎಂ ಡಿ ಕೆ ಶಿವಕುಮಾರ್ ಮಾತನಾಡಿದರು.

ಬೆಂಗಳೂರು: ಸ್ವಾತಂತ್ರ್ಯ ಪೂರ್ವದಿಂದಲೂ ಪತ್ರಿಕೋದ್ಯಮವು ದೇಶದ ಪ್ರಗತಿಗೆ ಮತ್ತು ಪ್ರಜಾಪ್ರಭುತ್ವದ ಅಡಿಪಾಯಕ್ಕೆ ನಿರ್ಣಾಯಕ ಪಾತ್ರ ವಹಿಸಿದೆ. ಮಾಹಿತಿ ತಲುಪಿಸುವ, ಪ್ರಶ್ನಿಸುವ ಹಾಗೂ ಸಮಾಜವನ್ನು ಜಾಗೃತಗೊಳಿಸುವ ಮಹತ್ವದ ಕಾರ್ಯವನ್ನು ಪ್ರತಿ ಪತ್ರಕರ್ತನೂ ಜವಾಬ್ದಾರಿಯಿಂದ ನಿರ್ವಹಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಈ ದಿನ, 1843ರಲ್ಲಿ ಕನ್ನಡದ ಮೊಟ್ಟಮೊದಲ ಪತ್ರಿಕೆ 'ಮಂಗಳೂರು ಸಮಾಚಾರ' ಪ್ರಕಟಗೊಂಡ ಐತಿಹಾಸಿಕ ದಿನದ ನೆನಪಿನಲ್ಲಿ, ಸತ್ಯದ ಪರ ಧ್ವನಿಯಾಗಿ, ಅನ್ಯಾಯದ ವಿರುದ್ಧ ಹೋರಾಡುವ ನನ್ನೆಲ್ಲಾ ಸಮಸ್ತ ಮಾಧ್ಯಮ ಮಿತ್ರರಿಗೆ ಪತ್ರಿಕಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು ಎಂದು ಹೇಳಿದ್ದಾರೆ.
ಇಂದು ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಪತ್ರಿಕಾರಂಗ ಸಮಾದಲ್ಲಿರುವ ನಾಲ್ಕು ಪ್ರಮುಖ ಆಧಾರ ಸ್ತಂಭಗಳಾಗಿ ಕೆಲಸ ಮಾಡುತ್ತವೆ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ತಪ್ಪು ಮಾಡಿದಾಗ ಅದನ್ನು ತೋರಿಸಿ ತಿದ್ದಲು ಪತ್ರಿಕಾರಂಗ ಕೆಲಸ ಮಾಡುತ್ತದೆ.
ಪತ್ರಕರ್ತರು ಏನೇ ಬರೆದರೂ, ಹೇಳಿದರೂ ಕೂಡ ಆತ್ಮಸಾಕ್ಷಿಯನ್ನು ಗಮನದಲ್ಲಿಟ್ಟುಕೊಂಡು ಬರೆಯಿರಿ ಎಂದು ಮನವಿ ಮಾಡಿಕೊಳ್ಳುತ್ತೇನೆ. ವಿರೋಧ ಪಕ್ಷ ಮಾಡುವ ಕೆಲಸ ಮಾಧ್ಯಮ ಮಾಡುತ್ತದೆ ಎಂದು ಹಲವರು ಹೇಳುತ್ತಾರೆ. ಆದರೆ ನನ್ನ ವೈಯಕ್ತಿಕ ಅಭಿಪ್ರಾಯ ಪತ್ರಕರ್ತರು ಸಮಾಜದ ಬದಲಾವಣೆಗೆ ಶ್ರಮಿಸುವವರು ಎಂದು. ಆಡಳಿತ ಪಕ್ಷವನ್ನು ತಿದ್ದುವ ಕೆಲಸ ಮಾಡುತ್ತಾರೆ,
ಫೇಕ್ ನಶೆ ಹತ್ತಿಸಿಕೊಳ್ಳಬೇಡಿ
ಎಷ್ಟೋ ಸಂದರ್ಭಗಳಲ್ಲಿ ಪತ್ರಕರ್ತರು ನನ್ನ ಬಗ್ಗೆ ಟೀಕೆ ಮಾಡಿದ್ದಾರೆ, ವಿರುದ್ಧವಾಗಿ ಬರೆದಿದ್ದಾರೆ. ನನ್ನ ವೈರಿಗಳು ಎಂದು ನಾನು ಭಾವಿಸುವುದಿಲ್ಲ, ಕಳೆದ ಆರೇಳು ತಿಂಗಳಿನಿಂದ ನಾನು ಆರೋಗ್ಯ ತಪಾಸಣೆ ಮಾಡಿಸಿರಲಿಲ್ಲ, ಹೀಗಾಗಿ ರೆಗ್ಯುಲರ್ ಚೆಕಪ್ ಗೆಂದು ಇಂದು ಬೆಳಗ್ಗೆ ಆಸ್ಪತ್ರೆಗೆ ಹೋಗಿದ್ದೆ, ಆದರೆ ನಾನು ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದೇನೆ ಎಂದು ಟಿವಿಯಲ್ಲಿ ಹಾಕಿದ್ದಾರೆ ಎಂದು ನನ್ನ ಖಾಸಗಿ ಕಾರ್ಯದರ್ಶಿಗಳು ಹೇಳುತ್ತಿದ್ದರು.
