ಜನವರಿ 28ರಿಂದಲೂ ವಿಚಾರಣೆ ನಡೆಸುತ್ತಿದ್ದರು, ರಾಯ್ ಸಾವಿಗೆ IT ಕಿರುಕುಳವೇ ಕಾರಣ: ಸಹೋದರ ಸಿ.ಜೆ ಬಾಬು ಆರೋಪ
ಗುರುವಾರ ಸಿ.ಜೆ.ರಾಯ್ ನನಗೆ ಕರೆ ಮಾಡಿ ಯಾವಾಗ ಬರುವೆ ಎಂದು ಕೇಳಿದರು. ಅದಕ್ಕೆ ಶುಕ್ರವಾರ ಸಂಜೆ ಬರುವೆ ಎಂದಿದ್ದೆ. ಐ.ಟಿ.ಅಧಿಕಾರಿಗಳ ಒತ್ತಡ ಇದೆ ಎಂದು ರಾಯ್ ಹೇಳಿಕೊಂಡಿದ್ದ.

ಬೆಂಗಳೂರು: ನನ್ನ ತಮ್ಮ ಸಿ.ಜೆ.ರಾಯ್ ಆತ್ಮಹತ್ಯೆಗೆ ಐ.ಟಿ.ಅಧಿಕಾರಿಗಳ ಕಿರುಕುಳ ಹಾಗೂ ಒತ್ತಡವೇ ಕಾರಣ ಎಂದು ಸಹೋದರ ಸಿ.ಜೆ.ಬಾಬು ಅವರು ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕೇರಳದ ಐ.ಟಿ.ಅಧಿಕಾರಿಗಳು ಜ.28ರಿಂದಲೂ ನನ್ನ ತಮ್ಮ ಸಿ.ಜೆ.ರಾಯ್ ಅವರನ್ನು ವಿಚಾರಣೆ ಮಾಡುತ್ತಿದ್ದರು. ಅದರಂತೆ ಶುಕ್ರವಾರವೂ ಕಚೇರಿಗೆ ಬಂದು ವಿಚಾರಣೆ ಮಾಡಿದ್ದಾರೆ. ಐಟಿ ಇಲಾಖೆಯ ಅಡಿಷನಲ್ ಕಮಿಷನರ್ ಕೃಷ್ಣ ಪ್ರಸಾದ್ ಸಹ ಅಧಿಕಾರಿಗಳ ತಂಡದಲ್ಲಿದ್ದರು ಎಂದು ಹೇಳಿದರು.
ಈ ಐಟಿ ಅಧಿಕಾರಿಗಳು ಜ.27ರಂದು ನನ್ನ ಮನೆಗೆ ಬಂದು ನನ್ನನ್ನೂ ವಿಚಾರಣೆ ಮಾಡಿದ್ದರು. ಅವರ ಪ್ರಶ್ನೆಗಳಿಗೆ ಉತ್ತರಿಸಿದ್ದೆ. ಗುರುವಾರ ಸಿ.ಜೆ.ರಾಯ್ ನನಗೆ ಕರೆ ಮಾಡಿ ಯಾವಾಗ ಬರುವೆ ಎಂದು ಕೇಳಿದರು. ಅದಕ್ಕೆ ಶುಕ್ರವಾರ ಸಂಜೆ ಬರುವೆ ಎಂದಿದ್ದೆ. ಐ.ಟಿ.ಅಧಿಕಾರಿಗಳ ಒತ್ತಡ ಇದೆ ಎಂದು ರಾಯ್ ಹೇಳಿಕೊಂಡಿದ್ದ. ಶುಕ್ರವಾರ ಬೆಳಗ್ಗೆ ಸಹ ನನಗೆ ಕರೆ ಮಾಡಿ ಇಂದೂ ಐ.ಟಿ.ಅಧಿಕಾರಿಗಳು ಕಚೇರಿಗೆ ಬರುತ್ತಿರುವ ವಿಚಾರ ಹೇಳಿದರು ಎಂದು ತಿಳಿಸಿದ್ದ.
ಡಿಸೆಂಬರ್ ತಿಂಗಳಲ್ಲೂ ಕೇರಳದ ಐ.ಟಿ.ಅಧಿಕಾರಿಗಳು ಆದಾಯ ತೆರಿಗೆ ವಿಚಾರವಾಗಿ ಸಿ.ಜೆ.ರಾಯ್ ಕಚೇರಿಗೆ ಬಂದು ವಿಚಾರಣೆ ಮಾಡಿದ್ದರು. ನನ್ನ ತಮ್ಮ ರಾಯ್‌ಗೆ ಸಾಲ ಇರಲಿಲ್ಲ. ವೈರಿಗಳು ಇರಲಿಲ್ಲ. ಬೆದರಿಕೆಗಳು ಇರಲಿಲ್ಲ. ಕೌಟುಂಬಿಕ ಸಮಸ್ಯೆ ಗಳೂ ಇರಲಿಲ್ಲ. ಯಾವ ಕಾರಣಕ್ಕೆ ಹೀಗೆ ಮಾಡಿಕೊಂಡರು ಎಂದು ಗೊತ್ತಿಲ್ಲ.
