ರಾಜ್ಯ

ಅರ್ಕಾವತಿ ಬಡಾವಣೆ ಭೂಸಂತ್ರಸ್ತರಿಗೆ ಪರಿಹಾರ ಒದಗಿಸಲು ಶೀಘ್ರದಲ್ಲೇ ಸಭೆ; ಜನಪ್ರತಿನಿಧಿಗಳಿಗೆ ಫಾಸ್ಟ್ಯಾಗ್ ಸೌಲಭ್ಯ ಕಲ್ಪಿಸಲು ಸಹಕಾರ!

ಅರ್ಕಾವತಿ ಬಡಾವಣೆ ಎಸ್.ಎಂ ಕೃಷ್ಣ ಅವರ ಕಾಲದಲ್ಲೇ ಆರಂಭವಾಯಿತು. ಈ ಮಧ್ಯೆ ನಿವೇಶನಕ್ಕೆ ಅನೇಕರು ಅರ್ಜಿ ಹಾಕಿಕೊಂಡು, ಅವರಿಗೆ ನಿವೇಶನ ಮಂಜೂರಾಯಿತು. ಭೂಸಂತ್ರಸ್ತರಿಗೆ ಅದೇ ಜಾಗದಲ್ಲಿ ಪರಿಹಾರವಾಗಿ ಜಾಗ ನೀಡಲು ಸಾಧ್ಯವಾಗಲಿಲ್ಲ.

ಅರ್ಕಾವತಿ ಬಡಾವಣೆ ಭೂಸಂತ್ರಸ್ತರಿಗೆ ಪರಿಹಾರ ಒದಗಿಸಲು ಶೀಘ್ರದಲ್ಲೇ ಸಭೆ; ಜನಪ್ರತಿನಿಧಿಗಳಿಗೆ ಫಾಸ್ಟ್ಯಾಗ್ ಸೌಲಭ್ಯ ಕಲ್ಪಿಸಲು ಸಹಕಾರ!
ಡಿ.ಕೆ. ಶಿವಕುಮಾರ್
Published On :

ಬೆಂಗಳೂರು: ಅರ್ಕಾವತಿ ಬಡಾವಣೆ ಭೂಸಂತ್ರಸ್ತರಿಗೆ ಪರಿಹಾರ ಒದಗಿಸಲು ಶೀಘ್ರದಲ್ಲೇ ಸಭೆ ಕರೆದು ಚರ್ಚೆ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ವಿಧಾನಸಭೆಯ ಗಮನ ಸೆಳೆವ ಸೂಚನೆ ವೇಳೆ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಂಗಳವಾರ ಉತ್ತರ ನೀಡಿದರು.

ಬಿಜೆಪಿ ಶಾಸಕ ಮುನಿರಾಜು ಅವರು ಅರ್ಕಾವತಿ ಬಡಾವಣೆ ನಿರ್ಮಾಣವಾಗಿ 20 ವರ್ಷವಾಗಿದ್ದರೂ ನಿವೇಶನ ಸ್ವಾಧೀನ, ರೈತರಿಗೆ ಪರಿಹಾರ ನೀಡದಿರುವ ಬಗ್ಗೆ ಕೇಳಿದಾಗ, “ಅರ್ಕಾವತಿ ಬಡಾವಣೆ ಎಸ್.ಎಂ ಕೃಷ್ಣ ಅವರ ಕಾಲದಲ್ಲೇ ಆರಂಭವಾಯಿತು. ಈ ಮಧ್ಯೆ ನಿವೇಶನಕ್ಕೆ ಅನೇಕರು ಅರ್ಜಿ ಹಾಕಿಕೊಂಡು, ಅವರಿಗೆ ನಿವೇಶನ ಮಂಜೂರಾಯಿತು. ಭೂಸಂತ್ರಸ್ತರಿಗೆ ಅದೇ ಜಾಗದಲ್ಲಿ ಪರಿಹಾರವಾಗಿ ಜಾಗ ನೀಡಲು ಸಾಧ್ಯವಾಗಲಿಲ್ಲ. ಹೀಗಾಗಿ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ, ಮುಂದೆ ಯಾವ ರೀತಿ ಮಾಡಬೇಕು ಎಂದು ನಿರ್ಧರಿಸಲು ಕೇಶವ ನಾರಾಯಣ ಸಮಿತಿ ನೇಮಿಸಿದೆ.

