ಬಳ್ಳಾರಿ ಫೈರಿಂಗ್: 'ಆಘಾತವಾಗಿದೆ ನಿಜ.. ಆತ್ಮಹತ್ಯೆಗೆ ಯತ್ನಿಸಿಲ್ಲ'; ಎಸ್ಪಿ ಪವನ್ ನೆಜ್ಜೂರ್ ತಂದೆ ಫೇಸ್ಬುಕ್ ಪೋಸ್ಟ್ ವೈರಲ್!
ಬಳ್ಳಾರಿ ಗಲಾಟೆ ನಿಭಾಯಿಸುವಲ್ಲಿ ವಿಫಲವಾಗಿದ್ದಾರೆ ಅಂತಾ ಬಳ್ಳಾರಿಗೆ 24 ಗಂಟೆಗಳ ಹಿಂದಷ್ಟೇ ನೇಮಕವಾಗಿದ್ದ ಎಸ್ಪಿ ಪವನ್ ನೆಜ್ಜೂರ್ ಅವರನ್ನ ಸಸ್ಪೆಂಡ್ ಮಾಡಲಾಗಿತ್ತು. ಆ ಬೆನ್ನಲ್ಲೇ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿತ್ತು.

ತುಮಕೂರು: ಬಳ್ಳಾರಿಯ ಬ್ಯಾನರ್ ಗಲಾಟೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಎಸ್ ಪಿ ಪವನ್ ನೆಜ್ಜೂರ್ ಪ್ರಕರಣಕ್ಕೆ ಮಹತ್ವದ ಟ್ವಿಸ್ಟ್ ದೊರೆತಿದ್ದು, ಆತ್ಮಹತ್ಯೆ ಪ್ರಯತ್ನದ ಕುರಿತು ಅವರ ತಂದೆ ಪ್ರತಿಕ್ರಿಯೆ ನೀಡಿದ್ದಾರೆ.
ಬಳ್ಳಾರಿ ಗಲಾಟೆ ನಿಭಾಯಿಸುವಲ್ಲಿ ವಿಫಲವಾಗಿದ್ದಾರೆ ಅಂತಾ ಬಳ್ಳಾರಿಗೆ 24 ಗಂಟೆಗಳ ಹಿಂದಷ್ಟೇ ನೇಮಕವಾಗಿದ್ದ ಎಸ್ಪಿ ಪವನ್ ನೆಜ್ಜೂರ್ (SP Pavan Nejjuru) ಅವರನ್ನ ಸಸ್ಪೆಂಡ್ ಮಾಡಲಾಗಿತ್ತು. ಆ ಬೆನ್ನಲ್ಲೇ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿತ್ತು.
ಸದ್ಯ ಈ ಬಗ್ಗೆ ಖುದ್ಧು ಎಸ್ಪಿ ಪವನ್ ನೆಜ್ಜೂರ್ ಅವರ ತಂದೆ ಸ್ಪಷ್ಟನೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ನನ್ನ ಪುತ್ರ ಆತ್ಮಹತ್ಯೆಯ ಪ್ರಯತ್ನ ಮಾಡಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪವನ್ ನೆಜ್ಜೂರ್ ಅವರ ತಂದೆ ಉದಯ್ ಶಂಕರ್ ನೆಜ್ಜೂರ್ ಅವರು, 'ನನ್ನ ಮಗ 2016ನೇ ಸಾಲಿನ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ. ಅವರ ತಂದೆಯಾಗಿ ಕೆಲ ವಿಷಯಗಳನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ.
ಐಪಿಎಸ್ ಅಧಿಕಾರಿಯಾಗಿರುವ ನನ್ನ ಪುತ್ರ ಪವನ್ ನೇಜ್ಜೂರು ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಶಿಸ್ತು, ಕಾರ್ಯಕ್ಷಮತೆ ಹಾಗೂ ಕಾನೂನು ಪಾಲನೆಗೆ ಬದ್ಧನಾಗಿ ಕೆಲಸ ಮಾಡುತ್ತಿದ್ದಾನೆ ಎಂಬ ಹೆಮ್ಮೆ ನಮಗಿದೆ. ಆದರೆ ಬಳ್ಳಾರಿಯಲ್ಲಿ ನಡೆದ ಗಲಭೆಯ ಘಟನೆ ನಂತರ ನನ್ನ ಪುತ್ರನ ಬಗ್ಗೆ ಸುಳ್ಳು ವದಂತಿಗಳನ್ನು ಹರಡಿಸುತ್ತಿರುವುದು ಬೇಸರ ಮೂಡಿಸಿದೆ' ಎಂದು ಹೇಳಿದ್ದಾರೆ.
ಅಂತೆಯೇ, 'ಬಳ್ಳಾರಿ ಜಿಲ್ಲೆಯಲ್ಲಿ ನಡೆದ ಗಲಭೆ ಪ್ರಕರಣದ ಸಂದರ್ಭದಲ್ಲಿ ನನ್ನ ಪುತ್ರ ಪವನ್ ನೆಜ್ಜೂರು ತಮ್ಮ ಜವಾಬ್ದಾರಿಯನ್ನು ಮರೆತಿಲ್ಲ ಎಂಬುವುದನ್ನು ಸ್ಪಷ್ಪಡಿಸುತ್ತದೆ. ಜನವರಿ 1ರಂದು ಅಧಿಕಾರ ಸ್ವೀಕರಿಸಿ, ಸಂಪ್ರದಾಯದಂತೆ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ, ಸುಮಾರು ಒಂದು ದಶಕ ಕಾಲ ಸೇವೆ ಸಲ್ಲಿಸಿದ್ದ ಲೋಕಾಯುಕ್ತ ಪೋಲೀಸರಿಂದ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸ್ವೀಕರಿಸಿ, ನಂತರ ನಡೆದ ಈ ಅಹಿತಕರ ಘಟನೆಯ ಸ್ಥಳಕ್ಕೆ ತಕ್ಷಣವೇ ಧಾವಿಸಿ ಪರಿಸ್ಥಿತಿ ನಿಭಾಯಿಸಿದ್ದು, ಅಲ್ಲಿರುವ ಎಲ್ಲರಿಗೂ ಗೊತ್ತು'.