ಐ.ಟಿ.ಅಧಿಕಾರಿಗಳ ಒತ್ತಡ ಇದ್ದದ್ದು ಸತ್ಯ. ಅವರ ಟಾಗೆರ್ಟ್ ಏನೆಂಬುದು ಗೊತ್ತಿಲ್ಲ. ಐಟಿ ಇಲಾಖೆ ಅಡಿಷನಲ್ ಕಮಿಷನರ್ ಕೃಷ್ಣಪ್ರಸಾದ್ ಅವರನ್ನು ಈ ಬಗ್ಗೆ ಪ್ರಶ್ನೆ ಮಾಡಬೇಕು ಎಂದು ತಿಳಿಸಿದರು.
ಸಿ.ಜೆ.ರಾಯ್ ಅವರು ಕರ್ನಾಟಕ, ಕೇರಳ, ದುಬೈ ಸೇರಿ ವಿವಿಧೆಡೆ ರಿಯಲ್ ಎಸ್ಟೇಟ್ ಪ್ರಾಜೆಕ್ಟ್‌ಗಳನ್ನು ನಡೆಸುತ್ತಿದ್ದರು. ಕೇರಳವೊಂದರಲ್ಲೇ 60 ಪ್ರಾಜೆಕ್ಟ್ ಮಾಡಿದ್ದಾರೆ. ಬಂಗಾರಪೇಟೆಯಲ್ಲಿ ಗಾಲ್ಫ್ ಕೋರ್ಟ್ ನಿರ್ಮಾಣ ಸೇರಿ ವಿವಿಧೆಡೆ ಜಂಟಿ ಮಾಲೀಕತ್ವದಲ್ಲಿ ಹಲವು ಪ್ರಾಜೆಕ್ಟ್ ಗಳನ್ನು ಮಾಡುತ್ತಿದ್ದರು. ಎರಡು ವರ್ಷಗಳಲ್ಲಿ ನನಗೆ 700-800 ಕೋಟಿ ರು. ಆದಾಯ ಬರಲಿದೆ ಎಂದು ನನ್ನೊಂದಿಗೆ ಹೇಳಿಕೊಂಡಿದ್ದರು.
ಆತ್ಮಹತ್ಯೆಗೆ ಕಾರಣ ಗೊತ್ತಿಲ್ಲ. ಅವರ ಬಳಿ ಕಳೆದ 20 ವರ್ಷಗಳಿಂದ ಪಿಸ್ತೂಲ್ ಇತ್ತು. 2016ರಲ್ಲಿ ಬೆಂಗಳೂರು ಐ.ಟಿ.ಅಧಿಕಾರಿಗಳು ಕಡೆಯದಾಗಿ ಸಿ.ಜೆ.ರಾಯ್ ಅವರನ್ನು ವಿಚಾರಣೆ ಮಾಡಿದ್ದರು. ಆಗ ಯಾವುದೇ ಸಮಸ್ಯೆಯಾಗಲಿಲ್ಲ. ಇದೀಗ ಕೇರಳ ಐ.ಟಿ.ಅಧಿಕಾರಿಗಳು ಬಂದಾಗ ಬಳಿಕ ಸಮಸ್ಯೆಯಾಗಿದೆ ಎಂದು ಆರೋಪಿಸಿದರು.
ನಾವು ಮೂರು ಜನ ಅಣ್ಣ ತಮ್ಮಂದಿರು, ಸಿ.ಜೆ.ರಾಯ್ ಕೊನೆಯವರು. ಸಿ.ಜೆ.ರಾಯ್‌ಗೆ ಪತ್ನಿ ಹಾಗೂ ಇಬ್ಬರು ಮಕ್ಕಳು ಇದ್ದಾರೆ. ಕಳೆದ 15 ವರ್ಷಗಳಿಂದ ಕುಟುಂಬ ದುಬೈ ನಲ್ಲಿ ನೆಲೆಸಿದೆ. ರಾಯ್ ಆತ್ಮಹತ್ಯೆಗೆ ಬಗ್ಗೆ ಪೊಲೀಸರು ತನಿಖೆ ನಡೆಸಿ, ಸತ್ಯಾಂಶ ಹೊರ ತೆಗೆಯಬೇಕು ಎಂದು ಆಗ್ರಹಿಸಿದರು.
ನನ್ನ ಸಹೋದರನಿಗೆ ಸದಾ ಜಸೇವೆ ಮಾಡುವ ತುಡಿತವಿತ್ತು. 301 ವಿದ್ಯಾರ್ಥಿಗಳಿಗೆ ಗರಿಷ್ಠ 50 ಸಾವಿರ ರು.ನಂತೆ ಸ್ಕಾಲರ್ ಶಿಪ್ ನೀಡುವುದಾಗಿ ಘೋಷಿಸಿದ್ದರು. ಜುಲೈ ತಿಂಗಳಿಂದ ಅರ್ಜಿ ಹಾಕುವಂತೆಯೂ ಹೇಳಿದ್ದರು. ರಾಯ್ ಎಲ್ಲ ಪಕ್ಷದ ರಾಜಕಾರಣಿಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



