ಚಿರತೆ ದಾಳಿಯಿಂದ ಯುವಕ ಸಾವು: ಮಲೆ ಮಹದೇಶ್ವರ ಬೆಟ್ಟದಲ್ಲಿ 'ಡ್ರೋನ್ ಕ್ಯಾಮರಾ' ಕಣ್ಗಾವಲಿಗೆ ಈಶ್ವರ್ ಖಂಡ್ರೆ ಸೂಚನೆ!
ವನ್ಯಜೀವಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಪಾದಯಾತ್ರೆ ಅಪಾಯಕಾರಿಯಾಗಿದೆ. ಹೀಗಾಗಿ ಭಕ್ತರ ಭಾವನೆಗೆ ಧಕ್ಕೆಯಾಗದಂತೆ ಅವರ ಮನವೊಲಿಸಲು ಸಚಿವ ಈಶ್ವರ್ ಖಂಡ್ರೆ ಸೂಚಿಸಿದರು.

ಬೆಂಗಳೂರು: ಮಲೆ ಮಹದೇಶ್ವರ ಬೆಟ್ಟದಲ್ಲಿ ಇತ್ತೀಚಿಗೆ ಚಿರತೆ ದಾಳಿಯಿಂದ ಯುವಕನೋರ್ವ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಭಕ್ತರು ಕಾಲುದಾರಿಯಲ್ಲಿ ಮೆಟ್ಟಿಲೇರಿ ಬರುವ ಮಾರ್ಗದಲ್ಲಿ ಡ್ರೋನ್ ಕ್ಯಾಮರಾ ಅಳವಡಿಸಿ ಸತತ ನಿಗಾ ಇಡುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದಾರೆ.
ಕಾಲುದಾರಿ, ಮೆಟ್ಟಿಲು ಇರುವ ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿ, ಹೋಂಗಾರ್ಡ್ಸ್ ಮತ್ತು ಸ್ಥಳೀಯ ಸಿಬ್ಬಂದಿಯ ತಂಡ ರಚಿಸಿ ಭಕ್ತರಿಗೆ ನೆರವಾಗುವ ಅಗತ್ಯವಿದ್ದು, ಇದಕ್ಕೆ ತಗಲುವ ವೆಚ್ಚವನ್ನು ಭರಿಸುವಂತೆ ಮಲೆ ಮಹದೇಶ್ವರಸ್ವಾಮಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಮತ್ತು ಜಿಲ್ಲಾಡಳಿತಕ್ಕೆ ಪತ್ರ ಬರೆಯುವಂತೆಯೂ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.
ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಂದ ಭಕ್ತರು ಕಾವೇರಿ ನದಿ ದಾಟಿ, ಹನೂರು ತಾಲೂಕಿನ ಬಸವನಕಣಕ್ಕೆ ಬಂದು ಅಲ್ಲಿಂದ ಕಾಡಿನಲ್ಲಿಯೇ ನಡೆದುಕೊಂಡು ಶಾಗ್ಯ, ಡಿಎಂ ಸಮುದ್ರ, ಎಲ್ಲೆಮಾಳ, ಮಲ್ಲಯ್ಯನಪುರ, ಕೌದಳ್ಳಿ, ವಡಕೆಹಳ್ಳ, ಕೋಣನಕೆರೆ, ತಾಳುಬೆಟ್ಟ ಮಾರ್ಗವಾಗಿ ಬೆಟ್ಟಕ್ಕೆ ಬರುತ್ತಾರೆ ಎನ್ನಲಾಗಿದೆ.
ವನ್ಯಜೀವಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಪಾದಯಾತ್ರೆ ಅಪಾಯಕಾರಿಯಾಗಿದೆ. ಹೀಗಾಗಿ ಭಕ್ತರ ಭಾವನೆಗೆ ಧಕ್ಕೆಯಾಗದಂತೆ ಅವರ ಮನವೊಲಿಸಲು ಸಚಿವರು ಸೂಚಿಸಿದರು.
