ಬೆಂಗಳೂರು ನಗರ ಮಾಲಿನ್ಯ: ಶೀಘ್ರವೇ 28 ಶಾಸಕರೊಂದಿಗೆ ಸಭೆ- ಈಶ್ವರ್ ಖಂಡ್ರೆ
ವಾಯು ಗುಣಮಟ್ಟ ಸೂಚ್ಯಂಕ ಮೌಲ್ಯವು 100ದಾಟಿದರೆ ಸಂಬಂಧಿತ ಸ್ಥಳೀಯ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿ ನಿಗದಿತ ಕಾಲಮಿತಿಯಲ್ಲಿ ನಿಯಂತ್ರಿಸಲು ಸೂಚಿಸಿ. ಕ್ರಮ ವಹಿಸದಿದ್ದರೆ ನಿಯಮಾನುಸಾರ ಮೊಕದ್ದಮೆ ದಾಖಲಿಸಿ ಎಂದು ಸೂಚನೆ ನೀಡಿದರು.

ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯಂತೆ ಬೆಂಗಳೂರು ಸಹ ಮತ್ತೊಂದು ಗ್ಯಾಸ್ ಛೇಂಬರ್ ಆಗದಂತೆ ಕ್ರಮ ವಹಿಸಲು ಶೀಘ್ರವೇ ನಗರದ ಎಲ್ಲ 28 ಶಾಸಕರೊಂದಿಗೆ ಸಭೆ ನಡೆಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಅವರೊಂದಿಗೆ ಇಂದು ಉನ್ನತಾಧಿಕಾರಿಗಳ ಸಭೆ ನಡೆಸಿದ ಸಚಿವರು, ಬೆಂಗಳೂರು ನಗರದಲ್ಲಿ ವಾಯು ಮಾಲಿನ್ಯ, ಜಲ ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ಹೆಚ್ಚಾಗುತ್ತಿದ್ದು ಇದರ ನಿಯಂತ್ರಣಕ್ಕೆ ಪಕ್ಷಾತೀತವಾಗಿ ಎಲ್ಲ ಜನಪ್ರತಿನಿಧಿಗಳ ಸಹಕಾರದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಸುರೇಶ್ ಕುಮಾರ್ ವಿಷಯ ಪ್ರಸ್ತಾಪಿಸಿ ಬೆಂಗಳೂರು ನಗರದಲ್ಲಿ ರಸ್ತೆಯಲ್ಲಿನ ಧೂಳಿನಿಂದಾಗಿ ವಾಯು ಗುಣಮಟ್ಟ ಕ್ಷೀಣಿಸುತ್ತಿದ್ದು, ಮಕ್ಕಳಲ್ಲಿ ಉಸಿರಾಟದ ಸಮಸ್ಯೆ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ವೈದ್ಯರು ಬೆಂಗಳೂರು ಹೊರ ವಲಯಕ್ಕೆ ಹೋಗುವಂತೆ ಸಲಹೆ ನೀಡುತ್ತಿದ್ದಾರೆ. ವಾಯು ಗುಣಮಟ್ಟ ಕಾಪಾಡಲು ತುರ್ತು ಕ್ರಮ ಕೈಗೊಳ್ಳಬೇಕು ಎಂದರು.
ಸ್ಥಳೀಯ ಸಂಸ್ಥೆಗೆ ನೋಟಿಸ್ ನೀಡಲು ಸೂಚನೆ: ಇದಕ್ಕೆ ಸ್ಪಂದಿಸಿದ ಪರಿಸರ ಸಚಿವರು, ಈಗಾಗಲೇ ಬೆಂಗಳೂರಿನ 11 ಸ್ಥಳಗಳಲ್ಲಿ ಸ್ಥಾಪಿತ ಮತ್ತು 13 ಸಂಚಾರಿ ಘಟಕಗಳ ಮೂಲಕ ವಾಯು ಗುಣಮಟ್ಟ ಸೂಚ್ಯಂಕದ ಮೌಲ್ಯಮಾಪನ ಮಾಡಲಾಗುತ್ತಿದೆ ಎಂಬ ಮಾಹಿತಿ ನೀಡಿ. ವಾಯು ಗುಣಮಟ್ಟ ಸೂಚ್ಯಂಕ ಮೌಲ್ಯವು 100ದಾಟಿದರೆ ಸಂಬಂಧಿತ ಸ್ಥಳೀಯ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿ ನಿಗದಿತ ಕಾಲಮಿತಿಯಲ್ಲಿ ನಿಯಂತ್ರಿಸಲು ಸೂಚಿಸಿ. ಕ್ರಮ ವಹಿಸದಿದ್ದರೆ ನಿಯಮಾನುಸಾರ ಮೊಕದ್ದಮೆ ದಾಖಲಿಸಿ ಎಂದು ಸೂಚನೆ ನೀಡಿದರು.
ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸಿ ಶೀಘ್ರವೇ ಅವರ ಅಧ್ಯಕ್ಷತೆಯಲ್ಲೇ ಬೆಂಗಳೂರು ನಗರದ ಎಲ್ಲ ಜನಪ್ರತಿನಿಧಿಗಳ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ಕೆಲವೇ ದಶಕಗಳ ಹಿಂದೆ ನಿವೃತ್ತರ ಸ್ವರ್ಗ, ಹವಾನಿಯಂತ್ರಿತ ನಗರ ಎಂದು ಖ್ಯಾತಿ ಪಡೆದಿದ್ದು ಉದ್ಯಾನ ನಗರಿ ಬೆಂಗಳೂರಿನಲ್ಲೂ ಇಂದು ಬಿಸಿಲ ಬೇಗೆ ಹೆಚ್ಚುತ್ತಿದೆ. ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆ ಇದಕ್ಕೆ ಕಾರಣವಾಗಿದ್ದರೂ, ನಗರದ ಹಸಿರು ಹೊದಿಕೆ ಹೆಚ್ಚಿಸಿ ನಗರದ ವಾಯು ಗುಣಮಟ್ಟ ರಕ್ಷಿಸಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
*ಏಕ ಬಳಕೆ ಪ್ಲಾಸ್ಟಿಕ್: ಜನಜಾಗೃತಿಯೊಂದೇ ಮಾರ್ಗ: ಏಕ ಬಳಕೆ ಪ್ಲಾಸ್ಟಿಕ್ ತ್ಯಾಜ್ಯ ಸಮಸ್ಯೆ ಬೆಂಗಳೂರಿನಲ್ಲಿ ವಿಪರೀತವಾಗಿದ್ದು, ಇದರ ನಿಯಂತ್ರಣಕ್ಕೆ ಸ್ಥಳೀಯ ಸಂಸ್ಥೆಗಳು ಹಾಗೂ ಇನ್ನಿತರ ಇಲಾಖೆಗಳ ಸಹಯೋಗದಲ್ಲಿ ಜಾಗೃತ ದಳ ರಚಿಸಿ ಕ್ರಮ ವಹಿಸಿ ಎಂದು ಸೂಚಿಸಿದರು.
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಎಷ್ಟು ತ್ಯಾಜ್ಯ ಶುದ್ಧೀಕರಣ ಘಟಕಗಳಿವೆ. ಅವುಗಳ ಪೈಕಿ ಎಷ್ಟು ಕಾರ್ಯನಿರ್ವಹಿಸುತ್ತಿದೆ. ಅವುಗಳ ಸ್ಥಾಪಿತ ಸಾಮರ್ಥ್ಯ ಎಷ್ಟು ಮತ್ತು ಪ್ರಸ್ತುತ ಎಷ್ಟು ಎಂ.ಎಲ್.ಡಿ. ದ್ರವ ತ್ಯಾಜ್ಯ ಸಂಸ್ಕರಣೆ ಆಗುತ್ತಿದೆ. ಎಷ್ಟು ಎಂ.ಎಲ್.ಡಿ. ನೀರು ಸಂಸ್ಕರಣೆ ಆಗದೆ ಜಲ ಮೂಲ ಸೇರುತ್ತಿದೆ ಎಂಬ ಬಗ್ಗೆ ಪರಿಸರ ಇಲಾಖೆಯಿಂದ ಖುದ್ದು ಪರಿಶೀಲನೆ ನಡೆಸಿ 1 ತಿಂಗಳೊಳಗೆ ವರದಿ ಸಲ್ಲಿಸುವಂತೆ ತಿಳಿಸಿದರು.
ಪರಿಸರ ಇಲಾಖೆಯಿಂದ ನಗರದಲ್ಲಿ ಮಾಲಿನ್ಯ ನಿಯಂತ್ರಣಕ್ಕಾಗಿ ಜಲ ಕಾಯಿದೆ, ವಾಯು ಕಾಯಿದೆ ಅಡಿ ಕೈಗೊಂಡಿರುವ ಕ್ರಮಗಳ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



