ರಾಜ್ಯ

ಮಾರ್ಚ್ 11 ರಿಂದ ವೈದ್ಯಕೀಯ ಸಂಘಗಳ ಮುಷ್ಕರ: ಆರೋಗ್ಯ ಸೇವೆ ವ್ಯತ್ಯಯವಾದರೆ ಕಾನೂನು ಕ್ರಮ ಎಚ್ಚರಿಕೆ ನೀಡಿದ ಸರ್ಕಾರ

ಬಹುಕಾಲದಿಂದ ಬಾಕಿ ಇರುವ ಸೇವಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವಿವಿಧ ವೈದ್ಯಕೀಯ ಸಿಬ್ಬಂದಿ ಸಂಘಗಳು ಹಂತ ಹಂತವಾಗಿ ಸೇವೆ ಸ್ಥಗಿತಗೊಳಿಸುವುದಾಗಿ ಘೋಷಿಸಿವೆ.

ಮಾರ್ಚ್ 11 ರಿಂದ ವೈದ್ಯಕೀಯ ಸಂಘಗಳ ಮುಷ್ಕರ: ಆರೋಗ್ಯ ಸೇವೆ ವ್ಯತ್ಯಯವಾದರೆ ಕಾನೂನು ಕ್ರಮ ಎಚ್ಚರಿಕೆ ನೀಡಿದ ಸರ್ಕಾರ
ದಿನೇಶ್ ಗುಂಡೂರಾವ್
Published On :

ಬೆಂಗಳೂರು: ಸರ್ಕಾರಿ ವೈದ್ಯಕೀಯ ಸಿಬ್ಬಂದಿ ಸಂಘಗಳು ಮಾರ್ಚ್ 11ರಿಂದ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿರುವ ಹಿನ್ನೆಲೆಯಲ್ಲಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆಗಳ ಲಭ್ಯತೆ ಕುರಿತು ಜನಸಾಮಾನ್ಯರಲ್ಲಿ ಆತಂಕ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕರ್ತವ್ಯಕ್ಕೆ ಗೈರಾಗುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಆಯ್ಕೆಗಳನ್ನು ಸರ್ಕಾರ ಪರಿಶೀಲಿಸುತ್ತಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಬಹುಕಾಲದಿಂದ ಬಾಕಿ ಇರುವ ಸೇವಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವಿವಿಧ ವೈದ್ಯಕೀಯ ಸಿಬ್ಬಂದಿ ಸಂಘಗಳು ಹಂತ ಹಂತವಾಗಿ ಸೇವೆ ಸ್ಥಗಿತಗೊಳಿಸುವುದಾಗಿ ಘೋಷಿಸಿವೆ. ಎರಡೂವರೆ ವರ್ಷಕ್ಕೂ ಹೆಚ್ಚು ಕಾಲ ಕಾಯುತ್ತಿದ್ದೇವೆ. ಪದೋನ್ನತಿ, ಕ್ಯಾಡರ್ ನಿಯಮಗಳು, ಹಿರಿಯ ಹುದ್ದೆಗಳ ಭರ್ತಿ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕರ್ನಾಟಕ ಸರ್ಕಾರ ವೈದ್ಯಕೀಯ ಸಂಘದ (KGMOA) ಅಧ್ಯಕ್ಷ ಡಾ. ರವೀಂದ್ರನಾಥ್ ಎಂ. ಮೇಟಿ ತಿಳಿಸಿದ್ದಾರೆ.

ಮಾರ್ಚ್ 11ರಿಂದ 15ರವರೆಗೆ ಹೊರರೋಗಿ ವಿಭಾಗ (OPD) ಸೇವೆಗಳು ಸ್ಥಗಿತಗೊಳ್ಳಲಿವೆ; ತುರ್ತು ಚಿಕಿತ್ಸೆ ಮಾತ್ರ ಮುಂದುವರಿಯಲಿದೆ. ಮಾರ್ಚ್ 16ರಿಂದ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ತುರ್ತು ಸೇವೆಗಳನ್ನು ಒಳಗೊಂಡಂತೆ ಸಂಪೂರ್ಣ ಕರ್ತವ್ಯ ಬಹಿಷ್ಕಾರ ಮಾಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.

ಸುಮಾರು 65 ಸಾವಿರದಿಂದ 80 ಸಾವಿರ ಸಿಬ್ಬಂದಿ, ಅದರಲ್ಲೂ ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಸಿಬ್ಬಂದಿ ಸೇರಿದಂತೆ, ಹಲವರು ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ. ಸರ್ಕಾರ ನಮ್ಮೆಲ್ಲರ ಮೇಲೂ ಕ್ರಮ ಕೈಗೊಳ್ಳಲಿ, ನಾವು ನಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಮೇಟಿ ಹೇಳಿದರು. ದೀರ್ಘಕಾಲದಿಂದ ಖಾಲಿ ಇರುವ ಹುದ್ದೆಗಳ ಕಾರಣ ಹಿರಿಯ ವೈದ್ಯರು ಪದೋನ್ನತಿ ಇಲ್ಲದೇ ನಿವೃತ್ತಿಯಾಗುತ್ತಿದ್ದಾರೆ ಎಂದು ಅವರು ಹೇಳಿದರು.

ರೋಗಿಗಳಿಗೆ ಉಂಟಾಗುವ ತೊಂದರೆಗಾಗಿ ಸಂಘ ಕ್ಷಮೆಯಾಚಿಸಿದ್ದರೂ, ಜವಾಬ್ದಾರಿ ಸರ್ಕಾರದದ್ದೇ ಎಂದು ಹೇಳಿದೆ. ನಾವು ದಾಸರಲ್ಲ. ಸರ್ಕಾರ ವೈದ್ಯರು ಹಾಗೂ ರೋಗಿಗಳ ಬಗ್ಗೆ ಕಾಳಜಿ ವಹಿಸಬೇಕು ಎಂದರು.

ಮುಷ್ಕರ ಘೋಷಣೆಗೆ ಪ್ರತಿಕ್ರಿಯಿಸಿದ ಸಚಿವ ದಿನೇಶ್ ಗುಂಡೂರಾವ್, ರೋಗಿಗಳ ಚಿಕಿತ್ಸೆಗೆ ಅಡ್ಡಿ ಉಂಟಾದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಅವಶ್ಯಕ ಆರೋಗ್ಯ ಸೇವೆಗಳನ್ನು ಅಸ್ತವ್ಯಸ್ತಗೊಳಿಸಿ ರೋಗಿಗಳ ಜೀವಕ್ಕೆ ಅಪಾಯ ಉಂಟುಮಾಡುವುದನ್ನು ಲಘುವಾಗಿ ತೆಗೆದುಕೊಳ್ಳಲಾಗುವುದಿಲ್ಲ ಎಂದು ಅವರು ಹೇಳಿದರು. ಕರ್ತವ್ಯಕ್ಕೆ ಗೈರಾಗುವವರ ವಿರುದ್ಧ ಕಾನೂನು ಆಯ್ಕೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.

ಆರೋಗ್ಯ ಸೇವೆ ಮಹತ್ವದ ಸಾರ್ವಜನಿಕ ಸೇವೆಯಾಗಿದ್ದು, ರೋಗಿಗಳನ್ನು ರಕ್ಷಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ. ಸೇವೆ ನಿರಂತರತೆ ಕಾಯ್ದುಕೊಳ್ಳಲು ಪರ್ಯಾಯ ವ್ಯವಸ್ಥೆಗಳನ್ನೂ ಪರಿಶೀಲಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.