ಆಘಾತವಾಗಿದೆ ನಿಜ.. ಆತ್ಮಹತ್ಯೆಗೆ ಯತ್ನಿಸಿಲ್ಲ..
ಶಿಸ್ತಿನ ಸಿಪಾಯಿ, ದಕ್ಷ ಅಧಿಕಾರಿ ಆಗಿರುವ ನನ್ನ ಮಗ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಗಿ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ನಡೆದ ಗಲಭೆಯ ಘಟನೆ ಅನಿರೀಕ್ಷಿತ. ಆದಾಗ್ಯೂ ಕಾನೂನು ಸುವ್ಯವಸ್ಥೆಯ ಪಾಲನೆಗೆ ಸಂಪೂರ್ಣವಾಗಿ ಶ್ರಮಿಸಿ ಬೆಳಗಿನ ಜಾವವೂ ಮೃತರ ಅಂತ್ಯಕ್ರಿಯೆ ಸಂದರ್ಭ ಬಂದೋಬಸ್ತ್ ವ್ಯವಸ್ಥೆ ಮಾಡಿಯೂ ಅಮಾನತಿಗೆ ಒಳಪಟ್ಟಿದ್ದು, ಆತನಿಗೆ ಸಹಜವಾಗಿ ಬೇಸರ ಮೂಡಿಸಿ ಆಘಾತಕ್ಕೆ ಒಳಗಾಗಿದ್ದು ಹೌದೇ ಹೊರತು, ಯಾವುದೇ ಕಾರಣಕ್ಕೂ ನನ್ನ ಪುತ್ರ ಆತ್ಮಹತ್ಯೆಯ ಪ್ರಯತ್ನ ಮಾಡಿಲ್ಲ ಎಂದಿದ್ದಾರೆ.
ಈ ವಿಷಯವಾಗಿ ಕಪೋಲಕಲ್ಪಿತ ವಿಷಯಗಳು ಚರ್ಚೆ ಆಗುತ್ತಿರುವುದು ನಮಗೆ ಬೇಸರ ಹಾಗೂ ಮಗನ ಮರ್ಯಾದೆ, ಭವಿಷ್ಯದ ಬಗ್ಗೆ ಅತ್ಯಂತ ಆತಂಕ ಮೂಡಿಸಿದೆ. ಒಬ್ಬ ದಕ್ಷ ಪೊಲೀಸ್ ಅಧಿಕಾರಿಯಾಗಿದ್ದ ನನ್ನ ಪುತ್ರ ಪವನ್ ನೆಜ್ಜೂರ್ ಆಘಾತಕ್ಕೆ ಒಳಗಾಗಿದ್ದಾನೆ. ಅಲ್ಲಿ ನಡೆಯಬಾರದ ಘಟನೆ ನಡೆದು ಹೋಗಿದೆ. ಅದೂ ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ, ಅಲ್ಲದೆ ದಕ್ಷತೆಯಿಂದ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸದಾಗಲೂ ಅನುಭವಿಸಬೇಕಾದ ಅಮಾನತಿನ ಶಿಕ್ಷೆ ಆತನನ್ನು ಚಿಂತೆಗೀಡು ಮಾಡಿದೆ ಎಂದು ಹೇಳಿದ್ದಾರೆ.
ಅಮಾನತು ಕುರಿತು ಪರಿಶೀಲನೆ ನಡೆಸಿ
ಅದೇನಿದ್ದರೂ ನನ್ನ ಪುತ್ರ ಐಪಿಎಸ್ ಅಧಿಕಾರಿ ಪವನ್ ನೆಜ್ಜೂರ್ ಒಬ್ಬ ಸರ್ಕಾರಿ ಅಧಿಕಾರಿಯಾಗಿ ಸರ್ಕಾರದ ಆದೇಶವನ್ನು ಶಿರಸಾ ಪಾಲಿಸಿದ್ದರಲ್ಲಿ ಅನುಮಾನವೇ ಇಲ್ಲ. ಹೀಗಾಗಿ ನನ್ನ ಪುತ್ರನ ಬಗ್ಗೆ ಅನಗತ್ಯ ಹಾಗೂ ಸುಳ್ಳು ವದಂತಿಗಳನ್ನು ಹರಡಿಸದಂತೆ ಮತ್ತು ಆಘಾತಕ್ಕೆ ಒಳಗಾಗಿರುವ ಪವನ್ ನೆಜ್ಜೂರು ಅವರಿಗೆ ಕೊಂಚ ವಿಶ್ರಾಂತಿಯ ಅಗತ್ಯ ಇದೆ ಎಂಬುವುದನ್ನು ತಮ್ಮೆಲ್ಲರ ಗಮನಕ್ಕೆ ತರಬಯಸುತ್ತಾ, ಓರ್ವ ದಕ್ಷ ಅಧಿಕಾರಿಯ ತಂದೆಯಾಗಿ ನಿಮ್ಮೆಲ್ಲರಲ್ಲಿ ಮನವಿಸುವುದರ ಜೊತೆಗೆ ನನ್ನ ಪುತ್ರನ ಅಮಾನತು ಕುರಿತು ಸರ್ಕಾರ ಮರುಪರಿಶೀಲನೆ ನಡೆಸುವಂತೆ ವಿನಮ್ರವಾಗಿ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