ಈ ಸಮಿತಿ ಪರಿಶೀಲನೆ ಮಾಡುತ್ತಿದೆ. ಭೂಸಂತ್ರಸ್ತ ರೈತರಿಗೆ ಪರಿಹಾರವಾಗಿ ಭೂಮಿ ನೀಡಬೇಕು ಎಂಬುದಕ್ಕೆ ನಾನು ಬದ್ಧವಾಗಿದ್ದೇನೆ. ಈ ವಿಚಾರವಾಗಿ ಸದ್ಯದಲ್ಲೇ ಸಭೆ ಕರೆಯಲಿದ್ದು, ಸಮಿತಿಯವರನ್ನು ಕರೆದು ಆದಷ್ಟು ಬೇಗ ತೀರ್ಮಾನ ಮಾಡುವಂತೆ ಮನವಿ ಮಾಡಲಾಗುವುದು. ಈ ವಿಚಾರವಾಗಿ ಮುಂದಿನ ದಿನಗಳಲ್ಲಿ ಸ್ಪಷ್ಟ ಉತ್ತರ ನೀಡಲಾಗುವುದು” ಎಂದು ಭರವಸೆ ನೀಡಿದರು.

“ಕೇವಲ ಈ ಪ್ರಕರಣ ಮಾತ್ರವಲ್ಲ, ಶಿವರಾಮ ಕಾರಂತ ಬಡಾವಣೆ ವಿಚಾರದಲ್ಲೂ ನ್ಯಾಯಾಲಯ ಹೊಸ ಅರ್ಜಿ ತೆಗೆದುಕೊಳ್ಳಲು ಅವಕಾಶ ನೀಡಿಲ್ಲ. ಹೀಗಾಗಿ ಇಲ್ಲಿ ಮೊದಲು ಭೂಸಂತ್ರಸ್ತರಿಗೆ ಭೂಮಿ ನೀಡಲಾಗುತ್ತಿದ್ದು, ಅರ್ಕಾವತಿ ಬಡಾವಣೆ ಭೂಸಂತ್ರಸ್ತರ ಸಮಸ್ಯೆಯನ್ನು ಆದಷ್ಟು ಬೇಗ ನಿವಾರಿಸಲಾಗುವುದು” ಎಂದು ತಿಳಿಸಿದರು.

ಕಾಂಗ್ರೆಸ್ ಶಾಸಕರಾದ ಸುಬ್ಬಾರೆಡ್ಡಿ ಅವರು ರಾಜ್ಯದ ಟೋಲ್ ಗಳಲ್ಲಿ ಜನರಿಗೆ ಕಿರಿಕಿರಿ ಮಾಡುತ್ತಿರುವ ಬಗ್ಗೆ ಪ್ರಶ್ನೆ ಕೇಳಿದರು, “ಮೈಸೂರು ಬೆಂಗಳೂರು ರಸ್ತೆಯ ಟೋಲ್ ಬಳಿ ಈ ರೀತಿ ಕಿರಿಕಿರಿ ಮಾಡಿದವರಿಗೆ ದಂಡ ವಿಧಿಸಲಾಗಿದೆ. ಹುನಗುಂದದಲ್ಲೂ ನೋಟೀಸ್ ನೀಡಿ 10 ಲಕ್ಷ ದಂಡ ವಿಧಿಸಲಾಗಿದೆ.

ಇದಕ್ಕೆ ನಾವು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಇನ್ನು ಸ್ಪೀಕರ್ ಕಡೆಯಿಂದ ಶಾಸಕರು, ಎಂಎಲ್ ಸಿಗಳು ಹಾಗೂ ಸಂಸದರಿಗೆ ಪಾಸ್ ಹಾಗೂ ಫಾಸ್ಟ್ಯಾಗ್ ಅನ್ನು ಒದಗಿಸುವ ವ್ಯವಸ್ಥೆ ಆಗಬೇಕು. ಸರ್ಕಾರದಿಂದ ಏನು ಸಹಕಾರ ನೀಡಬೇಕೋ ನಾವು ನೀಡುತ್ತೇವೆ. ನಾವು ಶಾಸಕರನ್ನು ರಕ್ಷಣೆ ಮಾಡಬೇಕು” ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.