ಹೀಗೆ ಫೇಕ್ ನ್ಯೂಸ್ ನ ನಶೆ ಇತ್ತೀಚೆಗೆ ಹೆಚ್ಚಾಗಿದೆ. ನಿನ್ನೆಯಷ್ಟೇ ನಾವು ನಶಾ ಮುಕ್ತ ಭಾರತ ಕಾರ್ಯಕ್ರಮವನ್ನು ಆಯೋಜಿಸಿದ್ದೆವು. ಫೇಕ್ ನ್ಯೂಸ್ ನ ನಶೆ ಹತ್ತಿಸಿಕೊಳ್ಳಬೇಡಿ, ಯಾರ್ಯಾರೋ ಏನೋ ಹೇಳಿದರು ಎಂದ ತಕ್ಷಣ ಮಾಧ್ಯಮಗಳಲ್ಲಿ ಪ್ರಸಾರ ಮಾಡಬೇಡಿ, ಸತ್ಯ ವಿಚಾರಿಸಿ ಪರಾಮರ್ಶೆ ಮಾಡಿ ಬರೆಯಿರಿ ಎಂದು ಕೇಳಿಕೊಂಡರು.
ಮೇಕೆದಾಟು ಪಾದಯಾತ್ರೆ ಪ್ರಸ್ತಾಪಿಸಿದ ಡಿ ಕೆ ಶಿವಕುಮಾರ್
ಕಾಂಗ್ರೆಸ್ ಪಕ್ಷದ ವತಿಯಿಂದ ಕೊರೋನಾ ಸಮಯದಲ್ಲಿ ಮೇಕೆದಾಟು ಯೋಜನೆ ಜಾರಿಗೆ ಪಾದಯಾತ್ರೆ ಮಾಡಿದ್ದೆವು. ಅದು ನನ್ನ ವೈಯಕ್ತಿಕ ಹಿತಾಸಕ್ತಿಗಾಗಿ ಅಲ್ಲ, ರಾಜ್ಯದ ಜನತೆ ಒಳಿತಿಗೆ ಮಾಡಿದ್ದು, ಆಗ ನಮ್ಮ ವಿರೋಧ ಪಕ್ಷದವರು ಬೇಕಾದಷ್ಟು ಟೀಕೆ ಮಾಡಿದರು. ಮೇಕೆದಾಟು ಪಾದಯಾತ್ರೆ ಮಾಡುವಾಗ ಸಂಗಮ ರಸ್ತೆಯಲ್ಲಿ ತಿರುವು ಇದೆ. ನಾವು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಮೂರ್ನಾಲ್ಕು ದಿನಗಳಿಂದ ಹಗಲು ರಾತ್ರಿ ಕೆಲಸ ಮಾಡಿ ಬಳಲಿ ಹೋಗಿದ್ದೆವು.
ನಮ್ಮ ಕಾರ್ಯಕರ್ತರು ತಳ್ಳುತ್ತಿದ್ದರು, ಒಂದೆರಡು ಕಡೆ ನಾನು ವಾಲಿದ್ದೆ. ಟಿವಿಯವರು ಅದನ್ನು ವಿಡಿಯೊ ಮಾಡಿಕೊಂಡು ವರ್ಷಗಟ್ಟಲೆಯಿಂದ ಕುಡೀತಿದ್ದಾನೆ, ನೋಡಿ ತೂರಾಡುತ್ತಿದ್ದಾನೆ ಎಂದು ಬರೆದರು. ಈಗಲೂ ಆ ವಿಡಿಯೊ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಬೇರೆಯವರ ಮಾನಹಾನಿ ಮಾಡಿ ಮಜಾ ತೆಗೆದುಕೊಳ್ಳಲು ನಮ್ಮನ್ನು ಬಳಸಿಕೊಳ್ಳುತ್ತಿದ್ದಾರೆ, ಇದರಿಂದ ಮಾಧ್ಯಮಗಳ ಮೇಲಿರುವ ಗೌರವ ಕಡಿಮೆಯಾಗುತ್ತದೆ, ಸತ್ಯಾಂಶ ತಿಳಿಯದೆ ಸುದ್ದಿ ಮಾಡಬೇಡಿ ಎಂದು ಮನವಿ ಮಾಡಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