ರಾತ್ರಿಯ ವೇಳೆ ಕಾಡಿನ ಅಂಚಿನಲ್ಲಿ, ಕಾಡಿನೊಳಗಿರುವ ವಸತಿ ಪ್ರದೇಶದಲ್ಲಿ ಮಲಗುವುದೂ ಅಪಾಯಕಾರಿಯಾಗಿದೆ. ಕಳೆದ ಬುಧವಾರ ಮಂಡ್ಯ ಜಿಲ್ಲೆಯ ಚೀರನಹಳ್ಳಿ ಗ್ರಾಮದ ಪ್ರವೀಣ್ ಎಂಬ ಯುವಕ ಚಿರತೆ ದಾಳಿಯಿಂದ ಮೃತಪಟ್ಟಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಹೀಗಾಗಿ ಬಸ್, ಕಾರುಗಳಲ್ಲಿ ತೆರಳಿ ಮಾದಪ್ಪನ ದರ್ಶನ ಪಡೆಯುವಂತೆ ಭಕ್ತರ ಮನವೊಲಿಸಲು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಮತ್ತು ಅರಣ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿ ಒಳಗೊಂಡ ತಂಡ ರಚಿಸಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಮುಖ್ಯ ಕಾರ್ಯದರ್ಶಿಯವರಿಗೆ ಟಿಪ್ಪಣಿ ಕಳಿಸಿರುವುದಾಗಿ ಈಶ್ವರ ಖಂಡ್ರೆ ತಿಳಿಸಿದರು.
ಮಲೆ ಮಹದೇಶ್ವರ ದೇವಸ್ಥಾನಕ್ಕೆ ತೆರಳುತ್ತಿದ್ದ ವ್ಯಕ್ತಿ ಮೇಲೆ ಚಿರತೆ ದಾಳಿ; ಭಕ್ತ ಸಾವು; ಪಾದಯಾತ್ರೆ ಸ್ಥಗಿತ!
ಈ ಮಧ್ಯೆ ರಥ ಸಪ್ತಮಿಯ ನಂತರ ಬಿಸಿಲು ಹೆಚ್ಚಾಗಿ ಕಾಡ್ಗಿಚ್ಚಿನ ಅಪಾಯವೂ ಹೆಚ್ಚುವ ಕಾರಣ ಎಲ್ಲ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಅರಣ್ಯಾಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲ ಅರಣ್ಯ ಮತ್ತು ವನ್ಯಜೀವಿ ವಿಭಾಗದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕಾಡಿನ ಬೆಂಕಿಗೆ ಅರಣ್ಯ ಸಂಪತ್ತು ನಾಶವಾಗದ ರೀತಿಯಲ್ಲಿ ಕಟ್ಟೆಚ್ಚರ ವಹಿಸಬೇಕು, ಡ್ರೋನ್ ಸೌಲಭ್ಯ ಇರುವ ಕಡೆ ಕ್ಯಾಮರಾ ಮೂಲಕ ನಿಗಾ ಇಡಬೇಕು, ಗಸ್ತು ಹೆಚ್ಚಿಸಿ, ಸೂಕ್ಷ್ಮ ಪ್ರದೇಶಗಳಲ್ಲಿ ಸಿಬ್ಬಂದಿ ಎಚ್ಚರದಿಂದ ಇರಬೇಕು ಎಂದು ತಿಳಿಸಿದರು.
ಬೇಸಿಗೆಯಲ್ಲಿ ವನ್ಯಜೀವಿಗಳಿಗೆ ಕಾಡಿನಲ್ಲಿ ಮೇವು ಮತ್ತು ಕುಡಿಯುವ ನೀರಿನ ಕೊರತೆ ಆಗದಂತೆಯೂ ಎಚ್ಚರ ವಹಿಸಲು, ಜಲಗುಂಡಿಗಳಿಗೆ ಸೌರ ಪಂಪ್ ಗಳ ಮೂಲಕ ಕೊಳವೆ ಬಾವಿಯಿಂದ ನೀರು ಹರಿಸಲೂ ಸೂಚಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


